ತನ್ನ ಭೌಗೋಳಿಕ ವೈಶಿಷ್ಟ್ಯತೆಯಿಂದಾಗಿ ಗುಜರಾತ್'ನ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ರಸ್ತೆ ಮೂಲಕ ಸಂಚರಿಸಲು ಬಹಳ ಶ್ರಮ ಪಡಬೇಕಿತ್ತು. ಈಗ ಫೆರ್ರಿ ಸೇವೆಯಿಂದ ಸಂಚಾರ ಸ್ವಲ್ಪಮಟ್ಟಿಗೆ ಸುಗಮಗೊಳ್ಳಲಿದೆ. ಎಲ್ಲಾ ಹಂತದ ಯೋಜನೆಗಳು ಪೂರ್ಣಗೊಂಡಾಗ ಕಚ್'ನಿಂದ ಜಾಮ್'ನಗರ್, ರಾಜಕೋಟ್ ಮತ್ತು ಪೋರ್'ಬಂದರ್ ನಡುವಿನ ಅಂತರ ತಗ್ಗಲಿದೆ.
ಭಾವನಗರ್(ಅ. 22): ಗುಜರಾತ್'ನಲ್ಲಿ ಬಹಳ ವರ್ಷದಿಂದ ಬೇಡಿಕೆಯಲ್ಲಿದ್ದ ರೋ-ರೋ ಫೆರ್ರಿ ಸೇವೆಯ ಮೊದಲ ಹಂತದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ್ದಾರೆ. ರಸ್ತೆ ಸಾರಿಗೆ ವಾಹನಗಳನ್ನು ದೋಣಿ ಮೂಲಕ ಸಾಗಿಸುವ ರೋ-ರೋ(ರೋಲ್ ಆನ್ ರೋಲ್ ಆಫ್) ಸೇವೆಯು ವಿಶ್ವದರ್ಜೆಯದ್ದೆನ್ನಲಾಗಿದೆ. ದಕ್ಷಿಣ ಏಷ್ಯಾದಲ್ಲೇ ಇಂಥದ್ದು ಇದೇ ಮೊದಲಾಗಿದೆ. 614 ಕೋಟಿ ರೂ ರೋ-ರೋ ಯೋಜನೆಯು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸಾಗರಮಾಲಾ ಯೋಜನೆಯ ಒಂದು ಸಣ್ಣ ಭಾಗವಾಗಿದೆ.
ಭಾವನಗರ ಜಿಲ್ಲೆಯ ಘೋಗಾ ಬಂದರು ಹಾಗೂ ಭರೂಚ್ ಜಿಲ್ಲೆಯ ದಹೆಜ್ ಬಂದರುಗಳ ನಡುವೆ ಈ ದೋಣಿ ಸಂಚರಿಸಲಿದೆ. ಈ ಮೂಲಕ ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರ ಪ್ರಾಂತ್ಯಕ್ಕೆ ಈ ಮಾರ್ಗವು ಕೊಂಡಿಯಾಗಲಿದೆ. ರೋ-ರೋ ಸೇವೆಯಿಂದ ಇವೆರಡು ಪ್ರದೇಶಗಳ ನಡುವಿನ ಸಂಚಾರದ ಅವಧಿಯು ಹಲವು ಗಂಟೆಗಳಷ್ಟು ಕಡಿಮೆಗೊಳ್ಳಲಿದೆ. ಘೋಘಾದಿಂದ ಭರೂಚ್'ಗೆ ರಸ್ತೆ ಮೂಲಕ ಹೋಗಬೇಕಾದರೆ 7-8 ಗಂಟೆ ಆಗುತ್ತಿತ್ತು. ರೋ-ರೋ ದೋಣಿ ಮೂಲಕ ಕೇವಲ ಒಂದು ಅಥವಾ ಒಂದೂವರೆ ಗಂಟೆಯಲ್ಲಿ ಪ್ರಯಾಣಿಸಬಹುದು.
ಕರ್ನಾಟಕದ ಸಿಗಂಧೂರು ಸೇರಿದಂತೆ ಭಾರತದಾದ್ಯಂತ ಹಲವು ಕಡೆ ರೋ-ರೋ ಹಾಗೂ ಲೋ-ಲೋ ದೋಣಿ ಸೇವೆಗಳು ಚಾಲ್ತಿಯಲ್ಲಿವೆ. ಆದರೆ, ಗುಜರಾತ್'ನಲ್ಲಿ ಆರಂಭಗೊಂಡ ಈ ವಿಶ್ವದರ್ಜೆಯ ದೋಣಿಯಲ್ಲಿ ಕಾರು, ಬಸ್ಸುಗಳಂಥ 100 ವಾಹನಗಳು ಹಾಗೂ 250 ಪ್ರಯಾಣಿಕರಿಗೆ ಸ್ಥಳಾವಕಾಶವಿರುತ್ತದೆ. ಮುಂದಿನ ಹಂತದ ಯೋಜನೆಗಳಲ್ಲಿ ಖಂಬಟ್ ಮತ್ತು ಕಚ್ ಕೊಲ್ಲಿಯ ಬೇರೆ ಬೇರೆ ಸ್ಥಳಗಳನ್ನು ರೋ-ರೋ ದೋಣಿಗಳು ಸಂಪರ್ಕಿಸಲಿವೆ.
ರೋ-ರೋ ಸೇವೆಯು ಗುಜರಾತ್'ನ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ತನ್ನ ಭೌಗೋಳಿಕ ವೈಶಿಷ್ಟ್ಯತೆಯಿಂದಾಗಿ ಗುಜರಾತ್'ನ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ರಸ್ತೆ ಮೂಲಕ ಸಂಚರಿಸಲು ಬಹಳ ಶ್ರಮ ಪಡಬೇಕಿತ್ತು. ಈಗ ಫೆರ್ರಿ ಸೇವೆಯಿಂದ ಸಂಚಾರ ಸ್ವಲ್ಪಮಟ್ಟಿಗೆ ಸುಗಮಗೊಳ್ಳಲಿದೆ. ಎಲ್ಲಾ ಹಂತದ ಯೋಜನೆಗಳು ಪೂರ್ಣಗೊಂಡಾಗ ಕಚ್'ನಿಂದ ಜಾಮ್'ನಗರ್, ರಾಜಕೋಟ್ ಮತ್ತು ಪೋರ್'ಬಂದರ್ ನಡುವಿನ ಅಂತರ ತಗ್ಗಲಿದೆ. ಭಾವನಗರದಿಂದ ಭರೂಚ್, ಸೂರತ್, ನವಸಾರಿ, ವಲ್ಸದ್ ಮತ್ತು ದಾಂಗ್ಸ್ ಮೊದಲಾದ ಪ್ರದೇಶಗಳಿಗೆ ಇನ್ನಷ್ಟು ಬೇಗ ತಲುಪಬಹುದಾಗಿದೆ. ಇದರಿಂದ ಗುಜರಾತ್'ನ ವ್ಯಾಪಾರ ವಹಿವಾಟಿಗೆ ಪುಷ್ಟಿ ಸಿಗಲಿದೆ. ಆ ಮೂಲಕ ಆರ್ಥಿಕತೆಗೆ ಪುಷ್ಟಿ ಸಿಗಲಿದೆ.
ಕೇಂದ್ರದ ಸಾಗರಮಾಲಾ ಯೋಜನೆಯ ಆಶಯ ಕೂಡ ಇದೇ ಆಗಿದೆ. ಬಂದರು ಅಭಿವೃದ್ಧಿ ಮೂಲಕ ಆರ್ಥಿಕತೆಗೆ ಪುಷ್ಟಿ ಸಿಗುತ್ತದೆಂಬ ಕಲ್ಪನೆಯ ಆಧಾರಯದ ಮೇಲೆ ಸಾಗರಮಾಲಾ ಯೋಜನೆ ರೂಪುಗೊಂಡಿದೆ. ಅದರಂತೆ, ಭಾರತದಲ್ಲಿ 7,500 ಕಿಮೀ ಉದ್ದದ ಕರಾವಳಿ ಸಾಲು ಇದೆ. ಇಲ್ಲಿ 14 ಸಾವಿರ ಕಿಮೀಗೂ ಹೆಚ್ಚು ಉದ್ದದ ಜಲಮಾರ್ಗಗಳನ್ನು ರಚಿಸುವ ಅವಕಾಶವಿದೆ. ಆ ಮೂಲಕ ಭಾರತದ ಸಾರಿಗೆ ವ್ಯವಸ್ಥೆಗೆ ಹೊಸ ಭಾಷ್ಯ ಬರೆಯಬಹುದಾಗಿದೆ. ತಜ್ಞರ ಪ್ರಕಾರ, ಸಾಗಮಾಲಾ ಯೋಜನೆ ಪೂರ್ಣಗೊಂಡರೆ ದೇಶದ ಜಿಡಿಪಿ ಶೇ.2ರಷ್ಟು ಹೆಚ್ಚಳವಾಗುವ ಅಂದಾಜಿದೆ.
