ಬಳ್ಳಾರಿ[ಮೇ.21]: ‘ಕಬ್ಬಿಣದ ಸರಪಳಿ ಹರಿತಲೇ ಪರಾಕ್‌’ ಎಂಬ ಮೈಲಾರ ಕಾರ್ಣಿಕದ ಅರ್ಥ ಸದ್ಯದಲ್ಲಿ ‘ರಾಜ್ಯದ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂಬುದರ ಸಂಕೇತವಾಗಿದೆ’ ಎಂದು ಹೂವಿನ ಹಡಗಲಿ ತಾಲೂಕಿನ ಶ್ರೀಕ್ಷೇತ್ರ ಮೈಲಾರಲಿಂಗೇಶ್ವರನ ಧರ್ಮಾಧಿಕಾರಿ ವೆಂಕಪ್ಪಯ್ಯ ಒಡೆಯರ್‌ ವ್ಯಾಖ್ಯಾನಿಸಿದ್ದಾರೆ.

ಸುವರ್ಣನ್ಯೂಸ್‌ ಜತೆ ಮಾತನಾಡಿರುವ ಅವರು, ಕಾರ್ಣಿಕ ನುಡಿಯ ಅರ್ಥವನ್ನು ಬಿಡಿಸಿ ಹೇಳಿದ್ದಾರೆ. ಕಬ್ಬಿಣದ ಸರಪಳಿ ಎಂದರೆ ಸಮ್ಮಿಶ್ರ ಸರ್ಕಾರದ ಸಂಕೇತ. ಕಬ್ಬಿಣದ ಸರಪಳಿ ಹರಿತಲೇ ಪರಾಕ್‌ ಎಂದರೆ ಸಮ್ಮಿಶ್ರ ಸರ್ಕಾರದ ಕೊಂಡಿ ಕಿತ್ತುಕೊಂಡು ಬಂತು ಎಂದರ್ಥ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ‘ಆಕಾಶ ಗಿಡಕ್ಕೆ ಗಿಣಿ ಕುಕ್ಕಿತ್ತಲೇ ಪರಾಕ್‌’ ಎಂದು ಕಾರ್ಣಿಕ ನುಡಿಯಲಾಗಿತ್ತು. ಆಕಾಶ ಗಿಡ ಎಂದರೆ ದೊಡ್ಡ ಪಕ್ಷ. ಅಂದರೆ ಕಾಂಗ್ರೆಸ್‌ ಪಕ್ಷ. ಗಿಳಿ ಎಂದರೆ ಪುಟ್ಟಪಕ್ಷ ಜೆಡಿಎಸ್‌. ಆಕಾಶದಂತಹ ರಾಷ್ಟ್ರೀಯ ಪಕ್ಷವನ್ನು ಗಿಣಿಯಂತಿರುವ ಜೆಡಿಎಸ್‌ ಮಂಡಿಯೂರುವಂತೆ ಮಾಡಿತ್ತು ಎಂಬುದರ ಸಂಕೇತವಾಗಿ ಕಾರ್ಣಿಕವಾಗಿತ್ತು. ಕಳೆದ ಫೆ.22ರಂದು ಮೈಲಾರದಲ್ಲಿ ಜರುಗಿದ ಕಾರಣಿಕ ಉತ್ಸವದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಗೊರವಯ್ಯ ಕಾರ್ಣಿಕ ನುಡಿದಿದ್ದರು.