ಅಂಗಾರಕನ ಅಂಗಳದಲ್ಲಿ ಧೂಳೆಬ್ಬಿಸುತ್ತಿರುವ ನಾಸಾದ ಕ್ಯೂರಿಯಾಸಿಟಿ ರೋವರ್, ಆ ಗ್ರಹದ ಕುರಿತು ಕುತೂಹಲಕರ ಮಾಹಿತಿಗಳನ್ನು ಸಂಗ್ರಹಿಸಿರುವುದು ಸುಳ್ಲಲ್ಲ. ಮಂಗಳದಲ್ಲಿ ಜೀವನ ಸಾಧ್ಯವೇ ಎಂಬ ಪ್ರಶ್ನೆಗೆ ಕ್ಯೂರಿಯಾಸಿಟಿ ಉತ್ತರ ನೀಡಬಲ್ಲದು ಎಂದು ಖಗೋಳಶಾಸ್ತ್ರಜ್ಞರು ನಂಬಿದ್ದಾರೆ. ಅದಕ್ಕೆ ಇಂಬು ನೀಡುವಂತೆ ನಾಸಾ ಣಾಳೆ ನಡೆಸಲಿರುವ ಪತ್ರಿಕಾಗೋಷ್ಠಿ ಭಾರೀ ಮಹತ್ವವನ್ನು ಪಡೆದುಕೊಂಡಿದೆ.

ವಾಷಿಂಗ್ಟನ್(ಜೂ.6): ನಾಸಾದ ಪುಟಾಣಿ ಯಂತ್ರ ಕ್ಯೂರಿಯಾಸಿಟಿ ರೋವರ್, ಅಂಗಾರಕನ ಅಂಗಳ ಶೋಧಿಸುತ್ತಾ ಮುನ್ನಡೆದಿದೆ. ಬರೋಬ್ಬರಿ 2000(ಭೂಮಿಯ ಲೆಕ್ಕಾಚಾರದಲ್ಲಿ 2054)ದಿನಗಳಿಂದ ನಿತ್ಯವೂ ಮಂಗಳನ ನೆಲ ಅಗೆಯುತ್ತಾ, ಆ ಕೆಂಪುಗ್ರಹದ ಕುರಿತು ಮಾಹಿತಿ ರವಾನಿಸುತ್ತಲೇ ಇದೆ.

ಮಂಗಳ ಗ್ರಹದ ಇಂಚಿಂಚೂ ಜಾಗವನ್ನು ಶೋಧಿಸುತ್ತಿರುವ ಕ್ಯೂರಿಯಾಸಿಟಿ ಬಗ್ಗೆ ಇದೀಗ ನಾಸಾ ಭಾರೀ ಕ್ಯೂರಿಯಾಸಿಟಿ ಹುಟ್ಟಿಸುವ ಹೇಳಿಕೆ ನೀಡಿದೆ. ನಾಳೆ(ಗುರುವಾರ, ಜೂ 7) ಕ್ಯೂರಿಯಾಸಿಟಿ ಕುರಿತು ಮಹತ್ವದ ಮಾಹಿತಿ ಹೊರ ಹಾಕುವುದಾಗಿ ನಾಸಾ ಹೇಳಿದೆ.

ಹೌದು, ನಾಳೆ ಕ್ಯೂರಿಯಾಸಿಟಿ ರೋವರ್ ಕುರಿತು ಮಹತ್ವದ ಮಾಹಿತಿಯನ್ನು ನಾಸಾ ಜಗತ್ತಿನೊಂದಿಗೆ ಹಂಚಿಕೊಳ್ಳಲಿದೆ. ಹೀಗಾಗಿ ಮಧ್ಯಾಹ್ನ 2 ಗಂಟೆಗೆ ಪತ್ರಿಕಾಗೋಷ್ಠಿ ಕರೆದಿರುವ ನಾಸಾ, ಕ್ಯೂರಿಯಾಸಿಟಿ ಕುರಿತು ಜನಸಾಮಾನ್ಯರಿಂದ ಪ್ರಶ್ನಾವಳಿಗಳನ್ನೂ ಸ್ವೀಕರಿಸಲಿದೆ. ಕ್ಯೂರಿಯಾಸಿಟಿ ರೋವರ್ ಈಗಾಗಲೇ ಮಂಗಳ ಗ್ರಹದ ಕುರಿತು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದು, ಇವುಗಳಲ್ಲಿ ಕೆಲವನ್ನು ನಾಸಾ ನಾಳೆ ಬಹಿರಂಗಪಡಿಸಲಿದೆ ಎಂದು ಹೇಳಲಾಗುತ್ತಿದೆ.

ಕ್ಯೂರಿಯಾಸಿಟಿ ರೋವರ್ ಕುರಿತು ನಾಸಾ ನೀಡಿರುವ ಈ ಹೇಳಿಕೆಯನ್ನು ಖಗೋಳ ಪ್ರೀಯರು ಭಾರೀ ಕುತೂಹಲದಿಂದ ಸ್ವೀಕರಿಸಿದ್ದು, ಮಂಗಳ ಗ್ರಹದಲ್ಲಿ ಜೀವನ ಸಾಧ್ಯತೆ ಕುರಿತು ನಾಸಾ ಏನಾದರೂ ಮಾಹಿತಿ ನೀಡಲಿದೆಯೇ ಎಂಬುದನ್ನು ತಿಳಿದುಕೊಳ್ಳಲು ಕಾತರರಾಗಿದ್ದಾರೆ. ನಾಸಾ ಹಿಂದೆಂದೂ ಈ ರೀತಿ ಗೌಪ್ಯ ಸುದ್ದಗೋಷ್ಠಿ ನಡೆಸುವುದಾಗಿ ಹೇಳದೇ ಇರುವುದೂ ಕುತೂಹಲ ಹೆಚ್ಚಾಗಲು ಕಾರಣವಾಗಿದೆ.