ಈಗಾಗಲೇ ದೇಶದಲ್ಲಿ ಹಲವು ರೀತಿಯ ಯೋಜನೆಗಳನ್ನು ಜಾರಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಬೃಹತ್ ಯೋಜನೆಯೊಂದಕ್ಕೆ ಚಾಲನೆ ನೀಡಲಿದ್ದಾರೆ.

ಸಿಂಗಾಪುರ: ಬ್ಯಾಂಕ್‌ ಖಾತೆಯೇ ಹೊಂದಿಲ್ಲದ ಕೋಟ್ಯಂತರ ಜನರನ್ನು ಬ್ಯಾಂಕಿಂಗ್‌ ಜಾಲಕ್ಕೆ ಸೇರ್ಪಡೆಗೊಳಿಸಲು ‘ಜನಧನ’ ಅನುಷ್ಠಾನಗೊಳಿಸಿ ಯಶಸ್ವಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಅಂತಹುದೇ ವಿಶ್ವವ್ಯಾಪಿಗೆ ಯೋಜನೆಗೆ ಬುಧವಾರ ಚಾಲನೆ ನೀಡಲಿದ್ದಾರೆ. 

ಬ್ಯಾಂಕ್‌ಗಳಿಂದ ದೂರವೇ ಉಳಿದಿರುವ ಭಾರತ ಸೇರಿದಂತೆ 23 ದೇಶಗಳ 200 ಕೋಟಿ ಜನರನ್ನು ಬ್ಯಾಂಕಿಂಗ್‌ ವಲಯದ ವ್ಯಾಪ್ತಿಗೆ ತರುವ ತಂತ್ರಜ್ಞಾನ ಆಧರಿತ ಯೋಜನೆಯನ್ನು ಸಿಂಗಾಪುರದಲ್ಲಿ ಉದ್ಘಾಟಿಸಲಿದ್ದಾರೆ. ಬರೋಬ್ಬರಿ 30 ಸಾವಿರ ಜನರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಬುಧವಾರ ಹಾಗೂ ಗುರುವಾರ ಸಿಂಗಾಪುರ ಪ್ರವಾಸ ಕೈಗೊಳ್ಳುತ್ತಿರುವ ಮೋದಿ ಅವರು, ಹಣಕಾಸು ಸೇವೆಗೆ ಸಂಬಂಧಿದ ತಂತ್ರಜ್ಞಾನ ಕಂಪನಿಗಳ ಸಮ್ಮೇಳನ ‘ಫಿನ್‌ಟೆಕ್‌’ನಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ಯಾಂಕ್‌ ಖಾತೆ ಹೊಂದಿಲ್ಲದ ಜನರಿಗಾಗಿ ‘ಎಪಿಕ್ಸ್‌’ ಎಂಬ ಬ್ಯಾಂಕಿಂಗ್‌ ತಂತ್ರಜ್ಞಾನವನ್ನು ಬಿಡುಗಡೆ ಮಾಡಲಿದ್ದಾರೆ.

ಬೋಸ್ಟನ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ವರ್ಚುಸಾ ಎಂಬ ಕಂಪನಿ ‘ಎಪಿಕ್ಸ್‌’ ತಂತ್ರಜ್ಞಾನ ರೂಪಿಸಿದ್ದು, ಹೈದರಾಬಾದ್‌, ಕೊಲಂಬೋ ಹಾಗೂ ಲಂಡನ್‌ನ ಸಾಫ್ಟ್‌ವೇರ್‌ ಪರಿಣತರು ಇದನ್ನು ವಿನ್ಯಾಸಗೊಳಿಸಿದ್ದಾರೆ.

ಮೋದಿ ಭಾಗವಹಿಸುವ ಕಾರ್ಯಕ್ರಮದಲ್ಲಿ 30 ಸಾವಿರ ಮಂದಿ ಪಾಲ್ಗೊಳ್ಳಲಿದ್ದು, ಇದು ವಿಶ್ವದಲ್ಲೇ ಬೃಹತ್‌ ಸಮಾರಂಭ ಎನಿಸಿಕೊಳ್ಳಲಿದೆ. ಇದೇ ವೇಳೆ ವಿವಿಧ ಸಭೆಗಳಲ್ಲಿ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ.