ಬೆಂಗಳೂರು :  ಬರುವ ಶೈಕ್ಷಣಿಕ ಸಾಲಿನಿಂದ ಪ್ರೌಢಶಾಲೆ ಮಕ್ಕಳು ಒಂದು ಗಿಡ ಬೆಳೆಸುವುದನ್ನು ಸರ್ಕಾರ ಕಡ್ಡಾಯಗೊಳಿಸಬೇಕು ಎಂದು ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಮನವಿ ಮಾಡಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಸೌಪರ್ಣಿಕಾ ಸಂಸ್ಥೆಯ ಅಂಗ ಸಂಸ್ಥೆ ‘ಸೌಪರ್‌ಬೀ’, ‘ಸೌಪರ್ಣಿಕಾ- ಗಿಡಗಳನ್ನು ಬೆಳೆಸುವ ಯೋಜನೆ’ ಸಂಬಂಧ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಪರಿಸರ ಉಳಿಸಿ, ಬೆಳೆಸುವ ಕುರಿಂತೆ ಮಾತನಾಡಿದರು.

ಬಾಲ್ಯದಿಂದಲೇ ಮಕ್ಕಳಲ್ಲಿ ಪರಿಸರ ಸ್ನೇಹಿ ಮನೋಭಾವವನ್ನು ಬೆಳೆಸಬೇಕು. ಒಬ್ಬ ವಿದ್ಯಾರ್ಥಿ ಒಂದು ಗಿಡ ನೆಡುವ ಸಂಸ್ಕೃತಿ ಬೆಳೆಸಿಕೊಂಡಲ್ಲಿ ನಾಡು ಹಸಿರುಮಯವಾಗುತ್ತದೆ. ಮಕ್ಕಳು ಗಿಡದ ಪ್ರತಿ ಹಂತದ ಬೆಳವಣಿಗೆಯನ್ನು ಆನಂದಿಸಬೇಕು. ಗಿಡ ನೆಡುವ ಕಾರ್ಯಕ್ಕೆ ಶಿಕ್ಷಣ ಇಲಾಖೆ ಅಂಕಗಳನ್ನು ನೀಡಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ನನಸಾಗದ ಕನಸು

ನನ್ನೂರು ಹುಲಿಕಲ್‌ನಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣವಾಗಬೇಕು ಎಂಬುದು ನನ್ನ ಮಹದಾಸೆ. ಬಿ.ಎಸ್‌.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಆಸ್ಪತ್ರೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈಗಿನ ಮೈತ್ರಿ ಸರ್ಕಾರ ಈ ಬಗ್ಗೆ ಗಮನಹರಿಸಲಿಲ್ಲ. ಈ ಊರಿನ ಮಹಿಳೆಯರು ಹೆರಿಗೆಗಾಗಿ ಮಾಗಡಿಗೆ ಹೋಗಬೇಕು. ಹತ್ತಿರದಲ್ಲಿ ಎಲ್ಲೂ ಆಸ್ಪತ್ರೆಗಳಿಲ್ಲ ಎಂದು ಸಾಲುಮರದ ತಿಮ್ಮಕ್ಕ ಬೇಸರ ವ್ಯಕ್ತಪಡಿಸಿದರು.