ಸಂಸದರ ನಿಧಿ ಬಳಕೆಯಲ್ಲಿ ಪ್ರತಾಪ್‌ ನಂ.1 |  ಜಿಗಜಿಣಗಿ, ಮೊಯ್ಲಿ ಕಡಿಮೆ ವಿನಿಯೋಗ | ಲೋಕಸಭೆ ಅವಧಿ ಮುಗಿದರೂ 85 ಕೋಟಿ ನಿಧಿ ಬಳಸಿಲ್ಲ ಸಂಸದರು

 ನವದೆಹಲಿ (ಮಾ. 08): 17ನೇ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಕ್ಷಣಗಣನೆ ಪ್ರಾರಂಭವಾಗಿರುವಾಗಲೇ 16ನೇ ಲೋಕಸಭೆ ಅವಧಿಯಲ್ಲಿ ರಾಜ್ಯದ ಸಂಸದರು ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಪರಿಪೂರ್ಣವಾಗಿ ಬಳಸಲು ವಿಫಲರಾಗಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ತಮಗೆ ಬಿಡುಗಡೆಯಾದ ಒಟ್ಟಾರೆ ನಿಧಿಯಲ್ಲಿ ರಾಜ್ಯದ ಸಂಸದರು ಇನ್ನೂ 85 ಕೋಟಿ ರು.ಗಳನ್ನು ಬಳಸದೇ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ಆದಾಗ್ಯೂ ಮೈಸೂರು ಸಂಸದ ಪ್ರತಾಪ ಸಿಂಹ ಅವರು ಅತಿ ಹೆಚ್ಚು ಅನುದಾನ ಬಳಕೆ ಮಾಡಿದ್ದಾರೆ. ಆದರೆ ಕೇಂದ್ರ ಸಚಿವರೂ ಆಗಿರುವ ವಿಜಯಪುರ ಸಂಸದ ರಮೇಶ್‌ ಜಿಗಜಿಣಗಿ, ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಅತಿ ಕಡಿಮೆ ಬಳಕೆ ಮಾಡಿದ್ದಾರೆ.

2014ರಿಂದ 2019ರವೆಗಿನ 16ನೇ ಲೋಕಸಭೆ ಅವಧಿಯಲ್ಲಿ ಸಂಸದರಿಗೆ ಒಟ್ಟು .690 ಕೋಟಿ ಸಂಸದರ ನಿಧಿ ಲಭ್ಯವಿತ್ತು. ವರ್ಷಕ್ಕೆ ತಲಾ .5 ಕೋಟಿಯಂತೆ 5 ವರ್ಷಕ್ಕೆ .25 ಕೋಟಿ ನಿಗದಿಯಾಗಿತ್ತು. ಈವರೆಗೆ ಒಟ್ಟು .542.50 ಕೋಟಿ ಬಿಡುಗಡೆಯಾಗಿದ್ದು, ಬಡ್ಡಿ ಸಹಿತ .559.10 ಕೋಟಿ ಬಳಕೆಗೆ ಮಂಜೂರಾಗಿದೆ. ಇದರಲ್ಲಿ ಒಟ್ಟು .474.32 ಕೋಟಿ ಹಣವನ್ನು ಸಂಸದರು ಬಳಸಿದ್ದು, ಇನ್ನೂ .84.77 ಕೋಟಿ ಬಾಕಿಯಿದೆ. ಒಟ್ಟಾರೆ ಸಂಸದರ ನಿಧಿ ಬಳಕೆಯ ಶೇಕಡಾವಾರು ಪ್ರಮಾಣ ಶೇ.87.43ರಷ್ಟಿದ್ದು, ಇದು ಆರೋಗ್ಯಕರ ಮಟ್ಟದಲ್ಲಿದೆ.

ಮೈಸೂರಿನ ಸಂಸದ ಪ್ರತಾಪ್‌ ಸಿಂಹ ತಮಗೆ ಬಿಡುಗಡೆಯಾಗಿರುವ .22.50 ಕೋಟಿಯಲ್ಲಿ ಕೇವಲ .5 ಲಕ್ಷ ಮಾತ್ರ ಬಾಕಿ ಉಳಿಸಿಕೊಂಡಿದ್ದಾರೆ. ಬೆಂಗಳೂರು ಸೆಂಟ್ರಲ… ಸಂಸದ ಪಿ.ಸಿ.ಮೋಹನ್‌ .17.50 ಕೋಟಿಯಲ್ಲಿ ಕೇವಲ .23 ಲಕ್ಷ, ಹಾವೇರಿಯ ಸಂಸದ ಶಿವಕುಮಾರ್‌ ಉದಾಸಿ .17.50 ಕೋಟಿಯಲ್ಲಿ ಕೇವಲ .19 ಲಕ್ಷ ಮಾತ್ರ ಬಾಕಿಯಿರಿಸಿಕೊಂಡಿದ್ದಾರೆ. ಕೋಲಾರ ಸಂಸದ ಕೆ.ಎಚ್‌.ಮುನಿಯಪ್ಪ .17.50 ಕೋಟಿಯಲ್ಲಿ .31 ಲಕ್ಷ ಮಾತ್ರ ಬಳಸಿಲ್ಲ. ತುಮಕೂರು ಸಂಸದ ಮುದ್ದ ಹನುಮೇಗೌಡ .22.50 ಕೋಟಿಯಲ್ಲಿ 61 ಲಕ್ಷ ಮಾತ್ರ ಖರ್ಚು ಮಾಡಲು ಬಾಕಿಯಿದೆ. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಬಿಡುಗಡೆಯಾಗಿರುವ .17.50 ಕೋಟಿಗಳಲ್ಲಿ .85 ಲಕ್ಷ ಬಳಸಿಲ್ಲ.

ಪ್ರತಾಪ್‌ಸಿಂಹ ಶೇ.99.50 ಸಾಧನೆ ಮಾಡಿದ್ದರೆ, ಮುನಿಯುಪ್ಪ ಶೇ.97.27, ಶೋಭಾ ಕರಂದ್ಲಾಜೆ ಶೇ.103.94, ಪಿ.ಸಿ.ಮೋಹನ್‌ ಶೇ.103.12, ಮುದ್ದಹನುಮೇಗೌಡ ಶೇ.102.46 ಮತ್ತು ಶಿವಕುಮಾರ್‌ ಉದಾಸಿ ಶೇ.100.86ರ ಸಾಧನೆ ಮಾಡಿದ್ದಾರೆ. ಸಂಸದರ ನಿಧಿಯನ್ನು ಸರ್ಕಾರ ಬ್ಯಾಂಕ್‌ ಖಾತೆಗೆ ಜಮೆ ಮಾಡುವುದರಿಂದ, ವಿಳಂಬವಾಗಿ ಬಳಸಿದರೆ ಬ್ಯಾಂಕಿನಿಂದ ಬಡ್ಡಿಯೂ ಸಿಗುತ್ತದೆ. ಹೀಗಾಗಿ ಕೆಲವು ಸಂಸದರು ಶೇ.100ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದ್ದಾರೆ.

ಹೆಚ್ಚು ಬಾಕಿ ಉಳಿಸಿಕೊಂಡವರು

ಸಂಸದರು ಕ್ಷೇತ್ರ ಮಂಜೂರು ಬಾಕಿ ಉಳಿದ ಹಣ

ರಮೇಶ್‌ ಜಿಗಜಿಣಗಿ ವಿಜಯಪುರ 15 ಕೋಟಿ 10.07 ಕೋಟಿ

ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರ 17.50 ಕೋಟಿ 5.13 ಕೋಟಿ

ಬಿ.ಎನ್‌. ಚಂದ್ರಪ್ಪ ಚಿತ್ರದುರ್ಗ 20 ಕೋಟಿ 5.02 ಕೋಟಿ

ನಳಿನ್‌ ಕಟೀಲು ದಕ್ಷಿಣ ಕನ್ನಡ 22.50 ಕೋಟಿ 4.79 ಕೋಟಿ

ಧ್ರುವನಾರಾಯಣ ಚಾಮರಾಜನಗರ 25 ಕೋಟಿ 4.52 ಕೋಟಿ

ಪ್ರಹ್ಲಾದ ಜೋಶಿ ಧಾರವಾಡ 27.50 ಕೋಟಿ 4.15 ಕೋಟಿ

ಪಿ.ಸಿ. ಗದ್ದಿಗೌಡರ್‌ ಬಾಗಲಕೋಟೆ 20 ಕೋಟಿ 3.97 ಕೋಟಿ

ಸಿ.ಎಸ್‌. ಪುಟ್ಟರಾಜು ಮಂಡ್ಯ 20 ಕೋಟಿ 3.87 ಕೋಟಿ

ಅನಂತ ಹೆಗಡೆ ಉತ್ತರ ಕನ್ನಡ 15 ಕೋಟಿ 3.75 ಕೋಟಿ

ಬಿ.ವಿ. ನಾಯಕ್‌ ರಾಯಚೂರು 17.50 ಕೋಟಿ 3.59 ಕೋಟಿ

ಬಿ.ಎಸ್‌. ಯಡಿಯೂರಪ್ಪ ಶಿವಮೊಗ್ಗ 20 ಕೋಟಿ 3.53 ಕೋಟಿ

ಶ್ರೀರಾಮುಲು ಬಳ್ಳಾರಿ 20 ಕೋಟಿ 3.41 ಕೋಟಿ

ಮಲ್ಲಿಕಾರ್ಜುನ ಖರ್ಗೆ ಕಲಬುರಗಿ 20 ಕೋಟಿ 2.91 ಕೋಟಿ

ಸಿದ್ದೇಶ್‌ ದಾವಣಗೆರೆ 25 ಕೋಟಿ 2.88 ಕೋಟಿ

ಸುರೇಶ್‌ ಅಂಗಡಿ ಬೆಳಗಾವಿ 17.50 ಕೋಟಿ 2.79 ಕೋಟಿ

ಸದಾನಂದಗೌಡ ಬೆಂ.ಉತ್ತರ 22.50 ಕೋಟಿ 2.50 ಕೋಟಿ

ಪ್ರಕಾಶ್‌ ಹುಕ್ಕೇರಿ ಚಿಕ್ಕೋಡಿ 20 ಕೋಟಿ 2.07 ಕೋಟಿ

ಡಿ.ಕೆ. ಸುರೇಶ್‌ ಬೆಂ. ಗ್ರಾ. 25 ಕೋಟಿ 1.82 ಕೋಟಿ

ಕರಡಿ ಸಂಗಣ್ಣ ಕೊಪ್ಪಳ 20 ಕೋಟಿ 1.20 ಕೋಟಿ

ಹಾಸನ ಎಚ್‌.ಡಿ. ದೇವೇಗೌಡ ಹಾಸನ 15 ಕೋಟಿ 1.06 ಕೋಟಿ

ಕಡಿಮೆ ಬಾಕಿ ಉಳಿಸಿಕೊಂಡವರು

ಪ್ರತಾಪ್‌ ಸಿಂಹ ಮೈಸೂರು 22.50 ಕೋಟಿ 5 ಲಕ್ಷ

ಶಿವಕುಮಾರ್‌ ಉದಾಸಿ ಹಾವೇರಿ 17.50 ಕೋಟಿ 19 ಲಕ್ಷ

ಕೆ.ಎಚ್‌. ಮುನಿಯಪ್ಪ ಕೋಲಾರ 17.50 ಕೋಟಿ 31 ಲಕ್ಷ

ಪಿ.ಸಿ. ಮೋಹನ್‌ ಬೆಂ.ಸೆಂಟ್ರಲ್‌ 17.50 ಕೋಟಿ 23 ಲಕ್ಷ

ಮುದ್ದಹನುಮೇಗೌಡ ತುಮಕೂರು 22.50 ಕೋ ಟಿ 61 ಲಕ್ಷ

ಶೋಭಾ ಕರಂದ್ಲಾಜೆ 17.50 ಕೋಟಿ 85 ಲಕ್ಷ

ಹಿಂದಿನ ಅವಧಿಯದ್ದೇ .49.46 ಕೋಟಿ ಬಾಕಿ ಇದೆ

15ನೇ ಲೋಕಸಭೆ ಅಂದರೆ 2009ರಿಂದ 2014ರವರೆಗೆ ಜಾರಿಯಲ್ಲಿದ್ದ ಲೋಕಸಭೆಯ ಅವಧಿಯಲ್ಲಿನ .49.46 ಕೋಟಿ ಈವರೆಗೂ ಬಳಕೆಯಾಗಿಲ್ಲ! 15ನೇ ಲೋಕಸಭೆಯ ಸದಸ್ಯರಾಗಿದ್ದ, ಸಚಿವರಾಗಿದ್ದ ಕೆ.ಎಚ್‌.ಮುನಿಯಪ್ಪ 6.10 ಕೋಟಿ, ಉತ್ತರ ಕನ್ನಡದ ಸಂಸದರಾಗಿದ್ದ ಹಾಲಿ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ .4.87 ಕೋಟಿ, ಬೆಂಗಳೂರು ದಕ್ಷಿಣದ ಸಂಸದರಾಗಿದ್ದ ಅನಂತ್‌ ಕುಮಾರ್‌ .3.36 ಕೋಟಿ ಹಣವನ್ನು ಬಳಸಿಕೊಂಡೇ ಇಲ್ಲ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿನ ಸಂಸದರಾಗಿದ್ದ ಜಯಪ್ರಕಾಶ್‌ ಹೆಗ್ಡೆ ಮತ್ತು ಡಿ.ವಿ.ಸದಾನಂದ ಗೌಡ ಮಾತ್ರ ತಮ್ಮ ನಿಧಿಯನ್ನು ಸಂಪೂರ್ಣವಾಗಿ ವಿನಿಯೋಗಿಸಿದ್ದಾರೆ. ಅಚ್ಚರಿಯೆಂದರೆ 2004 ರಿಂದ 2009ರವರೆಗೆ ಜಾರಿಯಲ್ಲಿದ್ದ 14ನೇ ಲೋಕಸಭೆಯ ಅವಧಿಯಲ್ಲಿನ ಸಂಸದರ ನಿಧಿಯಲ್ಲಿ ಇನ್ನೂ .27.82 ಕೋಟಿ ಬಳಕೆಯಾಗದೆ ಉಳಿದಿದೆ!

ಜಿಗಜಿಣಗಿ .5.43 ಕೋಟಿ ಬಾಕಿ:

ವಿಜಯಪುರದ ಸಂಸದ, ಸಚಿವ ರಮೇಶ್‌ ಜಿಗಜಿಣಗಿ ಅವರಿಗೆ ಲಭ್ಯವಿರುವ .27.50 ಕೋಟಿಗಳಲ್ಲಿ .15 ಕೋಟಿ ಮಾತ್ರ ಬಿಡುಗಡೆಯಾಗಿದ್ದು ಕೇವಲ .10.07 ಕೋಟಿ ಮಾತ್ರ ಬಳಸಿಕೊಂಡಿದ್ದಾರೆ. .5.43 ಕೋಟಿ ಬಳಕೆಗೆ ಬಾಕಿಯಿದ್ದು ತಮಗೆ ಬಿಡುಗಡೆಯಾದ ಹಣದಲ್ಲಿ ಶೇ.67.15 ಮಾತ್ರ ಬಳಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದ ಸಂಸದ ವೀರಪ್ಪ ಮೊಯ್ಲಿ .17.50 ಕೋಟಿಗಳಲ್ಲಿ .12.64 ಕೋಟಿಗಳನ್ನು ಮಾತ್ರ ಬಳಸಿಕೊಂಡಿದ್ದು .5.13 ಕೋಟಿ ಬಳಕೆಗೆ ಬಾಕಿಯಿದೆ. ಶೇ.72.23 ಮಾತ್ರ ಮೊಯ್ಲಿ ಬಳಸಿಕೊಂಡಿದ್ದಾರೆ. ಉತ್ತರ ಕನ್ನಡದ ಸಂಸದ, ಸಚಿವ ಅನಂತ ಕುಮಾರ ಹೆಗಡೆಗೆ ಬಿಡುಗಡೆಯಾದ .15 ಕೋಟಿಗಳಲ್ಲಿ .11.47 ಕೋಟಿ ಬಳಸಿಕೊಂಡಿದ್ದು ಇನ್ನೂ .3.75 ಕೋಟಿ ಬಳಕೆಗೆ ಬಾಕಿಯಿದೆ. ಬಿಡುಗಡೆಯಾದ ಹಣದಲ್ಲಿ ಶೇ.76.01ರಷ್ಟುಮಾತ್ರ ಬಳಸಿಕೊಂಡಿದ್ದಾರೆ.

ಕೇಂದ್ರದ ಮಾಜಿ ಸಚಿವ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ದಿ.ಅನಂತ್‌ ಕುಮಾರ್‌ ಅವರಿಗೆ ಒಟ್ಟು .12.50 ಕೋಟಿ ಬಿಡುಗಡೆಯಾಗಿತ್ತು. ಇದರಲ್ಲಿ ಶೇ. 61.37ರಷ್ಟನ್ನು ಮಾತ್ರ ಬಳಸಿಕೊಂಡಿದ್ದರು. ಚಿತ್ರದುರ್ಗದ ಸಂಸದ ಬಿ.ಎನ್‌.ಚಂದ್ರಪ್ಪ ಅವರಿಗೆ ನೀಡಿರುವ .20 ಕೋಟಿಯಲ್ಲಿ .5.02 ಕೋಟಿಗಳನ್ನು ಇನ್ನೂ ಬಳಸಿಕೊಂಡಿಲ್ಲ. ದಕ್ಷಿಣ ಕನ್ನಡದ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಒಟ್ಟು .22.50 ಕೋಟಿ ಅನುದಾನ ಸಿಕ್ಕಿದ್ದು .4.79 ಕೋಟಿ ಇನ್ನಷ್ಟೇ ಬಳಸಿಕೊಳ್ಳಬೇಕಿದೆ. ಚಾಮರಾಜನಗರದ ಸಂಸದ ಧ್ರುವನಾರಾಯಣ ಅವರಿಗೆ ಒಟ್ಟು .25 ಕೋಟಿ ಬಿಡುಗಡೆಯಾಗಿದ್ದು .4.52 ಕೋಟಿ ಬಳಕೆಗೆ ಬಾಕಿಯಿದೆ. ಧಾರವಾಡದ ಸಂಸದ ಪ್ರಹ್ಲಾದ ಜೋಷಿ ಅವರಿಗೆ .27.50 ಕೋಟಿ ನಿಧಿ ಲಭ್ಯವಿದ್ದು ಕೇಂದ್ರ .20 ಕೋಟಿ ಬಿಡುಗಡೆ ಮಾಡಿದೆ. .4.15 ಕೋಟಿ ಬಳಕೆ ಆಗಬೇಕಿದೆ.

ಮಂಡ್ಯದ ಸಂಸದರಾಗಿದ್ದ ಸಿ.ಎಸ್‌.ಪುಟ್ಟರಾಜು ಅವರಿಗೆ .20 ಕೋಟಿಗಳಲ್ಲಿ .15 ಕೋಟಿ ಬಿಡುಗಡೆಯಾಗಿದ್ದು ಇನ್ನೂ .3.87 ಕೋಟಿ ಬಳಕೆಗೆ ಬಾಕಿಯಿದೆ. ಬಾಗಲಕೋಟೆಯ ಸಂಸದ ಪಿ.ಸಿ.ಗದ್ದಿಗೌಡರ್‌ .20 ಕೋಟಿಯಲ್ಲಿ .3.97 ಕೋಟಿ ಮತ್ತು ರಾಯಚೂರಿನ ಸಂಸದ ಬಿ.ವಿ.ನಾಯಕ್‌ .17.50 ಕೋಟಿಗಳಲ್ಲಿ .3.59 ಕೋಟಿ ಬಳಕೆಗೆ ಬಾಕಿಯಿದೆ. ಶಿವಮೊಗ್ಗದ ಸಂಸದರಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಲಭ್ಯವಿದ್ದ .20 ಕೋಟಿಯಲ್ಲಿ .20 ಕೋಟಿ ಬಿಡುಗಡೆಯಾಗಿದ್ದು .3.53 ಕೋಟಿ ಬಳಕೆಗೆ ಬಾಕಿಯಿದೆ. ಬಳ್ಳಾರಿಯ ಸಂಸದರಾಗಿದ್ದ ಶ್ರೀರಾಮುಲು ಅವರಿಗೂ .20 ಕೋಟಿ ಲಭ್ಯವಿದ್ದು .20 ಕೋಟಿಗಳೂ ಬಿಡುಗಡೆಯಾಗಿದ್ದು ಇನ್ನೂ .3.41 ಕೋಟಿ ಬಳಕೆಯಾಗಿಲ್ಲ.

ಕಲಬುರಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಟ್ಟು .20 ಕೋಟಿ ಬಿಡುಗಡೆಯಾಗಿದ್ದು .2.91 ಕೋಟಿ ಬಳಕೆಯಾಗಿಲ್ಲ. ಬೆಳಗಾವಿ ಸಂಸದ ಸುರೇಶ್‌ ಅಂಗಡಿ ಬಿಡುಗಡೆಯಾಗಿರುವ .17.50 ಕೋಟಿಯಲ್ಲಿ .2.79 ಕೋಟಿ ಬಳಕೆಗೆ ಬಾಕಿಯಿದೆ. ದಾವಣಗೆರೆಯ ಸಂಸದ ಸಿದ್ದೇಶ್‌ ಅವರಿಗೆ ಗರಿಷ್ಠ ಮೊತ್ತ .25 ಕೋಟಿ ಬಿಡುಗಡೆಯಾಗಿದ್ದು .2.88 ಕೋಟಿ ವಿನಿಯೋಗಿಸಿಲ್ಲ.

ಬೆಂಗಳೂರು ಉತ್ತರ ಕ್ಷೇತ್ರದ ಸಂಸದ, ಕೇಂದ್ರ ಸಚಿವ ಸದಾನಂದ ಗೌಡ ಅವರಿಗೆ .22.50 ಕೋಟಿ ಬಿಡುಗಡೆಯಾಗಿದ್ದು .2.50 ಕೋಟಿ ಖರ್ಚಾಗಿಲ್ಲ. ಚಿಕ್ಕೋಡಿ ಸಂಸದ ಪ್ರಕಾಶ್‌ ಹುಕ್ಕೇರಿ ಅವರಿಗೆ ಲಭ್ಯವಿರುವ ಮತ್ತು ಬಿಡುಗಡೆಯಾದ .20 ಕೋಟಿಯಲ್ಲಿ .2.07 ಕೋಟಿ, ಬೆಂಗಳೂರು ಗ್ರಾಮಾಂತರದ ಸಂಸದ ಡಿ ಕೆ ಸುರೇಶ್‌ ಅವರಿಗೆ ಬಿಡುಗಡೆಯಾಗಿರುವ .25 ಕೋಟಿ ರೂಗಳಲ್ಲಿ .1.82 ಕೋಟಿ, ಕೊಪ್ಪಳದ ಸಂಸದ ಕರಡಿ ಸಂಗಣ್ಣ ಅವರಿಗೆ ಬಿಡುಗಡೆಯಾಗಿರುವ .20 ಕೋಟಿಯಲ್ಲಿ .1.20 ಕೋಟಿ, ಹಾಸನದ ಸಂಸದ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ಕೇವಲ .15 ಕೋಟಿ ಬಿಡುಗಡೆಯಾಗಿದ್ದು ಅದರಲ್ಲಿ .1.06 ಕೋಟಿ ಖರ್ಚು ಮಾಡಬೇಕಿದೆ.