ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ 2019ರ ಲೋಕಸಭಾ ಚುನಾವಣೆ ಗೆಲ್ಲಲು ಇದೀಗ ಹೊಸ ಪ್ಲಾನ್ ಒಂದನ್ನು ಮಾಡಿಕೊಂಡಿದೆ. ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಣೆಯ ಬೆನ್ನಲ್ಲೇ ಹೊಸ ಚಿಂತನೆ ಮಾಡಿದೆ. 

ನವದೆಹಲಿ : ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಣೆಯ ಬೆನ್ನಲ್ಲೇ ಬಿಜೆಪಿ ಎಚ್ಚೆತ್ತಂತೆ ತೋರುತ್ತಿದ್ದು, ಈ ಎಲ್ಲ ರಾಜ್ಯಗಳಲ್ಲಿ ಪಕ್ಷದ ಸೋಲಿಗೆ ರೈತರ ಸಮಸ್ಯೆಗಳು ಕಾರಣ ಎಂಬುದನ್ನು ಮನಗಂಡಂತಿದೆ. ಅದಕ್ಕೆಂದೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿಕೊಂಡಿರುವ 4 ಲಕ್ಷ ಕೋಟಿ ರುಪಾಯಿ ಸಾಲ ಮನ್ನಾ ಮಾಡಲು ಚಿಂತನೆಯನ್ನು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದಾರೆ ಎಂಬ ಮಹತ್ವದ ಮಾಹಿತಿ ಲಭಿಸಿದೆ. 2019ರ ಚುನಾವಣೆ ಗೆಲ್ಲಲು ಈ ರೀತಿ ಹೊಸ ಬಾಣ ಹೂಡುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಿಸರ್ವ್ ಬ್ಯಾಂಕ್‌ನಲ್ಲಿರುವ ಮೀಸಲು ನಿಧಿ ಬಳಕೆ

ರೈತರ ಸಾಲ ಮನ್ನಾ ಮಾಡೋದಕ್ಕೆ ಹಣ ಹೊಂದಿಸುವುದು ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಬಹುದು. ಆದರೆ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿರುವ ಮೀಸಲು ನಿಧಿಯನ್ನು ಇದಕ್ಕೆ ಬಳಸಿಕೊಳ್ಳಬಹುದು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಆರ್‌ಬಿಐನಲ್ಲಿನ ಮೀಸಲು ನಿಧಿಯಲ್ಲಿ 3.6 ಲಕ್ಷ ಕೋಟಿ ರುಪಾಯಿ ಬೇಕು ಎಂಬ ಇರಾದೆಯನ್ನು ಸರ್ಕಾರ ಇತ್ತೀಚೆಗೆ ವ್ಯಕ್ತಪಡಿಸಿತ್ತು. ಆದರೆ ಇದಕ್ಕೆ ಆರ್‌ಬಿಐನ ನಿರ್ಗಮಿತ ಗವರ್ನರ್‌ ಊರ್ಜಿತ್‌ ಪಟೇಲ್‌ ಒಪ್ಪಿರಲಿಲ್ಲ. ಅತ್ಯಂತ ಆಪತ್ಕಾಲೀನ ಸಂದರ್ಭದಲ್ಲಿ ಬಳಕೆಯಾಗಬೇಕಾದ ಈ ಹಣವನ್ನು ನೀಡಲಾಗದು ಎಂದು ಖಂಡತುಂಡವಾಗಿ ಹೇಳಿದ್ದರು ಎನ್ನಲಾಗಿದ್ದು, ಇದು ಸರ್ಕಾರ-ಆರ್‌ಬಿಐ ತಿಕ್ಕಾಟಕ್ಕೆ ಕಾರಣವಾಗಿತ್ತು.

ಆದರೆ ಈಗ ಊರ್ಜಿತ್‌ ಪಟೇಲ್‌ ಆರ್‌ಬಿಐಗೆ ರಾಜೀನಾಮೆ ನೀಡಿದ್ದು, ಇವರ ಬದಲು ಸರ್ಕಾರಕ್ಕೆ ಅತ್ಯಂತ ಆಪ್ತರಾದ ಶಕ್ತಿಕಾಂತ ದಾಸ್‌ ಅವರ ನೇಮಕವಾಗಿದೆ. ಹೀಗಾಗಿ ಆರ್‌ಬಿಐ ಮೀಸಲು ನಿಧಿಯಲ್ಲಿರುವ ಒಟ್ಟು ಮೊತ್ತದ ಪೈಕಿ 4 ಲಕ್ಷ ಕೋಟಿ ರು.ಗಳನ್ನು ಸರ್ಕಾರವು ರೈತರ ಸಾಲ ಮನ್ನಾಗೆ ಬಳಸಿಕೊಂಡರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.