ರಾಮ ಮಂದಿರವಿರುವ ಅಯೋಧ್ಯೆಯ ವಿವಾದಿತ ಭೂಮಿಯನ್ನು ಮುಸ್ಲಿಮರು ಹಿಂದೂಗಳಿಗೆ ಬಿಟ್ಟುಕೊಡುವಂತೆ ಶಿಯಾ ಸಮುದಾಯದ ಧಾರ್ಮಿಕ ಮುಖಂಡ ಮೌಲಾನಾ ಕಲ್ಬೆ ಸಾದಿಕ್ ಸಲಹೆ ನೀಡಿದ್ದಾರೆ.
ನವದೆಹಲಿ(ಆ.13): ರಾಮ ಮಂದಿರವಿರುವ ಅಯೋಧ್ಯೆಯ ವಿವಾದಿತ ಭೂಮಿಯನ್ನು ಮುಸ್ಲಿಮರು ಹಿಂದೂಗಳಿಗೆ ಬಿಟ್ಟುಕೊಡುವಂತೆ ಶಿಯಾ ಸಮುದಾಯದ ಧಾರ್ಮಿಕ ಮುಖಂಡ ಮೌಲಾನಾ ಕಲ್ಬೆ ಸಾದಿಕ್ ಸಲಹೆ ನೀಡಿದ್ದಾರೆ.
ಅಯೋಧ್ಯೆಯ ವಿವಾದಿತ ಸ್ಥಳದಲ್ಲೇ ರಾಮ ಮಂದಿರ ನಿರ್ಮಾಣವಾಗಲಿ ಎಂದು ಸುಪ್ರೀಂಕೋರ್ಟ್‌ಗೆ ಇತ್ತೀಚೆಗಷ್ಟೇ ಶಿಯಾ ವಕ್ಫ್ ಮಂಡಳಿ ಅಫಿಡವಿಟ್ ಸಲ್ಲಿಸಿದೆ. ಈ ಬೆನ್ನಲ್ಲೇ ಮುಂಬೈನಲ್ಲಿ ನಡೆದ ವಿಶ್ವ ಶಾಂತಿ ಹಾಗೂ ಸಾಮರಸ್ಯ ಸಮಾವೇಶದಲ್ಲಿ ಶಿಯಾ ಧಾರ್ಮಿಕ ಮುಖಂಡರು ಈ ಹೇಳಿಕೆ ನೀಡಿದ್ದಾರೆ.
ಅಯೋಧ್ಯೆಯ ವಿವಾದಿತ ಸ್ಥಳದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಕೋರ್ಟ್ ತೀರ್ಪಿನ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಕೋರ್ಟ್ ತೀರ್ಪು ತಮ್ಮ ಪರವಾಗಿರದಿದ್ದರೆ ಅದನ್ನು ಮುಸ್ಲಿಮರು ಶಾಂತಿಯುತವಾಗಿ ಸ್ವೀಕರಿಸಬೇಕು. ಒಂದು ವೇಳೆ ಸುಪ್ರೀಂ ತೀರ್ಪು ತಮ್ಮ ಪರವಾಗಿದ್ದರೆ, ಆಗ ಆ ಭೂಮಿಯನ್ನು ಹಿಂದೂಗಳಿಗೆ ಸಂತೋಷದಿಂದ ಕೊಡಬೇಕು ಎಂದು ಮೌಲಾನಾ ಅವರು ಸಲಹೆ ನೀಡಿದ್ದಾರೆ. ಎರಡೂ ಸಮುದಾಯಗಳು ಗೌರವಯುತವಾಗಿ ಈ ಪ್ರಕರಣವನ್ನು ಪರಿಹರಿಸಿಕೊಳ್ಳಬೇಕು. ಒಂದನ್ನು ಕೊಡುವುದರಿಂದ ಸಾವಿರದಷ್ಟು ಪಡೆದುಕೊಳ್ಳಬಹುದು ಎಂದು ಮೌಲಾನಾ ಅಭಿಪ್ರಾಯಪಟ್ಟಿದ್ದಾರೆ.
ವಿವಾದಿತ ಸ್ಥಳದಲ್ಲೇ ರಾಮ ಮಂದಿರ ನಿರ್ಮಾಣವಾಗಲಿ. ಹಾಗೆಯೇ ಆ ಸ್ಥಳದಿಂದ ದೂರದಲ್ಲಿ ಹಾಗೂ ಮುಸ್ಲಿಂ ಸಮುದಾಯದ ಪ್ರದೇಶದಲ್ಲಿ ಬಾಬ್ರಿ ಮಸೀದಿ ನಿರ್ಮಾಣವಾಗಲಿ. ಬಾಬ್ರಿ ಮಸೀದಿ ಶಿಯಾ ಆಸ್ತಿಯಾಗಿದ್ದರಿಂದ ಸುನ್ನಿ ಮಂಡಳಿಗೆ ಇದರ ಮೇಲೆ ಹಕ್ಕು ಇಲ್ಲ ಎಂದು ಸುಪ್ರೀಂಗೆ ವಕ್ಫ್ ಮಂಡಳಿ ತಿಳಿಸಿದೆ.
