'ನಿಮ್ಮ ಧರ್ಮ ಯಾವುದು, ದೇವರೊಂದಿಗೆ ನಿನ್ನ ಸಂಬಂಧ ಹೇಗಿರಬೇಕು ಎಂಬ ವಿಚಾರಗಳ ನಿರ್ಧರಿಸಬೇಕಾದವರು ನೀವೇ'- ಸಿಜೆಐ ಠಾಕೂರ್

ನವದೆಹಲಿ(ನ.20): ‘‘ದೇವರು ಮತ್ತು ವ್ಯಕ್ತಿಯ ನಡುವಿನ ಸಂಬಂಧವು ವೈಯಕ್ತಿಕ ವಿಷಯವಾಗಿದ್ದು, ಈ ವಿಚಾರದಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ’’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅಭಿಪ್ರಾಯಪಟ್ಟಿದ್ದಾರೆ.

ನಿಮ್ಮ ಧರ್ಮ ಯಾವುದು, ದೇವರೊಂದಿಗೆ ನಿನ್ನ ಸಂಬಂಧ ಹೇಗಿರಬೇಕು ಎಂಬ ವಿಚಾರಗಳ ನಿರ್ಧರಿಸಬೇಕಾದವರು ನೀವೇ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.

ನ್ಯಾ. ರೋಹಿಂಟನ್ ಎಫ್ ನಾರಿಮನ್ ಅವರು ಬರೆದ ಪಾರ್ಸಿ ಧರ್ಮ(ಜೋರಾಸ್ಟ್ರಿಯನಿಸಂ) ಕುರಿತಾದ ‘ದಿ ಇನ್ನರ್ ಫೈರ್, ಫೈಥ್, ಚಾಯಿಸ್ ಅಂಡ್ ಮಾಡರ್ನ್ ಡೇ ಲಿವಿಂಗ್ ಇನ್ ಜೋರಾಸ್ಟ್ರಿಯನಿಸಂ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಿಜೆಐ ಠಾಕೂರ್, ‘‘ರಾಜಕೀಯ ತತ್ವ, ಸಿದ್ಧಾಂತಗಳಿಗಿಂತ ಧಾರ್ಮಿಕ ಯುದ್ಧಗಳಿಂದಾಗಿ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಧಾರ್ಮಿಕ ವಿಚಾರಗಳೇ ಪ್ರಪಂಚದ ನಾಶ, ಹಾನಿ ಮತ್ತು ರಕ್ತಪಾತಕ್ಕೆ ಕಾರಣವಾಗಿವೆ. ನಮ್ಮ ನಂಬಿಕೆಗಳು ಇತರರಿಗಿಂತ ಶ್ರೇಷ್ಠ, ಅವನು ಆಸ್ಥಿಕ, ಇವನು ನಾಸ್ತಿಕ ಎಂಬ ಭಿನ್ನಾಭಿಪ್ರಾಯಗಳಿಗಾಗಿನ ಕಿತ್ತಾಟದಲ್ಲೇ ಹಲವರು ಮೃತರಾಗಿದ್ದಾರೆ,’’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಹೋದರತೆ, ಶಾಂತಿ ಮತ್ತು ಏಕ ದೇವತಾರಾಧನೆಯಿಂದ ಮಾತ್ರ ಪ್ರಪಂಚದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ನ್ಯಾ.ನಾರಿಮನ್ ಕೃತಿ ಮಹತ್ವದ್ದಾಗಿದೆ ಎಂದು ನ್ಯಾ.ಠಾಕೂರ್ ಹೇಳಿದ್ದಾರೆ.