ಗುರುಪೂರ್ಣಿಮಾ ಹಬ್ಬವು ಭಾರತದ ಸಂಸ್ಕೃತಿಯ ಒಂದು ಭಾಗ. ನಾಸಾ ಈ ಹೆಸರನ್ನು ನೇರವಾಗಿ ಉಪಯೋಗಿಸಿರುವುದು ಭಾರತೀಯ ಸಂಸ್ಕೃತಿಗೆ ಸಿಕ್ಕ ಗೌರವ ಮತ್ತು ಮಾನ್ಯತೆ ಎನ್ನಬಹುದು. ಈ ತಿಂಗಳ ಹುಣ್ಣಿಮೆ ಚಂದ್ರನಿಗೆ ಕರೆಯಲಾಗುವ ವಿಶೇಷ ಹೆಸರುಗಳನ್ನು ನಾಸಾ ಸ್ಮರಿಸಿದೆ.
ಬೆಂಗಳೂರು: ಆಷಾಢ ಮಾಸದ ಹುಣ್ಣಿಮೆ ದಿನವಾದ ಗುರುಪೂರ್ಣಿಮಾ ಬಗ್ಗೆ ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆ ಉಲ್ಲೇಖಿಸಿ ಗೌರವ ನೀಡಿದೆ. ನಾಸಾಮೂನ್(@NASAmoon) ಟ್ವಿಟ್ಟರ್ ಅಕೌಂಟ್'ನಲ್ಲಿ ಪೂರ್ಣಚಂದ್ರನ ಫೋಟೋ ಹಾಕಿ ಟ್ವೀಟ್ ಮಾಡಲಾಗಿದೆ. ಜುಲೈ 7ರಂದು ಮಾಡಿದ ಈ ಟ್ವೀಟ್'ಗೆ 5 ಸಾವಿರಕ್ಕೂ ಹೆಚ್ಚು ರೀಟ್ವೀಟ್ ಆಗಿದೆ. 8 ಸಾವಿರಕ್ಕೂ ಹೆಚ್ಚು ಟ್ವಿಟ್ಟಿಗರು ಲೈಕ್ ಮಾಡಿದ್ದಾರೆ. ನೂರಾರು ಮಂದಿ ಕಮೆಂಟ್ ಕೂಡ ಹಾಕಿದ್ದಾರೆ. ನಾಸಾದ ಮುಖ್ಯ ಟ್ವಿಟ್ಟರ್ ಖಾತೆಯಲ್ಲಿ ನಿನ್ನೆ ಇದನ್ನು ರೀಟ್ವೀಟ್ ಮಾಡಿದೆ.
ಏನಿದೆ ಅಂಥದ್ದು ಇದರಲ್ಲಿ?
ಗುರುಪೂರ್ಣಿಮಾ ಹಬ್ಬವು ಭಾರತದ ಸಂಸ್ಕೃತಿಯ ಒಂದು ಭಾಗ. ನಾಸಾ ಈ ಹೆಸರನ್ನು ನೇರವಾಗಿ ಉಪಯೋಗಿಸಿರುವುದು ಭಾರತೀಯ ಸಂಸ್ಕೃತಿಗೆ ಸಿಕ್ಕ ಗೌರವ ಮತ್ತು ಮಾನ್ಯತೆ ಎನ್ನಬಹುದು. ಈ ತಿಂಗಳ ಹುಣ್ಣಿಮೆ ಚಂದ್ರನಿಗೆ ಕರೆಯಲಾಗುವ ವಿಶೇಷ ಹೆಸರುಗಳನ್ನು ನಾಸಾ ಸ್ಮರಿಸಿದೆ. ಇದರಲ್ಲಿ ಗುರುಪೂರ್ಣಿಮಾ ಹೆಸರೂ ಕೂಡ ಒಂದು. ಹೇ ಮೂನ್, ಮೀಡ್ ಮೂನ್, ರೈಪ್ ಕಾರ್ನ್ ಮೂನ್, ಬಕ್ ಮೂನ್ ಹಾಗೂ ಥಂಡರ್ ಮೂನ್ ಎಂಬ ಇತರ ಹೆಸರುಗಳನ್ನೂ ಉಲ್ಲೇಖಿಸಿದೆ. ಇಲ್ಲಿ ಹೇ(Hay) ಎಂದು ಒಣ ಹುಲ್ಲು; ಮೀಡ್(Mead) ಎಂದರೆ ಜೇನುತುಪ್ಪ ನೀರು ಉಪಯೋಗಿಸಿ ಮಾಡುವ ಒಂದು ಥರದ ಸಾರಾಯಿ; ರೈಪ್ ಕಾರ್ನ್(Ripe Corn) ಎಂದರೆ ಕುಯಿಲಿಗೆ ಬಂದಿರುವ ಜೋಳ; ಬಕ್(Buck) ಅಂದರೆ ಉದ್ದುದ್ದ ಕೋಡುಗಳಿರುವ ಗಂಡು ಜಿಂಕೆ; ಥಂಡರ್(Thunder) ಅಂದರೆ ಗುಡುಗು ಸಿಡಿಲುಯುಕ್ತ ಮಳೆ. ಈ ಎಲ್ಲಾ ಹೆಸರುಗಳಿಗೂ ಜುಲೈನಲ್ಲಿ ಬರುವ ಹುಣ್ಣಿಮೆಗೂ ಸಂಬಂಧವಿದೆ.
