ಜೈಪುರ: ‘ಈ ದೇಶದ ಕಾವಲುಗಾರನಷ್ಟೇ (ಪ್ರಧಾನಿ ನರೇಂದ್ರ ಮೋದಿ) ಕಳ್ಳನಲ್ಲ. ಕಾವಲುಗಾರನ ನಾಯಿಯೂ ಕಳ್ಳ’ ಎಂದು ಪಂಜಾಬ್‌ನ ವಿವಾದಿತ ಸಚಿವ, ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಟೀಕಾಪ್ರಹಾರ ನಡೆಸಿದರು.

ರಾಜಸ್ಥಾನ ವಿಧಾನಸಭೆ ಚುನಾವಣೆ ನಿಮಿತ್ತ ಅಳ್ವರ್‌ನಲ್ಲಿ ಕಾಂಗ್ರೆಸ್‌ ಪರ ಪ್ರಚಾರ ರ್ಯಾಲಿ ನಡೆಸಿದ ಸಿಧು, ‘500 ಕೋಟಿ ರು. ಮೌಲ್ಯದ ವಿಮಾನಕ್ಕೆ (ರಫೇಲ್‌ ಯುದ್ಧವಿಮಾನ) 1600 ಕೋಟಿ ರು. ಕೊಟ್ಟು ಖರೀದಿಸಲಾಗುತ್ತದೆ. ಹಾಗಿದ್ದರೆ ಬಾಕಿ 1,100 ಕೋಟಿ ರು. ಯಾರ ಜೇಬಿಗೆ ಹೋಯಿತು? ಈ ಡೀಲ್‌ನಿಂದ ಯಾರಿಗೆ ಲಾಭವಾಯಿತು? ಕಾವಲುಗಾರನ ನಾಯಿಯೂ ಕಳ್ಳರ ಕಡೆ ಇದೆ’ ಎಂದು ವ್ಯಂಗ್ಯವಾಡಿದರು.

ಈ ನಡುವೆ, ಕೋಟಾದಲ್ಲಿ ಮಾತನಾಡಿದ ಸಿಧು, ಕಾಂಗ್ರೆಸ್‌ ಪಕ್ಷವು ದೇಶಕ್ಕೆ 4 ಗಾಂಧಿಗಳನ್ನು ನೀಡಿತು. ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ. ರಾಹುಲ್‌ ಗಾಂಧಿ. ಆದರೆ ಬಿಜೆಪಿ 3 ಮೋದಿಗಳನ್ನು ನೀಡಿತು. ಅವರೇ ನೀರವ್‌ ಮೋದಿ, ಲಲಿತ್‌ ಮೋದಿ ಹಾಗೂ ನರೇಂದ್ರ ಮೋದಿ ಎಂದು ಕುಹಕವಾಡಿದರು.