ಮತೀಯ ಸಂಘರ್ಷ, ಹತ್ಯೆಗಳಿಂದಾಗಿ ಪ್ರಕ್ಷುಬ್ಧವಾಗಿರುವ ಕರಾವಳಿಯಲ್ಲಿ ಉಡುಪಿಯ ಪರ್ಯಾಯೋತ್ಸವ ಹಿಂದೂ-ಮುಸ್ಲಿಮರ ನಡುವೆ ಸೌಹಾರ್ದ ಬೆಸೆಯುವ ಕೊಂಡಿಯಾಗುತ್ತಿದೆ. ಈ ಹಿಂದಿನಿಂದಲೂ ಉಡುಪಿ ಅಷ್ಟಮಠಗೊಂದಿಗೆ ಸ್ನೇಹದಿಂದಿರುವ ಉಡುಪಿಯ ನೂರಾರು ಮುಸ್ಲಿಂ ಯುವಕರು ಇದೀಗ ಜ.18ರಂದು ನಡೆಯುವ ಪಲಿಮಾರು ಮಠದ ಪರ್ಯಾಯೋತ್ಸವದಲ್ಲಿ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ.
ಬೆಂಗಳೂರು(ಜ.07): ಮತೀಯ ಸಂಘರ್ಷ, ಹತ್ಯೆಗಳಿಂದಾಗಿ ಪ್ರಕ್ಷುಬ್ಧವಾಗಿರುವ ಕರಾವಳಿಯಲ್ಲಿ ಉಡುಪಿಯ ಪರ್ಯಾಯೋತ್ಸವ ಹಿಂದೂ-ಮುಸ್ಲಿಮರ ನಡುವೆ ಸೌಹಾರ್ದ ಬೆಸೆಯುವ ಕೊಂಡಿಯಾಗುತ್ತಿದೆ. ಈ ಹಿಂದಿನಿಂದಲೂ ಉಡುಪಿ ಅಷ್ಟಮಠಗೊಂದಿಗೆ ಸ್ನೇಹದಿಂದಿರುವ ಉಡುಪಿಯ ನೂರಾರು ಮುಸ್ಲಿಂ ಯುವಕರು ಇದೀಗ ಜ.18ರಂದು ನಡೆಯುವ ಪಲಿಮಾರು ಮಠದ ಪರ್ಯಾಯೋತ್ಸವದಲ್ಲಿ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ.
ಈ ಸಂದರ್ಭದಲ್ಲಿ ಹೊರೆಕಾಣಿಕೆ, ರಕ್ತದಾನ, ಗೋರಕ್ಷಣೆ ಸಹಿ ಅಭಿಯಾನಗಳನ್ನು ನಡೆಸಲು ಉದ್ದೇಶಿಸಿರುವ ಯುವ ಮನಸುಗಳು ಸಜ್ಜಾಗಿ ನಿಂತಿರುವುದಾಗಿ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಸಮಿತಿ ಅಧ್ಯಕ್ಷ ಮಹಮ್ಮದ್ ಆರಿಫ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಗೋರಕ್ಷಣೆಗೆ 10 ಸಾವಿರ ಸಹಿ ಸಾಧ್ಯತೆ: ಉಡುಪಿಯ ಈ ಮುಸ್ಲಿಂ ಸೌಹಾರ್ದ ಸಮಿತಿಯ ಕಾರ್ಯಕರ್ತರು ಗೋರಕ್ಷಣೆಗೆ ಬೆಂಬಲ ನೀಡುತ್ತಿದ್ದಾರೆ. ಜ.18ರಂದು ರಾತ್ರಿ ಪಲಿಮಾರು ಶ್ರೀಗಳ ಪರ್ಯಯೋತ್ಸವದ ಮೆರವಣಿಗೆಯಲ್ಲಿ ಹತ್ತಿಪ್ಪತ್ತು ಸಾವಿರಕ್ಕೂ ಹೆಚ್ಚು ಜನ ಜಾತಿ, ಮತ ಭೇದವಿಲ್ಲದೇ ಭಾಗವಹಿಸುತ್ತಾರೆ. ಈ ವೇಳೆ ಗೋರಕ್ಷಣೆಗೆ ಸಹಿಯನ್ನು ಸಂಗ್ರಹಿಸಲಾಗುತ್ತಿದೆ. ಮೆರವಣಿಗೆಯ ದಾರಿಯಲ್ಲಿ ಬೃಹತ್ ಸಹಿ ಫಲಕ, ಪುಸ್ತಕದಲ್ಲಿ ಸಾವಿರಾರು ಮಂದಿಯಿಂದ ಸಹಿ ಮಾಡಿಸಿ, ಪಲಿಮಾರು ಶ್ರೀಗಳಿಗೆ ಒಪ್ಪಿಸುವ ಯೋಜನೆ ಇದೆ.
ಇದೇ ಮೊದಲಲ್ಲ: ಎರಡು ವರ್ಷಗಳ ಹಿಂದೆ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವ ನಡೆದಾಗ ಪೇಜಾವರ ಶ್ರೀ ಅಭಿಮಾನಿ ಬಳಗ ಎಂಬ ಹೆಸರಿನಲ್ಲಿ ನೂರಾರು ಮುಸ್ಲಿಂ ಯುವಕರು ಸೇವೆ ಸಲ್ಲಿಸಿದ್ದರು. ಪೇಜಾವರ ಶ್ರೀಗಳ ಜನ್ಮನಕ್ಷತ್ರದಂದು ರಕ್ತದಾನ ಶಿಬಿರ, ಪುರಪ್ರವೇಶ, ಪರ್ಯಾಯೋತ್ಸವ ಮೆರವಣಿಗೆ ಹಾಗೂ ಇತ್ತೀಚೆಗೆ ನಡೆದ ಧರ್ಮ ಸಂಸತ್ ಸಂದರ್ಭದಲ್ಲೂ ಇದೇ ಯುವಕರು ಹತ್ತಾರು ಸಾವಿರ ಹಿಂದೂ ಕಾರ್ಯಕರ್ತರಿಗೆ ಮಜ್ಜಿಗೆ ಪಾನಕ ವಿತರಿಸಿ ಗಮನ ಸೆಳೆದಿದ್ದರು.
ಈ ಎಲ್ಲಾ ಕಾರ್ಯ ಮೆಚ್ಚಿದ್ದ ಪೇಜಾವರ ಶ್ರೀಗಳು ಕೃಷ್ಣಮಠದ ಭೋಜನ ಶಾಲೆಯಲ್ಲಿ ಇಫ್ತಾರ್ ಕೂಟ ಆಯೋಜಿಸಿ ಅಭಿಮಾನಿ ಬಳಗದ ಮುಸ್ಲಿಂ ಯುವಕರಿಗೆ ಅಭಿನಂದಿಸಿದ್ದರು. ಬುಧವಾರ ನಡೆದ ಪಲಿಮಾರು ಶ್ರೀಗಳ ಪುರಪ್ರವೇಶದ ವೇಳೆಯೂ ಇದೇ ತಂಡ ನಾಲ್ಕೂವರೆ ಸಾವಿರ ಮಂದಿಗೆ ಮಜ್ಜಿಗೆ ವಿತರಿಸಿತ್ತು ಈಗ ಪರ್ಯಯೋತ್ಸವಕ್ಕೂ ಕೊಡುಗೆ ನೀಡಲು ಸಿದ್ಧವಾಗಿದೆ.
12ರಂದು ಹೊರೆ ಕಾಣಿಕೆ: ಅರವತ್ತು ಮುಸ್ಲಿಂ ಯುವಕರು ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಸಮಿತಿ ರಚಿಸಿದ್ದು, ಅವರು ಜ.12 ರಂದು ಹಸಿರು ತರಕಾರಿ, ತೆಂಗಿನಕಾಯಿ, ಬಾಳೆಹಣ್ಣು, ಅಕ್ಕಿ, ಬೇಳೆ, ಬೆಲ್ಲ ಇತ್ಯಾದಿಗಳನ್ನು ಜ.18ರಂದು ಜೋಡುಕಟ್ಟೆಯಿಂದ ಮೆರವಣಗೆಯಲ್ಲಿ ತಂದು ದೊಡ್ಡ ಪ್ರಮಾಣದಲ್ಲಿ ಪಲಿಮಾರು ಮಠಕ್ಕೆ ಹೊರೆ ಕಾಣಿಕೆ ಸಲ್ಲಿಸಲಿದ್ದಾರೆ. ಅದಕ್ಕಾಗಿ ಉಡುಪಿ, ಪಡುಬಿದ್ರಿ, ಆತ್ರಾಡಿ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದಲೂ ಈ ಹಸಿರು ಕಾಣಿಕೆಗಳು ಬರಲಿವೆ. ಈ ಕಾಣಿಕೆ ಯನ್ನು ಪರ್ಯಾಯೋತ್ಸವದ ಸ್ವಾಗತ ಸಮಿತಿ ಮತ್ತು ಪಲಿಮಾರು ಶ್ರೀಗಳು ಸ್ವಾಗತಿಸಲಿದ್ದಾರೆ. ಪರ್ಯಾಯೋತ್ಸವಕ್ಕೆ ಮುನ್ನಾದಿನ ಜ.17ರಂದು ನಗರದ ಸಂಸ್ಕೃತ ಕಾಲೇಜಿನಲ್ಲಿ, ಪೇಜಾವರ ಶ್ರೀಗಳ ಗೌರವಾರ್ಥ ವಾಗಿ ಇದೇ ಯುವಕರ ಬಳಗದಿಂದ ರಕ್ತದಾನ ಶಿಬಿರ ಆಯೋಜಿಸಲಾಗುತ್ತದೆ. ಅದನ್ನು ಪರ್ಯಾಯ ಪೀಠಾರೋಹಣ ನಡೆಸಲಿರುವ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ಉದ್ಘಾಟಿಸಲಿದ್ದಾರೆ. ಇದರಲ್ಲಿ ಸಮಿತಿಯವರೂ ಸೇರಿ 100ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಲಿದ್ದಾರೆ.
