ನವದೆಹಲಿ(ಮೇ.30): ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯದೊಂದಿಗೆ ಇಡೀ ವಿಶ್ವದ ಗಮನ ಸೆಳೆದಿರುವ ನರೇಂದ್ರ ಮೋದಿ, ದೇಶದ 15ನೇ ಪ್ರಧಾನಮಂತ್ರಿಯಾಗಿ ಇಂದು ಅಧಿಕಾರ ಸ್ವೀಕರಿಸಿದರು. 

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನರೇಂದ್ರ ಮೋದಿ ಅವರಿಗೆ ಪ್ರಮಾಣವಚನ ಬೋಧಿಸಿದರು.

ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ಮೋದಿ, ಸಂವಿಧಾನಬದ್ಧವಾಗಿ ದೇಶವನ್ನು ಮುನ್ನಡೆಸುವ ವಾಗ್ದಾನ ಮಾಡಿದರು. 

ರಾಷ್ಟ್ರಪತಿ ಭವನದ ಮುಂಭಾಗದ ಆವರಣದಲ್ಲಿ ನಡೆದ ಅದ್ದೂರಿ ಸಮಾರಂಭಕ್ಕೆ ಸುಮಾರು 6,500ಕ್ಕೂ ಅಧಿಕ ಗಣ್ಯರು ಸಾಕ್ಷಿಯಾದರು. ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಮುರುಳಿ ಮನೋಹರ್ ಜೋಷಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸದ್ಗುರು ಜಗ್ಗಿ ವಾಸುದೇವ್, ಪೇಜಾವರ ಶ್ರೀ, ಮುಖೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು.

ಇನ್ನು ಪ್ರಧಾನಿ ಮೋದಿ ಜೊತೆ ಸುಮಾರು ಕೇಂದ್ರ ಸಚಿವ ಸಂಪುಟದ ಸಹೋದ್ಯೋಗಿಗಳು ಪ್ರಮಾಣವಚನ ಸ್ವೀಕರಿಸಿದ್ದು, ಪ್ರಮುಖವಾಗಿ ಅಮಿತ್ ಶಾ, ಸ್ಮೃತಿ ಇರಾನಿ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಪಿಯೂಷ್ ಗೋಯೆಲ್, ರವಿಶಂಕರ್ ಪ್ರಸಾದ್, ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಹಲವರು ಪ್ರತಿಜ್ಞಾವಿಧಿ ಸ್ವೀಕರಿಸಿದರು.