Asianet Suvarna News Asianet Suvarna News

ಮೈಸೂರು ಪೊಲೀಸರ ಭರ್ಜರಿ ಕಾರ್ಯಾಚರಣೆ : 15,000 ಕಳಪೆ ಹೆಲ್ಮೆಟ್’ಗಳ ವಶ

ಬಿಐಎಸ್ ಮತ್ತು ಐಎಸ್‌ಐ ಗುಣಮಟ್ಟ ಹೊಂದಿರದ ಹಾಗೂ ಅರ್ಧ ಹೆಲ್ಮೆಟ್‌ಗಳ ವಿರುದ್ಧ ಮಂಗಳವಾರ ಭಾರಿ ಕಾರ್ಯಾಚರಣೆ ನಡೆಸಿರುವ ಮೈಸೂರು ನಗರ ಸಂಚಾರ ಪೊಲೀಸರು ಬೈಕ್ ಸವಾರರು ಮತ್ತು ಹಿಂಬದಿ ಸವಾರರಿಂದ ಹದಿನೈದು ಸಾವಿರಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

MYsuru Police Take Action Against Bike Riders

ಮೈಸೂರು (ಜ.3): ಬಿಐಎಸ್ ಮತ್ತು ಐಎಸ್‌ಐ ಗುಣಮಟ್ಟ ಹೊಂದಿರದ ಹಾಗೂ ಅರ್ಧ ಹೆಲ್ಮೆಟ್‌ಗಳ ವಿರುದ್ಧ ಮಂಗಳವಾರ ಭಾರಿ ಕಾರ್ಯಾಚರಣೆ ನಡೆಸಿರುವ ಮೈಸೂರು ನಗರ ಸಂಚಾರ ಪೊಲೀಸರು ಬೈಕ್ ಸವಾರರು ಮತ್ತು ಹಿಂಬದಿ ಸವಾರರಿಂದ ಹದಿನೈದು ಸಾವಿರಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಕಾನೂನಿನ ಪ್ರಕಾರ, ಬಿಐಎಸ್ ಅಥವಾ ಐಎಸ್‌ಐ ಗುಣಮಟ್ಟದ ಹೆಲ್ಮೆಟ್ ಧರಿಸುವುದು ಕಡ್ಡಾಯ.

ಈ ಬಗ್ಗೆ ಜಾಗೃತಿ ಮೂಡಿಸಿದ್ದರೂ, ಅಸುರಕ್ಷಿತ ಅರ್ಧ ಹೆಲ್ಮೆಟ್‌ಗಳನ್ನು ಬಳಸುತ್ತಿದ್ದುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ನಗರ ಪೊಲೀಸರು ‘ಆಪರೇಷನ್ ಸೇಫ್ ರೈಡ್’ ಹೆಸರಿನಡಿ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಬೈಕ್ ಸವಾರರು ಧರಿಸುತ್ತಿದ್ದ ಕಳಪೆ ಗುಣ ಮಟ್ಟದ 15,501 ಹೆಲ್ಮೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ತಂದು ತೋರಿಸಿದ ಮೇಲೆಯೇ ಬಿಟ್ಟರು: ಮಧ್ಯಾಹ್ನದವರೆಗಿನ ಕಾರ್ಯಾಚರಣೆಯಲ್ಲಿ ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದಿದ್ದಷ್ಟೇ ಅಲ್ಲ, ಆ ಹೆಲ್ಮೆಟ್‌ಗಳ ಮೇಲೆ ಸವಾರರ ಬೈಕ್ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿಕೊಂಡು ಸ್ಥಳದಲ್ಲೇ ಐಎಸ್‌ಐ ಅಥವಾ ಬಿಐಎಸ್ ಮುದ್ರೆ ಇರುವ ಹೆಲ್ಮೆಟ್ ತರುವಂತೆ ಪೊಲೀಸರು ಸೂಚಿಸಿದರು. ಅಂತಹ ಹೆಲ್ಮೆಟ್ ತಂದು ತೋರಿಸಿದ ಸವಾರರಿಗೆ ಮಾತ್ರ ಹಳೆಯ ಹೆಲ್ಮೆಟ್‌ಗಳನ್ನು ಹಿಂದಿರುಗಿಸಿದರು. ಇದರಿಂದಾಗಿ ನಗರದ ಹೆಲ್ಮೆಟ್ ಅಂಗಡಿಗಳ ಮುಂದೆ ಜನ ಮುಗಿಬಿದ್ದು, ಹೆಲ್ಮೆಟ್‌ಗಳು ಕಜ್ಜಾಯದಂತೆ ಮಾರಾಟವಾದವು.

ಮತ್ತೊಂದೆಡೆ ಕೃಷ್ಣರಾಜ ವಿಭಾಗದಲ್ಲಿ ಮಾತ್ರ ಪೊಲೀಸರು ಕಾರ್ಯಾಚರಣೆ ನಡೆಸದಿದ್ದಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಯಿತು. ಕಳೆದ ವರ್ಷ ಕಳಪೆ ಹೆಲ್ಮೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದ ಪೊಲೀಸರು 1,390 ಹೆಲ್ಮೆಟ್‌ಗಳನ್ನು ವಶಪಡೆದಿದ್ದರು. ‘ಇನ್ನು ಮುಂದೆಯೂ ಕಾರ್ಯಾಚರಣೆ ಮುಂದುವರೆಯಲಿದ್ದು, ಕಳಪೆ ಹೆಲ್ಮೆಟ್ ಬಳಸುವ ಸವಾರರು ಹಾಗೂ ಮಾರಾಟಗಾರರ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆಯಲಾಗುವುದು’ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ. ಸುಬ್ರಮಣ್ಯೇಶ್ವರ ರಾವ್ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios