ಮುಜಾಫರ್‌ನಗರ್(ಅ.11): ಒಂದು ಕಡೆ ಬಿಜೆಪಿ ಮತ್ತು ಪ್ರಧಾನಿ ಮೋದಿ ಮುಸ್ಲಿಂ ವಿರೋಧಿ ಎಂದು ವಿರೋಧಿಗಳು ಆರೋಪಿಸುತ್ತಲೇ ಇರುತ್ತಾರೆ. ಮತ್ತೊಂದು ಕಡೆ ಮುಸ್ಲಿಂ ಭಾಂಧವರು ಪ್ರಧಾನಿ ಮೋದಿ ಅವರ ಮೇಲಿನ ತಮ್ಮ ಪ್ರೀತಿ ಮತ್ತು ಗೌರವವನ್ನು ವಿವಿಧ ರೂಪದಲ್ಲಿ ತೋರಿಸುತ್ತಲೇ ಇದ್ದಾರೆ.

ಇದಕ್ಕೆ ಪುಷ್ಠಿ ಎಂಬಂತೆ ಪ್ರಧಾನಿ ಮೋದಿ ಅವರಿಗಾಗಿ ಮುಸ್ಲಿಂ ಮಹಿಳೆಯರ ಗುಂಪೊಂದು ಉತ್ತರಪ್ರದೇಶದಲ್ಲಿ ದೇವಾಲಾಯ ನಿರ್ಮಾಣ ಮಾಡಲು ಮುಂದಾಗಿದೆ. ರುಬಿ ಘಜ್ನಿ ಎಂಬ ಮುಸ್ಲಿಂ ಮಹಿಳೆಯ ನೇತೃತ್ವದಲ್ಲಿ ಮುಸ್ಲಿಂ ಮಹಿಳೆಯರು ಪ್ರಧಾನಿ ಮೋದಿ ಅವರಿಗಾಗಿ ದೇವಾಲಾಯ ನಿರ್ಮಾಣ ಮಾಡುತ್ತಿದ್ದಾರೆ.  

ಮುಸ್ಲಿಂ ಮಹಿಳೆಯರಿಗಾಗಿ ಪ್ರಧಾನಿ ಮೋದಿಯವರು ಸಾಕಷ್ಟು ಕೆಲಸ ಮಾಡಿದ್ದು, ಪ್ರಮುಖವಾಗಿ ತ್ರಿವಳಿ ತಲಾಖ್ ನಿಷೇಧ ಕಾನೂನು ಜಾರಿ ಮೂಲಕ ನಮ್ಮೆಲ್ಲರ ಬಾಳಿಗೆ ಆಸರೆಯಾಗಿದ್ದಾರೆ ಎಂದು ಅಭಿಮಾನದಿಂದ ಹೇಳುತ್ತಾರೆ ರುಬಿ ಘಜ್ನಿ.

ಇಷ್ಟೇ ಅಲ್ಲದೇ ಅಲ್ಪಸಂಖ್ಯಾತರಿಗಾಗಿ ಉಚಿತ ಮನೆ ಹಾಗೂ ಎಲ್‌ಪಿಜಿ ಸಂಪರ್ಕ ನೀಡಿರುವ ಕೇಂದ್ರ ಸರ್ಕಾರದ ಉಪಕಾರವನ್ನು ನಾವು ಸದಾ ಸ್ಮರಿಸಿಕೊಳ್ಳುತ್ತೇವೆ ಎಂದು ರುಬಿ ಘಜ್ನಿ ಹೇಳುತ್ತಾರೆ. 

ಪ್ರಧಾನಿ ಮೋದಿಯವರಿಗೆ ಇಡೀ ವಿಶ್ವವೇ ಗೌರವ ನೀಡುತ್ತಿದ್ದು, ಇದೀಗ ನಾವೆಲ್ಲಾ ಸಹೋದರಿಯರು ಮೋದಿ ಅವರಿಗೆ ಮಾತೃಭೂಮಿಯಲ್ಲಿ ಗೌರವ ಸಮರ್ಪಿಸುತ್ತೇವೆ ಎಂದು ರುಬಿ ನುಡಿದಿದ್ದಾರೆ. ತಮ್ಮ ಸ್ವಂತ ಹಣದಿಂದಲೇ ಮುಸ್ಲಿಂ ಮಹಿಳೆಯರು ಮೋದಿ ಹೆಸರಿನ ದೇವಸ್ಥಾನ ನಿರ್ಮಾಣ ಮಾಡುತ್ತಿದ್ದು, ಇದಕ್ಕಾಗಿ ಜಿಲ್ಲಾಡಳಿತದ ಪರವಾನಿಗೆ ಕೂಡ ಪಡೆದಿದ್ದಾರೆ.