, ‘ವಿದ್ಯುತ್ ಇಲ್ಲ ಎಂದು ನೀನು ಹೇಳುತ್ತಿದ್ದೀಯಾ. ನಿನಗೆ ಕಣ್ಣು ಕಾಣುವುದಿಲ್ಲವೇ ಅಥವಾ ಏನು,’ ಎಂದು ಪ್ರಶ್ನಿಸಿದ್ದಾರೆ.
ಹೈದರಾಬಾದ್(ಜು.26): ಆಂಧ್ರ ಪ್ರದೇಶದ ಆಡಳಿತರೂಢ ಟಿಡಿಪಿ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ತೋರಿದ ವ್ಯಕ್ತಿಯೊಬ್ಬರಿಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಾರ್ವಜನಿಕರ ಸಭೆಯಲ್ಲೇ ಏಕವಚನದಲ್ಲಿ ಧಮ್ಕಿ ಹಾಕಿದ ಘಟನೆ ಮಂಗಳವಾರ ನಡೆದಿದೆ.
ಕರ್ನೂಲ್ ಜಿಲ್ಲೆಯ ನಂದ್ಯಾಲಾ ವಿಧಾನಸಭಾ ಕ್ಷೇತ್ರದಲ್ಲಿನ ಸಾರ್ವಜನಿಕ ಸಭೆಯಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಪೂರೈಕೆ ಸೇರಿದಂತೆ ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಚಂದ್ರಬಾಬು ನಾಯ್ಡು ವಿವರ ನೀಡುತ್ತಿದ್ದರು. ಇದೇ ವೇಳೆ ಅನಿಯಮಿತ ವಿದ್ಯುತ್ ಪೂರೈಕೆ ಬಗ್ಗೆ ವ್ಯಕ್ತಿಯೊಬ್ಬರು ದೂರಿದರು. ಇದರಿಂದ ಕ್ರೋಧಗೊಂಡ ನಾಯ್ಡು, ‘ವಿದ್ಯುತ್ ಇಲ್ಲ ಎಂದು ನೀನು ಹೇಳುತ್ತಿದ್ದೀಯಾ. ನಿನಗೆ ಕಣ್ಣು ಕಾಣುವುದಿಲ್ಲವೇ ಅಥವಾ ಏನು,’ ಎಂದು ಪ್ರಶ್ನಿಸಿದ್ದಾರೆ. ಮತ್ತೋರ್ವ ವ್ಯಕ್ತಿ ತನ್ನ ಸಾಲ ಮನ್ನಾ ಆಗಿಲ್ಲ ಎಂದು ದೂರಿದ್ದಾರೆ.
ಈ ವೇಳೆ ಮತ್ತಷ್ಟು ಕೆರಳಿದ ನಾಯ್ಡು, ನೀನು ಕುಡಿದಿರುವೆಯಾ. ಸತ್ಯ ಬಯಲಿಗೆಳೆಯಲು ಜಿಲ್ಲಾಧಿಕಾರಿಯನ್ನು ನಿಮ್ಮ ಸ್ಥಳಕ್ಕೆ ಕಳುಹಿಸುತ್ತೇನೆ. ನೀನು ಹೇಳಿದ್ದು ಸುಳ್ಳಾಗಿದ್ದರೆ, ನಿನ್ನನ್ನು ಜೈಲಿಗೆ ಹಾಕಿಸುತ್ತೇನೆ ಎಂದು ಬೆದರಿಸಿದ್ದಾರೆ. ಅಲ್ಲದೆ, ‘ನೀನು ಯಾವ ಪಕ್ಷದವನು. ನಿನ್ನನ್ನು ವೈಎಸ್‌ಆರ್‌ಸಿಪಿ ಪಕ್ಷ ಕಳುಹಿಸಿದೆಯೇ. ನೀನು ಕುಡಿದಿದ್ದೀಯಾ. ನಾನು ಮುಖ್ಯಮಂತ್ರಿ. ನನ್ನ ಜನರ ಮುಂದೆ ನನ್ನನ್ನೇ ಪ್ರಶ್ನಿಸುವೆಯಾ. ನೀನು ಬೇರೆ ಪಕ್ಷದವನಾಗಿದ್ದರೆ, ನನ್ನ ಸಭೆಗಳಿಗೆ ಬರದೆ ಮನೆಯಲ್ಲಿ ಕೂತಿರು,’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳಷ್ಟೇ, ನೀವು ತೆಲಗು ದೇಶಂ ಪಕ್ಷ(ಟಿಡಿಪಿ)ಕ್ಕೆ ಮತ ಹಾಕದಿದ್ದರೆ, ಸರ್ಕಾರದ ಸೇವೆಗಳನ್ನು ಉಪಯೋಗಿಸಬೇಡಿ. ನಮಗೆ ಮತ ಹಾಕದ ಗ್ರಾಮಸ್ಥರನ್ನು ನಿರ್ಲಕ್ಷಿಸಲು ತನಗೇನು ಹಿಂಜರಿಕೆಯಿಲ್ಲ ಎಂದು ಹೇಳಿದ್ದ ನಾಯ್ಡು ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದರು.
