ನವದೆಹಲಿ(ಆ.10): ಪ್ರೀತಿ ಜಾತಿ, ಧರ್ಮಗಳೆಂಬ ಸಂಕೋಲೆಗಳನ್ನು ಮೀರಿ ಬೆಳೆಯುತ್ತದೆ. ಪ್ರೀತಿಗೆ ಹಿಂದೂ-ಮುಸ್ಲಿಂ ಎಂಬ ಅಂತರವಿಲ್ಲ. ಅದೆನಿದ್ದರೂ ಎರಡು ಹೃದಯಗಳ ಬೆಸುಗೆಗೆ ಇರುವ ಸಾಧನವಷ್ಟೇ. ಆದರೆ ಪ್ರೀತಿಯಲ್ಲೂ ಜಾತಿ, ಧರ್ಮ ನೋಡುವ ಮನಸ್ಸುಗಳು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಇವೆ.

ತನ್ನ ಮೃತ ಹಿಂದೂ ಪತ್ನಿಯ ಶ್ರಾದ್ಧ ನಡೆಸಲು ಈ ಮುಸ್ಲಿಂ ಪತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇವರ ಹೆಸರು ಇಮ್ತಿಯಾಜ್ ಉರ್ ರೆಹಮಾನ್, ನವದೆಹಲಿಯಲ್ಲಿ ವಾಸವಿರುವ ರೆಹಮಾನ್ ಇತ್ತೀಚಿಗೆ ತಮ್ಮ ಪತ್ನಿ ನಿವೇದಿತಾ ಘಾಟಕ್ ಅವರನ್ನು ಕಳೆದುಕೊಂಡಿದ್ದಾರೆ. 1998ರಲ್ಲಿ ಪ್ರೀತಿಸಿ ವಿವಾಹವಾಗಿದ್ದ ರೆಹಮಾನ್ ಮತ್ತು ನಿವೇದಿತಾ ಎರಡು ದಶಕಗಳ ಕಾಲ ಸುಂದರ ಸಂಸಾರ ನಡೆಸಿದವರು.

ಆದರೆ ಬಹು ಅಂಗಾಂಗಳ ವೈಫಲ್ಯದಿಂದ ಬಳಲುತ್ತಿದ್ದ ನಿವೇದಿತಾ ಇತ್ತೀಚಿಗೆ ನಿಧನರಾಗಿದ್ದಾರೆ. ಪರ ಧರ್ಮದ ವ್ಯಕ್ತಿಯನ್ನು ವಿವಾಹವಾದಾಗ ಮಹಿಳೆ ಆ ವ್ಯಕ್ತಿಯ ಧರ್ಮಕ್ಕೆ ಮತಾಂತರವಾಗುವುದು ಸಾಮಾನ್ಯ. ಆದರೆ ನಿವೇದಿತಾ ಮುಸ್ಲಿಂ ವ್ಯಕ್ತಿಯನ್ನು ವಿವಾಹವಾದರೂ ತಮ್ಮ ಹಿಂದೂ ಧರ್ಮವನ್ನು ಬಿಟ್ಟಿರಲಿಲ್ಲ.

ಅದರಂತೆ ರೆಹಮಾನ್ ತಮ್ಮ ಮೃತ ಪತ್ನಿ ನಿವೇದಿತಾ ಅವರ ಶ್ರಾದ್ಧ ಮಾಡಿಸಲು ಬಯಸಿದ್ದಾರೆ. ಆದರೆ ನಿವೇದಿತಾ ಮುಸ್ಲಿಂ ವ್ಯಕ್ತಿಯನ್ನು ವಿವಾಹವಾಗಿದ್ದಕ್ಕೆ ಆಕೆಯ ಶ್ರಾದ್ಧ ನಡೆಸಲು ದೇವಾಲಯವೊಂದರ ಸೊಸೈಟಿ ತಿರಸ್ಕರಿಸಿದೆ. 

ರೆಹಮಾನ್ ಆಗಸ್ಟ್ 6ರಂದು ನಿವೇದಿತಾ ಅವರ ಶ್ರಾದ್ಧವನ್ನು ಚಿತ್ತರಂಜನ್ ಪಾರ್ಕ್ ಬಳಿ ಇರುವ ಕಾಳಿ ಮಂದಿರ ಸೊಸೈಟಿಯಲ್ಲಿ ನೆರವೇರಿಸಲು ಸಮಯ ಕೇಳಿದ್ದರು. ಅದಕ್ಕೆ ಸೊಸೈಟಿ ಆಗಸ್ಟ್ 12ರಂದು ಶ್ರಾದ್ಧ ನಡೆಸಲು ಅವಕಾಶ ನೀಡಿ 1,300 ರುಪಾಯಿ ಹಣವನ್ನು ಕಟ್ಟಿಸಿಕೊಂಡಿದ್ದರು. ಆದರೆ ಇದೀಗ ತಾವು ಶ್ರಾದ್ಧವನ್ನು ಮಾಡುವುದಿಲ್ಲ ಎಂದು ಸೊಸೈಟಿ ಹೇಳಿದ್ದು ತಾವು ಕಟ್ಟಿದ್ದ ಹಣವನ್ನು ಹಿಂಪಡೆಯುವಂತೆ ತಿಳಿಸಿದ್ದಾರೆ.

ಮುಸ್ಲಿಂ ವ್ಯಕ್ತಿಯನ್ನು ವಿವಾಹವಾಗಿರುವುದಕ್ಕೆ ನಿವೇದಿತ ಅವರ ಶ್ರಾದ್ಧವನ್ನು ನೆರವೇರಿಸಲು ಸೊಸೈಟಿ ಹಿಂದೇಟು ಹಾಕುತ್ತಿದೆ ಎಂದು ರೆಹಮಾನ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.