ಬೆಂಗಳೂರು[ಸೆ.27]: ಹಿಂದೆ ತಮ್ಮ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಅಂದಿನ ರಾಜ್ಯಾಧ್ಯಕ್ಷರಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಪಕ್ಷದ ಸ್ಥಾನದಿಂದ ವಜಾಗೊಳಿಸಿದ್ದ ಇಬ್ಬರು ಮುಖಂಡರಿಗೆ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು ಮತ್ತೆ ಸ್ಥಾನ ದಯಪಾಲಿಸುವ ಮೂಲಕ ಟಾಂಗ್‌ ನೀಡಿದ್ದಾರೆ.

ಮಾಜಿ ಶಾಸಕರಾದ ಎಂ.ಬಿ.ಭಾನುಪ್ರಕಾಶ್‌ ಮತ್ತು ನಿರ್ಮಲ್‌ ಕುಮಾರ್‌ ಸುರಾನಾ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಿ ಗುರುವಾರ ಕಟೀಲ್‌ ಅವರು ಆದೇಶ ಪತ್ರ ಹೊರಡಿಸಿದ್ದಾರೆ.

ರಾಜ್ಯಾಧ್ಯಕ್ಷ ಕಟೀಲ್‌ ಅವರ ಈ ಕ್ರಮ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪಾಳೆಯದಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ಯಡಿಯೂರಪ್ಪ ಅವರನ್ನು ಹಣಿಯಬೇಕು ಎಂಬ ಉದ್ದೇಶದಿಂದಲೇ ಈ ನೇಮಕ ಮಾಡಲಾಗಿದೆ ಎಂಬ ಕಿಡಿ ಕಾಣಿಸಿಕೊಂಡಿದೆ.

ಭಾನುಪ್ರಕಾಶ್‌ ಮತ್ತು ಸುರಾನಾ ಅವರು ಪಕ್ಷದ ಹಾಲಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಎಲ್‌.ಸಂತೋಷ್‌ ಅವರ ಆಪ್ತರು. ಆಗ ಸಂತೋಷ್‌ ಅವರು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಪದಾಧಿಕಾರಿಗಳ ನೇಮಕ ಕುರಿತಂತೆ ಅಸಮಾಧಾನ ಹೆಚ್ಚಾದಾಗ ಮತ್ತು ಪಕ್ಷದ ಹಿರಿಯ ನಾಯಕ ಕೆ.ಎಸ್‌.ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸ್ಥಾಪಿಸಿದ ಬಳಿಕ ಭಾನುಪ್ರಕಾಶ್‌ ಮತ್ತು ಸುರಾನಾ ಅವರು ಯಡಿಯೂರಪ್ಪ ಅವರ ನಡೆಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದರು. ಇದರಿಂದ ಕ್ರುದ್ಧಗೊಂಡ ಯಡಿಯೂರಪ್ಪ ಅವರು ಅವರಿಬ್ಬರನ್ನೂ ಪಕ್ಷದ ಸ್ಥಾನದಿಂದ ವಜಾಗೊಳಿಸಿದ್ದರು.

ಆದರೆ, ಈಗ ಹಾಲಿ ರಾಜ್ಯಾಧ್ಯಕ್ಷರಾಗಿರುವ ನಳಿನ್‌ಕುಮಾರ್‌ ಕಟೀಲ್‌ ಅವರೂ ಸಂತೋಷ್‌ ಅವರ ಆಪ್ತರೇ. ಗುರುವಾರ ಉಭಯ ಮುಖಂಡರನ್ನು ಮತ್ತೆ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಿ ಆದೇಶ ಪತ್ರ ಹೊರಡಿಸುವ ಮೂಲಕ ಯಡಿಯೂರಪ್ಪ ಬಣಕ್ಕೆ ಶಾಕ್‌ ನೀಡಿದ್ದಾರೆ. ಈ ಮುಖಂಡರಿಬ್ಬರ ನೇಮಕ ಮಾಡಿಕೊಳ್ಳುವ ಬಗ್ಗೆ ಯಡಿಯೂರಪ್ಪ ಬಣಕ್ಕೆ ಸುಳಿವೂ ಇರಲಿಲ್ಲ ಎನ್ನಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮಹೇಶ್‌ ಟೆಂಗಿನಕಾಯಿ ಅವರನ್ನು ನೇಮಿಸಲಾಗಿತ್ತು. ಈ ಮಹೇಶ್‌ ಕೂಡ ಯಡಿಯೂರಪ್ಪ ವಿರೋಧಿ ಗುಂಪಿನೊಂದಿಗೆ ಗುರುತಿಸಿಕೊಂಡಿದ್ದರು. ಆಗಲೂ ಯಡಿಯೂರಪ್ಪ ಬಣ ಆಕ್ರೋಶಗೊಂಡಿತ್ತು. ಈಗ ಗಾಯದ ಮೇಲೆ ಬರೆ ಎನ್ನುವಂತೆ ಮತ್ತಿಬ್ಬರು ವಿರೋಧಿಗಳಿಗೆ ಮಣೆ ಹಾಕಿರುವುದು ಮುಂಬರುವ ದಿನಗಳಲ್ಲಿ ಮತ್ತಷ್ಟುಮುನಿಸಿಗೆ ಕಾರಣವಾಗಬಹುದು ಎಂಬ ಅನುಮಾನ ಮೂಡಿಸಿದೆ.