ಹುಬ್ಬಳ್ಳಿ :  ‘ಈ ನೆಲ ಕಲೆ, ಸಾಹಿತ್ಯ, ತಪಸ್ಸು, ತ್ಯಾಗ ಸಂಸ್ಕೃತಿಯ ಇತಿಹಾಸ ಪರಂಪರೆಯನ್ನು ಹೊಂದಿದ ಪುಣ್ಯಭೂಮಿ. ಈ ನಾಡಿಗೆ ಬಂದಿರುವುದು ರೋಮಾಂಚನ ಉಂಟುಮಾಡಿದೆ!’

ಹೀಗೆ ಕನ್ನಡನಾಡನ್ನು ಹೊಗಳಿದ್ದು ಪ್ರಧಾನಿ ಮೋದಿ. ಹುಬ್ಬಳ್ಳಿ ಸಮಾವೇಶದ ಮೂಲಕ ಭಾನುವಾರ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಕರ್ನಾಟಕದಲ್ಲಿ ಚಾಲನೆ ನೀಡಿದ ಅವರು ಕನ್ನಡದಲ್ಲಿ ಭಾಷಣ ಆರಂಭಿಸಿದರು.

ಸಿದ್ಧಾರೂಢ ಸ್ವಾಮೀಜಿ, ಮೂರು ಸಾವಿರ ಮಠದ ಗುರುಸಿದ್ಧಯೋಗೀಂದ್ರ ಸ್ವಾಮೀಜಿ, ಗದುಗಿನ ವೀರನಾರಾಯಣ ಸ್ವಾಮೀಜಿಗಳಿಗೆ ನನ್ನ ನಮನಗಳು ಎಂದ ಅವರು, ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಬಡ ಮಕ್ಕಳಿಗೆ ಅನ್ನ, ವಿದ್ಯೆ ನೀಡುವ ಮೂಲಕ ದೇಶದ ಗೌರವವನ್ನು ಹೆಚ್ಚಿಸಿದವರು. ಅವರಿಗೂ ನನ್ನ ನಮನಗಳು ಎಂದು ನುಡಿನಮನ ಸಲ್ಲಿಸಿದರು.

ಬ್ರಿಟಿಷರ ಸಿಂಹ ಸ್ವಪ್ನಳಾಗಿದ್ದ ವೀರರಾಣಿ ಕಿತ್ತೂರು ಚನ್ನಮ್ಮ, ಭಕ್ತ ಶ್ರೇಷ್ಠ ಕನಕದಾಸರು, ಕುಮಾರವ್ಯಾಸ, ದ.ರಾ. ಬೇಂದ್ರೆ, ಸಂಗೀತ ದಿಗ್ಗಜೆ ಗಂಗೂಬಾಯಿ ಹಾನಗಲ್‌, ಭೀಮಸೇನ ಜೋಶಿ, ಕುಮಾರ ಗಂಧರ್ವ ಮತ್ತಿತರ ಮಹನೀಯರನ್ನೂ ಮೋದಿ ಸ್ಮರಿಸಿದರು.

ಇಲ್ಲಿ ಜನಸಂಘವನ್ನು ಕಟ್ಟಿದ ಗೋಖಲೆ, ಎಂ.ಜಿ. ಜರತಾರಘರ, ಎಸ್‌.ಎಸ್‌. ಶೆಟ್ಟರ್‌ ಅವರಿಗೂ ನನ್ನ ನಮನಗಳು. ಬಿಜೆಪಿ ಈ ಮಟ್ಟಿಗೆ ಬೆಳೆಯಬೇಕೆಂದರೆ ಈ ಎಲ್ಲ ನಾಯಕರ ಶ್ರಮ ಸ್ಮರಣೀಯ ಎಂದು ನಮನ ಸಲ್ಲಿಸಿದ ಅವರು, ಗಂಡು ಮೆಟ್ಟಿನ ನಾಡಿದು ಎಂದು ಹುಬ್ಬಳ್ಳಿಯನ್ನು ಬಣ್ಣಿಸಿದರು.