ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಮೋ ಆ್ಯಪ್‌ ಮೂಲಕ ಬಳಕೆದಾರರ ಮಾಹಿತಿಯನ್ನು ಅಮೆರಿಕದ ಕಂಪನಿಗಳ ಜೊತೆ ಹಂಚಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಮೋ ಆ್ಯಪ್‌ ಮೂಲಕ ಬಳಕೆದಾರರ ಮಾಹಿತಿಯನ್ನು ಅಮೆರಿಕದ ಕಂಪನಿಗಳ ಜೊತೆ ಹಂಚಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

‘ಹಾಯ್‌! ನನ್ನ ಹೆಸರು ನರೇಂದ್ರ ಮೋದಿ. ನಾನು ಭಾರತದ ಪ್ರಧಾನಮಂತ್ರಿ. ನೀವು ನನ್ನ ಅಧಿಕೃತ ಆ್ಯಪ್‌ಗೆ ಲಾಗಿನ್‌ ಆದರೆ ನಾನು ನಿಮ್ಮ ಎಲ್ಲಾ ಮಾಹಿತಿಯನ್ನು ಅಮೆರಿಕದ ಕಂಪನಿಗಳ ಸ್ನೇಹಿತರಿಗೆ ನೀಡುತ್ತೇನೆ’ ಎಂದು ರಾಹುಲ್‌ ಗಾಂಧಿ ವ್ಯಂಗ್ಯವಾಗಿ ಟ್ವೀಟ್‌ ಮಾಡಿದ್ದಾರೆ.

ಮೋದಿ ಮೊಬೈಲ್‌ ಆ್ಯಪ್‌ನ ವೈಯಕ್ತಿಕ ದತ್ತಾಂಶಗಳಾದ ಇಮೇಲ್‌ ಐಡಿ, ಫೋಟೋಗಳು, ಲಿಂಗ ಮತ್ತು ಬಳಕೆದಾರರ ಹೆಸರುಗಳನ್ನು ಮೂರನೇ ವ್ಯಕ್ತಿಯೊಬ್ಬರಿಗೆ ಕಳುಹಿಸಲಾಗಿದೆ ಎಂದು ಫಾನ್ಸ್‌ನ ಹ್ಯಾಕರ್‌ವೊಬ್ಬರು ಸರಣಿ ಟ್ವೀಟ್‌ಗಳ ಮೂಲಕ ಆರೋಪಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ರಾಹುಲ್‌ ಬಹಿರಂಗಪಡಿಸಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್‌, ಕೇಂಬ್ರಿಜ್‌ ಅನಾಲಿಟಿಕಾ ಕಂಪನಿಯನ್ನು ಬಳಸಿಕೊಂಡಿದೆ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ, ರಾಹುಲ್‌ ಹೇಳಿಕೆ ಹೊರಬಿದ್ದಿದೆ.

ಬಿಜೆಪಿ ತಿರುಗೇಟು: ಆದರೆ ರಾಹುಲ್‌ ಆರೋಪವನ್ನು ಬಿಜೆಪಿ ಸ್ಪಷ್ಟವಾಗಿ ತಳ್ಳಿಹಾಕಿದೆ. ‘ಕಾಂಗ್ರೆಸ್‌ ಅಧ್ಯಕ್ಷರಿಂದ ಇದಕ್ಕಿಂತ ಹೆಚ್ಚಿನದನ್ನು ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ನಮೋ ಆ್ಯಪ್‌ ಒಂದು ವಿಶಿಷ್ಟಆ್ಯಪ್‌. ಬಳಕೆದಾರರ ಯಾವುದೇ ಮಾಹಿತಿಯನ್ನು ಬಯಸದೆಯೇ ಗೆಸ್ಟ್‌ ಮೋಡ್‌ನಲ್ಲಿ ಬಳಸಲು ಅವಕಾಶ ಮಾಡಿಕೊಡುತ್ತದೆ. ಸಂದರ್ಭೋಚಿತ ಮತ್ತು ವಿಷಯಾಧರಿತ ಸಂದರ್ಭಗಳಲ್ಲಿ ಮಾತ್ರವೇ ಅದು ಗ್ರಾಹಕರ ಮಾಹಿತಿ ಬಯಸುತ್ತದೆ.

ಹೀಗಾಗಿ ರಾಹುಲ್‌ ಆರೋಪ ಸುಳ್ಳು. ಈ ಸಂದರ್ಭದಲ್ಲಿ ನೀವು ಕೂಡಾ ನಮೋ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ಭಾರತದಲ್ಲಿ ಏನೆಲ್ಲಾ ಒಳ್ಳೆಯ ಕೆಲಸ ಆಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಿ’ ಎಂದು ತಿರುಗೇಟು ನೀಡಿದೆ.