Asianet Suvarna News Asianet Suvarna News

ಮಠಗಳು ಸ್ವಾಮೀಜಿಗಳ ಫ್ಯಾಮಿಲಿ ಬ್ಯುಸಿನೆಸ್ ಅಲ್ಲ

ಅನೇಕ ಮಠಗಳು ಕುಟುಂಬೀಕರಣದ ತೆಕ್ಕೆಗೆ ಈಡಾಗಿದ್ದು ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಇದಕ್ಕಿಂತಲೂ ಅತಿ ಅಪಾಯಕಾರಿ ವಿದ್ಯಮಾನವೆಂದರೆ, ತಮಗೆ ಹುಟ್ಟಿದ ಸಂತತಿಗೇ ಪಟ್ಟ ಕಟ್ಟುವ ಕೆಟ್ಟ ಪರಂಪರೆ ಆರಂಭವಾಗಿದೆ. ಇದು
ಅತ್ಯಂತ ಹೊಣೆಗೇಡಿತನ ಮತ್ತು ನಾಚಿಕೆಗೇಡಿತನ. ಸರ್ವಸಂಗ ತ್ಯಾಗ ಮಾಡಿದ್ದು ತಮ್ಮ ರಕ್ತಸಂಬಂಧಿಯನ್ನು ಪಟ್ಟಕ್ಕೆ ಕೂರಿಸುವ ಸಲುವಾಗಿಯೇ? ಅಥವಾ ತಮಗೆ ಜನಿಸಿದ ವ್ಯಕ್ತಿಯನ್ನು ಉತ್ತರಾಧಿಕಾರಿಯನ್ನಾಗಿ ಮಾಡುವುದಕ್ಕಾಗಿಯೆ? ಎನ್ನುವ ಬಗ್ಗೆ ಚಿತ್ರದುರ್ಗ ಡಾ| ಶಿವಮೂರ್ತಿ ಮುರುಘಾ ಶರಣರ ವಿಚಾರಧಾರೆ ಇಲ್ಲಿದೆ. 

Mutts Are  Not Family Business  Says Murugha Sharanaru
Author
Bengaluru, First Published Jul 20, 2018, 1:52 PM IST

ಬೆಂಗಳೂರು : ಬದುಕಿನಲ್ಲಿ ನಿತ್ಯವೂ ಪರಿಚಿತರ ಮತ್ತು ಅಪರಿಚಿತರ ಭೇಟಿ ಆಗುತ್ತಲೇ ಇರುತ್ತದೆ. ಭೇಟಿ ಎಂದರೆ ಕೂಡುವುದು. ಪರಮಾರ್ಥಿಕ ಪರಿಭಾಷೆಯಲ್ಲಿ ಅಂಗವು ಲಿಂಗದಲ್ಲಿ ಬೆರೆಯುವುದು, ಜೀವನವು ಶಿವನಲ್ಲಿ ಒಂದಾಗುವುದು ಎಂತಲೂ ಅರ್ಥೈಸಬಹುದು. ಒಂದು ಲಿಂಗಾಂಗ ಸಾಮರಸ್ಯ ಮತ್ತೊಂದು ಶಿವಜೀವರ ಸಂಬಂಧ. ಇದು ಅಲೌಕಿಕವಾದ ಬೆರೆಯುವಿಕೆ. ಲೌಕಿಕವಾಗಿ ಸ್ತ್ರೀ-ಪುರುಷ ಸಂಬಂಧ. ಒಬ್ಬರು ಮತ್ತೊಬ್ಬರ ಭೇಟಿ ಆಗುವುದರಲ್ಲಿ ಹಲವು ಉದ್ದೇಶಗಳಿರುತ್ತವೆ. ಇಂಥ ಭೇಟಿಯು ಮುಂಜಾನೆಯಿಂದ ರಾತ್ರಿಯವರೆಗು ನಡೆಯುತ್ತಲೇ ಇರುತ್ತದೆ. ಹಳಬರು ಹೋಗುತ್ತಿ ರುತ್ತಾರೆ, ಹೊಸಬರು ಬರುತ್ತಿರುತ್ತಾರೆ. 

ಹೋಗುವುದು ಮತ್ತು  ಬರುವುದು ನಿರಂತರ. ಒಬ್ಬೊಬ್ಬರ ಬರುವಿಕೆಯು ಅದರೊಟ್ಟಿಗಿನ ಅನಿಸಿಕೆಯು ಒಂದೊಂದು ಅನುಭವವನ್ನು  ನೀಡುವುದು ಸಹಜ. ಕೆಲವರು ಸಂಚರಿಸುತ್ತ ಲೋಕಾನುಭವ ಪಡೆಯುತ್ತಾರೆ, ಇನ್ನು ಕೆಲವರು ಒಂದೆಡೆ ಉಳಿದು ಜೀವನಾನುಭವ  ಹೊಂದುತ್ತಾರೆ. ಜೀವನವು ನೀಡುವ ಅನುಭವಗಳನ್ನು ಜನರು ಹೇಗೆ ಗ್ರಹಿಸುತ್ತಾರೊ? ಈ ಬಗ್ಗೆ ಅರಿವು ಇದ್ದವರಿಗೆಲ್ಲ ಅನುಭವಗಳು ಬದುಕಿನ ಪಾಠಗಳು. ಜೀವನವು ಅನುಭವಮುಖಿ ಆಗುವುದರಿಂದ ಆನಂದವು ದೊರೆಯುತ್ತದೆ. ಅರಿವು ಇದ್ದೆಡೆ ಅನುಭವ. ಇವೆರಡು ಸೇರಿದಾಗ ಆನಂದ, ಪರಮಾನಂದ. ನಿತ್ಯ ದರ್ಶನವೇ ಸತ್ಯ ದರುಶನ. ಕೆಲವರು ಸಾಕ್ಷಾತ್ಕಾರ ಸಾಕ್ಷಾತ್ಕಾರ ಎಂದು ಬಡಬಡಿಸುತ್ತಿರುತ್ತಾರೆ. ಸಾಕ್ಷಾತ್ಕಾರವು ಎಂದೋ ಒಂದು ದಿನ ಆಗುವುದಲ್ಲ. ದಿನವೂ ಅದು ಆಗುತ್ತದೆ.


ದೊಡ್ಡವರ ದೊಡ್ಡ ಪ್ರಭಾವ

ಒಬ್ಬಾತನ ಭೇಟಿ. ಆತ ನೋಡಲು ಚೆನ್ನಾಗಿಯೇ ಇದ್ದ, ಪ್ಯಾಂಟು, ಶರ್ಟು, ಕೊರಳಲ್ಲಿ ರುದ್ರಾಕ್ಷಿಮಾಲೆ ಧರಿಸಿದ್ದ. ವಾಡಿಕೆಯಂತೆ ಎಲ್ಲಿಂದ ಬಂದಿರುವುದು. ಎರಡನೆಯ ಪ್ರಶ್ನೆಯೇ ಯಾಕೆ ಬಂದಿರುವುದೆಂದು ವಿಚಾರಿಸಿದಾಗ ಆತನು, ತಾನು ಒಂದು ಮಠದಲ್ಲಿ ಇದ್ದು, ತನ್ನ ಮಗ ಮತ್ತೊಂದು ದೊಡ್ಡಮಠದಲ್ಲಿ ಇದ್ದಾನೆಂದು, ಇನ್ನೊಬ್ಬ ಮಗನು ಪ್ರತಿಷ್ಠಿತ ಸಂಸ್ಥೆಯಲ್ಲಿ  ಓದುತ್ತಿದ್ದಾನೆಂದು ಹೇಳಿಕೊಂಡ. ಇಷ್ಟೇ ಸಾಕು ಚಿಂತನೆಗೆ! ಇದರಲ್ಲಿ ಅಂಥದ್ದೇನಿದೆ ಅಂದುಕೊಂಡಿರಾ! ಕೆಲವರು ದೊಡ್ಡ ಸಂಸ್ಥೆಯೊಂದಿಗೆ ಅಥವಾ ತಮ್ಮಲ್ಲಿ ಆಗಿರುವ ಹಾಗೂ ಆಗಿಹೋಗಿರುವ ಸ್ವಾಮಿಗಳ ಸಂಬಂಧಿಕರೆಂದು ಹೇಳಿಕೊಳ್ಳುತ್ತಾರೆ. ಸ್ವಾಮಿಗಳನ್ನುಳಿದು ಇವರ ಅಸ್ತಿತ್ವ ಇಲ್ಲವೇ ಎಂಬ ಪ್ರಶ್ನೆ. ಇಂಥ ಸ್ವಾಮಿಗಳ ಅಥವಾ ಇಂಥ ಮುಖಂಡರ ಸಂಬಂಧಿಕರೆಂದು ಹೇಳಿಕೊಂಡು ಪರಿಚಯಿಸಿಕೊಳ್ಳುವುದು ಅವರಿಗೆ ಸಲ್ಲಿಸುವ ಅಗೌರವ.  ಕೊನೆಯಲ್ಲಿ ಆತ ತಾನು ಬೆಳಗಾವಿಯಲ್ಲಿ ಓದುತ್ತಿರುವ ಮಗನನ್ನು ನೋಡಬೇಕಾಗಿದೆ ಎಂದ. ಆಯ್ತು, ಹೋಗಿ ನೋಡಿಕೊಂಡು
ಬನ್ನಿರೆಂದೆ. (ಆತನ ಆಂತರ್ಯದ ಇಂಗಿತ ಅರ್ಥ ಮಾಡಿಕೊಂಡು). ಅಲ್ಲಿಯವರೆಗೆ ಹೋಗಲು ದಾರಿಯ ಖರ್ಚು ಬೇಕಾಗುತ್ತದೆ ಎಂಬ ಕೋರಿಕೆಯನ್ನು ಆತ ಮುಂದಿಟ್ಟ. ಆತನಿಗೆ ಹೋಗಲು ದಾರಿಯ ಖರ್ಚನ್ನು ಕೊಡುತ್ತ, ನಿನ್ನ ಕಷ್ಟಕ್ಕಾಗಿ ಕೇಳು, ಏನಾದರು ಸಹಾಯ ಮಾಡೋಣ. ಆದರೆ ದೊಡ್ಡವರ ಹೆಸರಿಗೆ ಕಳಂಕ ತರಬಾರದು ಎಂದು ಬುದ್ಧಿವಾದ ಹೇಳಿದೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಅಸ್ತಿತ್ವವಿದ್ದು, ದೊಡ್ಡವರ ಹೆಸರಲ್ಲಿ ಅದು ಕರಗಿ ಹೋಗಬಾರದು.

ದೊಡ್ಡವರದು ದೊಡ್ಡ ಪ್ರಭಾವ, ಸಣ್ಣವರದು ಸಣ್ಣ ಪ್ರಭಾವ. ಬೀದಿ ದೀಪದ ವ್ಯಾಪ್ತಿ ದೊಡ್ಡದು, ಮನೆ ದೀಪದ ವಿಸ್ತೀರ್ಣ ಚಿಕ್ಕದು. ಎರಡೂ ಕತ್ತಲೆ ಓಡಿಸುತ್ತವೆ. ಗಾಡಾಂಧಕಾರದಲ್ಲಿ ಮುನ್ನಡೆಯಲು ಒಂದು ಚಿಕ್ಕ ಟಾರ್ಚ್ ಸಾಕು. ಇದು ಮೊಬೈಲ್ ಕಾಲ. ಎಲ್ಲರ ಬಳಿಯು ಇರುತ್ತದೆ. ಅದರೊಳಗೆ ಬೆಳಕು ನೀಡುವ ವ್ಯವಸ್ಥೆ ಇದೆ. ಬೀದಿ ದೀಪ, ಪೋಕಸ್ ಲೈಟ್, ಸ್ಟೇಜ್ ಲೈಟ್‌ಗಳು ಬೆಳಕು ಚೆಲ್ಲುತ್ತ, ನಿರ್ದಿಷ್ಟ ಸನ್ನಿವೇಶವನ್ನು ಅವು ವಿಶೇಷವಾಗಿ ದಿಗ್ದರ್ಶಿಸುತ್ತವೆ. ಅವುಗಳ ಕಾರ್ಯವೈಖರಿಯು ವಿಭಿನ್ನ. ಮನೆಯೊಳಗಿನ ಬಲ್ಬ್‌ಗೆ ಬೆಳಕು ಹರಿಸುವ ಕೆಲಸ. ಹಿಂದಿನ ದಿನಗಳಲ್ಲಿ ಧಾರ್ಮಿಕ ಮುಖಂಡರನ್ನು ತಮ್ಮ ಹತ್ತಿರದ ಸಂಬಂಧಿಕರು ಭೇಟಿ ಮಾಡುತ್ತಿರಲಿಲ್ಲ. 

ತಮ್ಮ ಮನೆತನದ ಒಂದು ಕುಡಿಯಾಗಿ ಬೆಳೆಯುತ್ತಿದ್ದಾರೆ; ಅವರಿಂದ ಲೋಕಕಲ್ಯಾಣ ಸಾಧ್ಯವಾಗಲಿ. ಅವರಿಗೆ ತಮ್ಮಿಂದ ಭಂಗ ಬರಬಾರದೆಂದು ಭಾವಿಸುತ್ತಿದ್ದರು. ಮಠಾಧೀಶರು ಕೂಡ ತಮ್ಮದು ವಿಶ್ವಕುಟುಂಬವೆಂಬ ಭಾವನೆ ಯುಳ್ಳವರಾಗಿದ್ದು, ಬಂಧು-ಬಳಗವನ್ನು ಸೇರಿಸುತ್ತಿರಲಿಲ್ಲ. ಇಂದಿನ ಪರಿಸ್ಥಿತಿಯು ಬಿಗಡಾಯಿಸಿದೆ. ಒಂದು ಮಠ ಅಥವಾ ಪೀಠಕ್ಕೆ ನೇಮಕ ಪ್ರಕ್ರಿಯೆ ನಡೆಯುವ ಸಂದರ್ಭದಿಂದ ಹಿಡಿದುಕೊಂಡು, ಪ್ರತಿಯೊಂದು ಸಂದರ್ಭದಲ್ಲು ಹತ್ತಿರದ ಬಂಧುಗಳು ಶಾಮೀಲಾಗುತ್ತಾರೆ. ಹತ್ತಿರದ ಬಂಧುಗಳಿಗೆ ಶಿಕ್ಷಣ ನೀಡಲಿ; ಬೇಕಾದರೆ ತಮ್ಮ ಸಂಸ್ಥೆಯಲ್ಲಿ ಯಾವುದಾದರೊಂದು ನೌಕರಿಯನ್ನು ಬೇಕಾದರೆ ನೀಡಲಿ. ಶಿಕ್ಷಣ ಪಡೆಯಲಿ ಮತ್ತು ನೌಕರಿ ಪಡೆದು ಅದನ್ನು ನಿರ್ವಹಿಸುತ್ತ ಹೋಗಲಿ. 

ವೈಯಕ್ತಿಕ ಆಸ್ತಿಯಾಗುತ್ತಿವೆ ಮಠಗಳು 

ಕೆಲ ಮಠಾಧೀಶರು ತಮ್ಮ ಸಹೋದರರು ಅಥವಾ ಸಹೋದರಿಯರನ್ನು ಮಠದಲ್ಲಿರಲು ಖಾಯಂ ಅವಕಾಶ ಕೊಡುತ್ತಾರೆ. ಮಠಗಳಿಗೆ ತಮ್ಮ ಸಹೋದರ ಅಥವಾ ಸಹೋದರಿಯ ಪುತ್ರನನ್ನು ತಮ್ಮ ಉತ್ತರಾಧಿಕಾರಿಯೆಂದು ನೇಮಕ ಮಾಡುತ್ತಾರೆ. ಇಂಥ ಕ್ರಮಗಳಿಂದಾಗಿ ಒಂದು ಮಠವು ಸಾಮಾಜಿಕ ಸಂಬಂಧವನ್ನು ಕಳಚಿಕೊಂಡು, ವೈಯಕ್ತಿಕ ಆಸ್ತಿಯಾಗಿ ಪರಿಣಮಿಸುತ್ತದೆ. ಆಸ್ತಿಗಾಗಿ ಮಠಾಧೀಶರಾಗುವ ಪ್ರವೃತ್ತಿ ಹೆಚ್ಚುತ್ತಿದೆ. ಕ್ರಮೇಣ ಈ ವ್ಯವಸ್ಥೆಯು ಕುಟುಂಬೀ ಕರಣಕ್ಕೆ ಒಳಗಾಗಿ ಮಠ ಪರಂಪರೆಯು ನಶಿಸುವ ಸಂಭವ. ಅನೇಕ ಮಠಗಳು ಕುಟುಂಬೀಕರಣದ ತೆಕ್ಕೆಗೆ ಈಡಾಗಿದ್ದು ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಇದಕ್ಕಿಂತಲೂ ಅತಿ ಅಪಾಯಕಾರಿ ವಿದ್ಯಮಾನವೆಂದರೆ, ತಮಗೆ ಹುಟ್ಟಿದ ಸಂತತಿಗೇ ಪಟ್ಟ ಕಟ್ಟುವ ಕೆಟ್ಟ ಪರಂಪರೆ ಆರಂಭವಾಗಿದೆ. ಇದು ಅತ್ಯಂತ ಹೊಣೆಗೇಡಿತನ ಮತ್ತು ನಾಚಿಕೆಗೇಡಿತನ. ಸರ್ವಸಂಗ ತ್ಯಾಗ ಮಾಡಿದ್ದು, ತಮ್ಮ ರಕ್ತಸಂಬಂಧಿಯನ್ನು ಪಟ್ಟಕ್ಕೆ ಕೂರಿಸುವ ಸಲುವಾಗಿಯೇ? ಅಥವಾ ತಮಗೆ ಜನಿಸಿದ ವ್ಯಕ್ತಿಯನ್ನು ಉತ್ತರಾಧಿಕಾರಿಯನ್ನಾಗಿ ಮಾಡುವುದಕ್ಕಾಗಿಯೆ? ಈ ಹಿನ್ನೆಲೆಯಲ್ಲಿ ವಿಲ್ ಮಾಡುವ ಪ್ರಸಂಗಗಳು. ಯಾಕಿಂಥ ಅನಿವಾರ್ಯತೆ?


ಉತ್ತರಾಧಿಕಾರಿ ಏಕೆ ಬೇಕು?

ಉತ್ತರ ಕರ್ನಾಟಕದ ಪ್ರಮುಖ ಮಠವೊಂದರ ಶ್ರೀಗಳು ತಮ್ಮ ಉತ್ತರಾಧಿಕಾರಿಗಳನ್ನು ನೇಮಕ ಮಾಡಿಕೊಂಡರು (25 ವರ್ಷಗಳ ಹಿಂದೆ). ನಾನಾಗ ಹಾವೇರಿ ಹೊಸಮಠದಲ್ಲಿದ್ದೆ. ಈ ಬಗ್ಗೆ ನಮ್ಮ ಹಿರಿಯ ಶ್ರೀಗಳಾದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು - ಅವರು ತಮ್ಮೊಳಗೇ ಉತ್ತರಾಧಿಕಾರಿಗಳನ್ನು ಮಾಡಿಕೊಂಡರೆಂದು ಪ್ರತಿಕ್ರಿಯಿಸಿದರು. ಇದಾದ ಬಳಿಕ ನಾನು ಮತ್ತು ಉತ್ತರಾಧಿಕಾರಿಯನ್ನು  ನೇಮಸಿಕೊಂಡ ಶ್ರೀಗಳು ಒಂದು ಸಮಾರಂಭದಲ್ಲಿ ಸೇರಿದೆವು. ಆ ಪೂಜ್ಯರು, ‘ನೋಡ್ರಿ, ನಮ್ಮ ಮಠಕ್ಕೆ ಉತ್ತರಾಧಿಕಾರಿಯ ನೇಮಕ ಮಾಡಿ ಆಯ್ತು. 

ಈ ಸಂಬಂಧ ನಿಮ್ಮ ಶ್ರೀಗಳ ಅನಿಸಿಕೆ ಏನು ?’ ಎಂದು ಕೇಳಿದರು. ತಮ್ಮೊಳಗೆ ನೇಮಕ ಮಾಡಿಕೊಂಡಿದ್ದಾರೆ ಎಂಬುದು ಪೂಜ್ಯರ  ಅಭಿಪ್ರಾಯವೆಂದು ತಿಳಿಸಿದೆ. ಹಿರಿಯ ಶ್ರೀಗಳ ಅನಿಸಿಕೆಗೆ ಆ ಪೂಜ್ಯರ ಪ್ರತಿಕ್ರಿಯೆ ಏನೆಂದರೆ, ‘ನಾವು ವೃದ್ಧಾಪ್ಯದಲ್ಲಿದ್ದೇವೆ. ಅಂತ್ಯಕಾಲದಲ್ಲಿ ನಮ್ಮನ್ನು ನೋಡಿಕೊಳ್ಳುವವರು ಬೇಕಲ್ಲ. ಇಷ್ಟೆಲ್ಲ ಬೆಳೆಸಿ, ಯಾರನ್ನೋ ಕೂಡ್ರಿಸಿ ಹೋಗುವುದೇ?’ ಎಂಬುದು. ವಂಶಪಾರ‌್ಯಂಪರ್ಯ ಪಟ್ಟ ತಮ್ಮೊಳಗಿನವರು, ಹತ್ತಿರದವರು ಎಂದರೆ ರಕ್ತ ಸಂಬಂಧಿಗಳೇ. ಸಂಸ್ಥೆಯನ್ನು ಬೆಳೆಸುವುದು, ಮಠವನ್ನು ಅಭಿವೃದ್ಧಿಪಡಿಸುವುದರೊಟ್ಟಿಗೆ ತಮ್ಮ ನಂತರ ಸಮರ್ಥವಾಗಿ ನಿಭಾಯಿಸುವ ವ್ಯಕ್ತಿಯನ್ನು ಆಯ್ಕೆ ಮಾಡುವುದು ಮತ್ತು ಅವರಿಗೆ ಸೂಕ್ತ ತರಬೇತಿಯನ್ನು ನೀಡುವುದು ಮಠಾಧೀಶರ ಪ್ರಮುಖವಾದ ಹೊಣೆಗಾರಿಕೆ. ಇದರ ಬಗ್ಗೆ ನಿರ್ಲಕ್ಷ್ಯವನ್ನು ತಾಳುತ್ತ, ಇಲ್ಲವೇ ಮುಂದೂಡುತ್ತಾ ಬಂದು ಕೊನೆಗಳಿಗೆಯಲ್ಲಿ ತಮಗೆ ಬೇಕಾದ ವ್ಯಕ್ತಿಯನ್ನು (ಪೂರ್ವಾಪರ ವಿಚಾರಿಸದೆ) ನೇಮಕಗೊಳಿಸುವುದು ಆತುರದ ನಿರ್ಧಾರ ಆಗುತ್ತದೆ. ಮಠ ಪರಂಪರೆ, ಸಮಾಜದೊಟ್ಟಿಗಿನ ಸಂಬಂಧ, ಬದ್ಧತೆ ಇವುಗಳ ಬಗೆಗೆ ಅರಿವಿಲ್ಲದೆ ಏಕಾಏಕಿ ಸ್ಥಾನವು ದೊರೆತದ್ದರಿಂದ ಆಸ್ತಿಗೆಲ್ಲ ಆತನೇ ಮಾಲೀಕ. ಹಿಂದಿನ ದಿನ ಅವನೊಬ್ಬ ಸಾಮಾನ್ಯ ವ್ಯಕ್ತಿ, ನೇಮಕಗೊಂಡ ದಿನ ಮಠಕ್ಕೆ ಅವನೇ ಮಾಲೀಕ. ಇಡೀ ವ್ಯವಸ್ಥೆಯು ಆ ಕ್ಷಣದಿಂದಲೇ ಆತನನ್ನು ‘ಸ್ವಾಮಿ’ ಎಂದು ಗೌರವ ಕೊಡಲು ಶುರು ಮಾಡುತ್ತದೆ. ಪರಿಶ್ರಮವಿಲ್ಲದೆ ಬಂದ ಪಟ್ಟ. ಮುಂದೆ ಆ ವ್ಯಕ್ತಿಯು ಏನೆಲ್ಲ ಎಡಬಿಡಂಗಿತನ ಮಾಡುತ್ತ ಹೋಗುತ್ತಾನೆ. ಅವನು ಮಾಡುವ ಎಲ್ಲ ರೀತಿಯ ಎಡವಟ್ಟುಗಳು ನೇಮಕ ಮಾಡಿದವರಿಗೆ ಸಂಬಂಧಿಸುತ್ತವೆ.

ಸಮಾಜ ಎಚ್ಚೆತ್ತುಕೊಳ್ಳಬೇಕು

ಯಾವುದೇ ಊರಲ್ಲಿ, ಯಾವುದೇ ಮಠದಲ್ಲಿ ಇಂಥ ಅನಾರೋಗ್ಯಕರ ಬೆಳವಣಿಗೆ ನಡೆದರೆ, ಅದನ್ನು ಇಡೀ ಸಮಾಜ ಧೈರ್ಯವಾಗಿ ತಡೆಯುವ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಸಮಾಜದ ಅಭಿಪ್ರಾಯಕ್ಕೆ ಬೆಲೆ ಕೊಡದಿದ್ದರೆ ನ್ಯಾಯಾಲಯದ ಕಟ್ಟೆ ಹತ್ತಿಯಾದರೂ ನಿಲ್ಲಿಸಬೇಕಾಗುತ್ತದೆ. ಇವೆರಡಕ್ಕೂ ಜಗ್ಗದಿದ್ದರೆ ಅಂಥವರಿಗೆ ಯಾವ ಸಹಕಾರವನ್ನೂ ಕೊಡಬಾರದು. ಎಡವಟ್ಟು ಮಾಡಿಕೊಂಡು ಜನರಿಂದ ಥಳಿಸಿಕೊಂಡು ಅವಮಾನಿತರಾಗುವ ಉದಾಹರಣೆಗಳು ನಡೆಯುತ್ತಿವೆ. ಮಠದೊಳಗಿದ್ದು, 

ಮಠವನ್ನು ಮತ್ತು ಮಠ ಪರಂಪರೆಯನ್ನು ನುಂಗಿಹಾಕುವವರನ್ನು ಏನನ್ನಬೇಕು? 

ಕೆಲವರು ಬಾಯ್ಚಪಲಕ್ಕಾಗಿ ದೊಡ್ಡ ಸಂಸ್ಥೆಗಳನ್ನು, ಸಮಾಜಮುಖಿ ಕಾರ‌್ಯಗಳನ್ನೆಸಗುವ ಮಠಗಳನ್ನು ಟೀಕಿಸುತ್ತಾರೆ. ಅಂಥವರು ತಮ್ಮ ಮಠದೊಳಗೆ ಏನು ನಡೆಯುತ್ತಿದೆ ಎಂಬುದನ್ನು ಅರಿಯದಿರುವುದು ಸಖೇದಾಶ್ಚರ್ಯ! ಸಾಮಾಜೀಕರಣ ಮತ್ತು ಕುಟುಂಬೀಕರಣ ನಡುವೆ ಸಂಘರ್ಷ ಏರ್ಪಟ್ಟಿದೆ. ಮಹತ್ತರವಾದ ಸಾಧನೆಯನ್ನು ಮಾಡಿ ಅಂತ್ಯದ ದಿನಗಳಲ್ಲಿ ತಮ್ಮ ಮೂಲ(ಪೂರ್ವಾಶ್ರಮ)ವನ್ನು ಹುಡುಕುತ್ತ ಹೋಗುವುದು ಸರಿಯೇ? ರಕ್ತ ಸಂಬಂಧಕ್ಕಿಂತ ತತ್ತ್ವಸಂಬಂಧ ಉನ್ನತವಾದುದು. ಮೂಲ ಪರಂಪರೆಯನ್ನು ಉಳಿಸಿಕೊಳ್ಳುವುದರೊಟ್ಟಿಗೆ ಸಮಾಜಮುಖಿ ಭಾವಕ್ಕೆ ಒತ್ತಾಸೆ ನೀಡಬೇಕಾದುದು ಇಂದಿನ ಆದ್ಯತೆ ಆಗಿದೆ. 

ಡಾ| ಶಿವಮೂರ್ತಿ
ಮುರುಘಾ ಶರಣರು
ಮುರುಘಾಮಠ, ಚಿತ್ರದುರ್ಗ

Follow Us:
Download App:
  • android
  • ios