ತಮ್ಮ ಹತ್ಯೆಗೂ ಸಂಚು ನಡೆದಿತ್ತು ಎಂಬುದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರಾಜ್ ಇಂಥ ಬೆದರಿಕೆ ಅಥವಾ ಸಂಚಿಗೆ ನಾನು ಹೆದರುವುದಿಲ್ಲ. ನನ್ನ ಧ್ವನಿ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು[ಜೂ.28] ಗೌರಿ ಲಂಕೇಶ್ ಹಂತಕರಿಂದ ತಮ್ಮ ಕೊಲೆಗೂ ಸಂಚು ನಡೆದಿತ್ತು ಎಂಬ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ನಟ, ನಿರ್ದೇಶಕ ಪ್ರಕಾಶ್ ರಾಜ್, ಈ ರೀತಿಯ ಬೆದರಿಕೆಗಳಿಂದ ನನ್ನ ಧ್ವನಿ ಮತ್ತಷ್ಟು ಗಟ್ಟಿಯಾಗಿದೆ ಎಂದು ಎಂದು ಹೇಳಿದ್ದಾರೆ.
ರಣಹೇಡಿಗಳ ಇಂಥ ಸಂಚು ಕಂಡರೆ ನನಗೆ ನಗು ಬರುತ್ತಿದೆ. ದ್ವೇಷವನ್ನು ಬಿತ್ತುವುದನ್ನು ಎಂದಿಗೂ ಸಹಿಸಲಾರೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿರುವ ನಟ ಎಂದಿನಂತೆ ‘ಜಸ್ಟ್ ಆಸ್ಕಿಂಗ್’ ಎಂದು ಕೇಳಿದ್ದಾರೆ.
ಹೇಡಿಗಳೇ, ಇಂಥ ಕೆಟ್ಟರಾಜಕಾರಣದಿಂದ ಯಾವಾಗ ಹೊರಗೆ ಬರುತ್ತೀರಿ ಎಂದು ವ್ಯಂಗ್ಯವಾಡಿರುವ ಪ್ರಕಾಶ್ ರಾಜ್ ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.
ಗೌರಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡಕ್ಕೆ ನಟ ಪ್ರಕಾಶ್ ರಾಜ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮಾಹಿತಿ ಗೊತ್ತಾಗಿತ್ತು. ಈ ಬಗ್ಗೆ ‘ಸುವರ್ಣ ನ್ಯೂಸ್.ಕಾಂ’ ವಾಹಿನಿ ಸಮಗ್ರ ವರದಿ ಮಾಡಿತ್ತು.
