ಮೈಸೂರು :  ಸಾಫ್ಟ್‌ವೇರ್‌ ಕೈಕೊಟ್ಟಾಗಲೋ, ವಿದ್ಯುತ್‌ ಸಮಸ್ಯೆಯಾದಾಗಲೋ ಅಥವಾ ಸಿಬ್ಬಂದಿ ಪ್ರತಿಭಟನೆಗೆ ಕೂತಾಗ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಸ್ಥಗಿತಗೊಳ್ಳುವುದುಂಟು. ಆದರೆ, ಮೈಸೂರಲ್ಲಿ ಸೋಮವಾರ ಕಾಗದ ಹಾಗೂ ಕಾಟ್ರಿಜ್‌ನಂಥ ಸ್ಟೆಷನರಿ ಕೊರತೆಯಿಂದಾಗಿ ಸಬ್‌ರಿಜಿಸ್ಟ್ರಾರ್‌ ಕಚೇರಿ ಕೆಲಸ ಕಾರ್ಯಗಳು ಬಂದ್‌ ಆಗಿದೆ!

ಹೌದು, ಆಸ್ತಿ ನೋಂದಣಿ, ಭೂ ದಾಖಲೆ ತಿದ್ದುಪಡಿ, ಮದುವೆ ನೋಂದಣಿಯಂಥ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು ಸಬ್‌ರಿಜಿಸ್ಟ್ರಾರ್‌ ಕಚೇರಿಗಳಿಗೆ ದೊಡ್ಡ ಸಂಖ್ಯೆಯಲ್ಲಿ ಎಡತಾಕುತ್ತಿರುತ್ತಾರೆ. ಸದಾ ಜನರಿಂದ ಗಿಜಿಗಿಡುವ ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಣಿಯಾದ ದಾಖಲೆಗಳ ಪ್ರತಿ ತೆಗೆಯುವುದು ಸೇರಿ ವಿವಿಧ ಕೆಲಸಗಳಿಗಾಗಿ ಕಾಗದ, ಪ್ರಿಂಟರ್‌ನ ಕಾಟ್ರಿಜ್‌ ದೊಡ್ಡಮಟ್ಟದಲ್ಲಿ ಬಳಕೆಯಾಗುತ್ತದೆ. ಕಾಗದ ಮತ್ತು ಕಾಟ್ರಿಜ್‌ನಂಥ ಸ್ಟೆಷನರಿ ಇಲ್ಲದೆ ಇಲ್ಲಿ ಕೆಲಸವೇ ನಡೆಯುವುದಿಲ್ಲ ಅನ್ನುವ ಸ್ಥಿತಿ ಇರುತ್ತದೆ.

ಆದರೆ, ಮೈಸೂರು ಜಿಲ್ಲೆಯ 15 ಸಬ್‌ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಕಳೆದ ಕೆಲ ಸಮಯದಿಂದ ಕಾಗದ, ಕಾಟ್ರಿಜ್‌ನ ತೀವ್ರ ಕೊರತೆ ಕಾಣಿಸಿಕೊಂಡಿದ್ದು, ಸಿಬ್ಬಂದಿ ಪರದಾಡಬೇಕಾಗಿದೆ. ಈ ಸಂಬಂಧ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಲೋಕಸಭಾ ಚುನಾವಣಾ ಎದುರಾಗಿದ್ದರಿಂದಲೂ ಸಕಾಲದಲ್ಲಿ ಸೂಕ್ತ ಕ್ರಮ ವಹಿಸಲೂ ಈಗ ಸಮಸ್ಯೆಯಾಗುತ್ತಿದೆ. ಇದರಿಂದ ಸಿಬ್ಬಂದಿ ನೋಂದಣಿ ಕಾರ್ಯವನ್ನೇ ಸ್ಥಗಿತಗೊಳಿಸಿದ್ದಾರೆ.

ಒಪ್ಪಂದ ಮುಕ್ತಾಯ: ನೋಂದಣಿ ಮತ್ತು ಮುದ್ರಾಂಕ ಇಲಾಖೆಯು, ದಾಖಲೆಗಳನ್ನು ಗಣಕೀಕೃತವಾಗಿ ನೋಂದಣಿ ಮಾಡಲು ಎಚ್‌ಸಿಎಲ್‌ ಇಸ್ಫೋ ಸಿಸ್ಟಮ್‌ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಕರಾರು ಮಾ.31ಕ್ಕೆ ಅಂತ್ಯವಾಗಿದೆ. ಸರ್ಕಾರ ಈವರೆಗೂ ಹೊಸ ಟೆಂಡರ್‌ ಕರೆದಿಲ್ಲ. ಇದರಿಂದ ಒಂದು ತಿಂಗಳಿಂದ ಕಚೇರಿ ನಿರ್ವಹಣಾ ಹಣದಲ್ಲಿ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಿಕೊಂಡು ಬರಲಾಗಿತ್ತು. ಕೆಲ ಸಮಯದ ವರೆಗೆ ಜನತಾ ಬಜಾರ್‌ನ ಅಂಗಡಿಯಲ್ಲಿ ಸಾಲ ಪಡೆದು ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿತ್ತು. ಆದರೆ, ಈಗ ಪರಿಸ್ಥಿತಿ ಕೈಮೀರಿದ್ದು ಅನಿವಾರ್ಯವಾಗಿ ಕೆಲಸ ಸ್ಥಗಿತಗೊಳಿಸಲಾಗಿದೆ.

ಇಲಾಖೆ ಮೇಲಧಿಕಾರಿಗಳ ಸೂಚನೆಯಂತೆ 20 ದಿನ ಉಪ ನೋಂದಣಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲೇ ಪೇಪರ್‌, ಕಾಟ್ರಿಜ್‌ ಇನ್ನಿತರ ವಸ್ತುಗಳನ್ನು ಖರೀದಿಸಿ, ಕಾರ್ಯ ನಿರ್ವಹಿಸಲಾಗಿತ್ತು. ಆದರೆ, ಸೋಮವಾರ ಪೇಪರ್‌, ಕಾಟ್ರಿಜ್‌ ವಸ್ತುಗಳು ಸೇರಿ ಅಗತ್ಯ ಸ್ಟೆಷನರಿಗಳು ಪೂರೈಕೆಯಾಗದ ಹಿನ್ನೆಲೆಯಲ್ಲಿ ಆಸ್ತಿ ನೋಂದಣಿ ಕಾರ್ಯ ಸ್ಥಗಿತಗೊಂಡಿತು ಎಂದು ಸಿಬ್ಬಂದಿ ಮಾಹಿತಿ ನೀಡುತ್ತಾರೆ. ಈ ವಿಚಿತ್ರ ಸಮಸ್ಯೆ ಕೇಳಿ ಕಚೇರಿಗೆ ಬಂದ ಸಾರ್ವಜನಿಕರು ಅಧಿಕಾರಿಗಳು, ಸಿಬ್ಬಂದಿಗೆ ಹಿಡಿಶಾಪ ಹಾಕಿದರು.

ಜಿಲ್ಲೆಯ ಎಲ್ಲಾ ನೋಂದಣಾಧಿಕಾರಿಗಳ ಕಚೇರಿಗೆ ಪೇಪರ್‌ ಮತ್ತು ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾದ್ದರಿಂದ ತ್ಯಾಸವಾದ್ದರಿಂದ ಸೋಮವಾರ ನೋಂದಣಿ ಕಾರ್ಯ ಸ್ಥಗಿತಗೊಂಡಿದೆ. ಕೂಡಲೇ ಅಗತ್ಯ ವಸ್ತುಗಳನ್ನು ಪೂರೈಸಲು ಕ್ರಮವಹಿಸಲಾಗಿದೆ. ನಾಳೆಯಿಂದ ನೋಂದಣಿ ಕಾರ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ.

- ವಿಜಯಲಕ್ಷ್ಮೀ ಇನಾಂದರ್‌, ಜಿಲ್ಲಾ ನೋಂದಣಾಧಿಕಾರಿ