ಬೆಂಗಳೂರು [ಜು.2]:  ಗಣಿಗಾರಿಕೆಯ ಹಣಕಾಸು ವಿವಾದ ಸಂಬಂಧ ದಾಖಲಾಗಿದ್ದ ಖಾಸಗಿ ದೂರಿನ ವಿಚಾರಣೆಗೆ ಗೈರಾಗಿದ್ದ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ. ನಾಗೇಂದ್ರ ಅವರನ್ನು ಸೋಮವಾರ ಐದೂವರೆ ತಾಸು ಪೊಲೀಸ್‌ ವಶಕ್ಕೆ ನೀಡಿ, ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬಂಧಮುಕ್ತಗೊಳಿಸಿತು.

ವಾರಂಟ್‌ ಹಿನ್ನೆಲೆಯಲ್ಲಿ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾದ ನಾಗೇಂದ್ರ ಅವರನ್ನು ಪೊಲೀಸರ ಸುಪರ್ದಿಗೆ ನೀಡಿದ ನ್ಯಾಯಾಲಯವು, ಸಂಜೆ 4.30ಕ್ಕೆ ಶಾಸಕರಿಗೆ ಕಾನೂನು ಪಾಲನೆ ಮಾಡುವಂತೆ ಸೂಚಿಸಿ ಬಿಡುಗಡೆಗೊಳಿಸಿತು. ಬಳ್ಳಾರಿಯಲ್ಲಿ ಗಣಗಾರಿಕೆ ಸಂಬಂಧ ಖಾಸಗಿ ಕಂಪನಿ ಹಾಗೂ ನಾಗೇಂದ್ರ ಅವರ ಮಧ್ಯೆ 1.4 ಕೋಟಿ ರು. ಹಣಕಾಸು ವ್ಯವಹಾರದ ಬಗ್ಗೆ ವಿವಾದವಾಗಿತ್ತು.

ಎರಡು ವರ್ಷಗಳ ಹಿಂದೆ ಶಾಸಕರ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಆ ಕಂಪನಿ ಖಾಸಗಿ ದೂರು ದಾಖಲಿಸಿತ್ತು. ಅಲ್ಲಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆಯಾಗಿತ್ತು. ಅದರಂತೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು, ವಿಚಾರಣೆಗೆ ಹಾಜರಾಗುವಂತೆ ಶಾಸಕರಿಗೆ ಸೂಚಿಸಿತ್ತು. ಸತತವಾಗಿ ಗೈರಾದ ಪರಿಣಾಮ ನ್ಯಾಯಾಲಯವು ವಾರಂಟ್‌ ನೀಡಿತ್ತು.