ಜೂ.21 ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನದಂದು 60 ಸಾವಿರ ಮಂದಿ ಏಕ ಕಾಲಕ್ಕೆ ಸಾಮೂಹಿಕ ಯೋಗಾಭ್ಯಾಸ, 5001 ಮಂದಿ ಏಕಕಾಲಕ್ಕೆ ಉದ್ದ ಸಾಲಿನಲ್ಲಿ ಯೋಗ ಮಾಡುವುದನ್ನು ಗಿನ್ನೆಸ್ ದಾಖಲೆಗೆ ಕಳುಹಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಮೈಸೂರು (ಜೂ.10): ಜೂ.21 ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನದಂದು 60 ಸಾವಿರ ಮಂದಿ ಏಕ ಕಾಲಕ್ಕೆ ಸಾಮೂಹಿಕ ಯೋಗಾಭ್ಯಾಸ, 5001 ಮಂದಿ ಏಕಕಾಲಕ್ಕೆ ಉದ್ದ ಸಾಲಿನಲ್ಲಿ ಯೋಗ ಮಾಡುವುದನ್ನು ಗಿನ್ನೆಸ್ ದಾಖಲೆಗೆ ಕಳುಹಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಈ ವಿಷಯ ತಿಳಿಸಿದ ಜಿಲ್ಲಾಧಿಕಾರಿ ರಂದೀಪ್, ಜಿಲ್ಲಾಡಳಿತ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜೂ.21 ರಂದು 3 ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ದೊಡ್ಡ ಮಟ್ಟದಲ್ಲಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿಶ್ವಾದಾದ್ಯಂತ ಯೋಗವನ್ನು ಹರಡುವಲ್ಲಿ ಮೈಸೂರು ವಿಶಿಷ್ಟ ಕೊಡುಗೆ ನೀಡುತ್ತಿದೆ. ಸುಮಾರು 60 ಸಾವಿರ ಯೋಗಪಟುಗಳೊಂದಿಗೆ ಸಾಮೂಹಿಕ ಯೋಗಾಭ್ಯಾಸ ಮಾಡಲಾಗುವುದು. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಸಾಮೂಹಿಕ ಯೋಗ ಪ್ರದರ್ಶನವು ಗಿನ್ನೆಸ್ ದಾಖಲೆಗೆ ಸೇರಿದೆ. ಮೈಸೂರು ಯೋಗ ಪ್ರದರ್ಶನದಲ್ಲಿ ೬೦ ಸಾವಿರ ಮಂದಿ ಸಾಮೂಹಿಕವಾಗಿ ಯೋಗ ಮಾಡುವ ಮೂಲಕ ಗಿನ್ನೆಸ್ ದಾಖಲೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ೫೦೦೧ ಮಂದಿ ಏಕಕಾಲದಲ್ಲಿ ಉದ್ದದ ಸಾಲಿನಲ್ಲಿ ಯೋಗ ಮಾಡುವುದನ್ನು ಸಹ ಗಿನ್ನೆಸ್ ದಾಖಲೆಗೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಎಲ್ಲೆಲ್ಲಿ ಯೋಗ?:
ಮೈಸೂರು ಅರಮನೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗ, ಚಾಮರಾಜ ವೃತ್ತ, ಕೆ.ಆರ್. ವೃತ್ತ, ದೇವರಾಜ ಅರಸು ರಸ್ತೆ, ಮಹಾರಾಣಿ ಕಾಲೇಜು ವೃತ್ತ, ರಾಮಸ್ವಾಮಿ ವೃತ್ತ, ಮಹಾರಾಜ ಕಾಲೇಜು ಮೈದಾನ, ಓವೆಲ್ ಮೈದಾನದಲ್ಲಿ ಬರುವ ರಸ್ತೆಗಳಲ್ಲಿ ಪ್ರದರ್ಶನವನ್ನು ಆಯೋಜಿಸಲಾಗಿದೆ. ಇದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸಲಾಗಿದೆ.
ಈ ಕಾರ್ಯಕ್ರಮಕ್ಕಾಗಿ ₹35 ರಿಂದ 40 ಲಕ್ಷ ವೆಚ್ಚವಾಗುವ ನಿರೀಕ್ಷೆ ಇದೆ. ಪ್ರವಾಸೋದ್ಯಮ ಇಲಾಖೆಯು ₹25 ಲಕ್ಷ ನೀಡುವ ಭರವಸೆ ನೀಡಿದೆ. ಅರಮನೆ ಮಂಡಳಿಯಿಂದ ₹10 ಲಕ್ಷ ನೀಡಲಾಗುತ್ತಿದೆ. ಅಲ್ಲದೆ, ವೈಷ್ಣವಿ ಸ್ವೀಟ್ಸ್ ಮತ್ತು ಸೈಕಲ್‌ಪ್ಯೂರ್ ಅಗರ್‌ಬತ್ತೀಸ್ ತಲಾ ₹3 ಲಕ್ಷ ಪ್ರಾಯೋಕತ್ವ ನೀಡಲಿವೆ. ರಾಷ್ಟ್ರೀಯ ಭಾವೈಕ್ಯತೆ, ಸಾಮರಸ್ಯ ಮತ್ತು ವಿಶ್ವಶಾಂತಿ ಮಂತ್ರ ಸಾರಲು ವಿವಿಧ ಧರ್ಮದ ಧರ್ಮಗುರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಮೈಸೂರಿನಲ್ಲಿ 300 ಕ್ಕೂ ಹೆಚ್ಚು ಯೋಗ ತರಬೇತಿ ಕೇಂದ್ರಗಳಿದ್ದು, ಪ್ರತಿನಿತ್ಯ 15 ಸಾವಿರ ಯೋಗಾಸಕ್ತರು ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೆ, 35 ಸಾವಿರ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡುತ್ತಿದ್ದಾರೆ ಎಂದರು.
ಅರಮನೆ ಆವರಣದಲ್ಲಿ ಮುಖ್ಯ ವೇದಿಕೆಯಿದ್ದು, ಅರಮನೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಯೋಗ ಮಾಡುವವರಿಗೂ ಮುಖ್ಯ ವೇದಿಕೆಯಿಂದಲೇ ಯೋಗಾಭ್ಯಾಸದ ಕುರಿತು ನಿರ್ದೇಶನ ನೀಡಲಾಗುತ್ತದೆ. 60 ಸಾವಿರ ಜನರಿಗೂ ತಲುಪುವಂತೆ ಧ್ವನಿ ವ್ಯವಸ್ಥೆ ಮಾಡಲಾಗುತ್ತದೆ. 250 ಯೋಗ ಗುರುಗಳನ್ನು ಅನುಕರಣೆ ಮಾಡಲು ಎಲ್‌ಇಡಿ ಪರದೆಗಳ ವ್ಯವಸ್ಥೆ ಮಾಡಲಾಗುತ್ತದೆ. ವಿವಿಧ ಭಾಗಗಳಿಂದ ಆಗಮಿಸುವ ನಾಗರಿಕರು, ಯೋಗಪಟುಗಳಿಗೆ ಶುಲ್ಕ ರಹಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ತುರ್ತು ಚಿಕಿತ್ಸೆಗೆ ವೈದ್ಯರ ತಂಡ ಆ್ಯಂಬುಲೆನ್ಸ್ ಸ್ಥಳದಲ್ಲಿ ಸಿದ್ಧವಿರಲಿದೆ.
ಪೂರ್ವಭಾವಿ ಪ್ರದರ್ಶನ:
ಜೂ.11 ಮತ್ತು 18 ರಂದು ಪೂರ್ವಭಾವಿ ಪ್ರದರ್ಶನ ನಡೆಯಲಿದೆ. ಜೂ.11 ರಂದು 8 ಸಾವಿರ ಮಂದಿ, ಜೂ.18 ರಂದು 25 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
 ದೂ. 0821- 2422096 ಸಂಪರ್ಕಿಸಬಹುದು.
(ಸಾಂದರ್ಭಿಕ ಚಿತ್ರ)