ಬೆಂಗಳೂರು[ಸೆ.21]: ಬೆಂಗಳೂರು ಹೊರವಲಯದ ಆನೇಕಲ್‌ ತಾಲೂಕಿನಲ್ಲಿ ಸುಮಾರು .400 ಕೋಟಿ ಮೌಲ್ಯದ 19 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿರುವುದನ್ನು ಪತ್ತೆ ಹಚ್ಚಿ ಸರ್ಕಾರಕ್ಕೆ ವರದಿ ಸಲ್ಲಿಸಿದ ಮೂರೇ ದಿನಗಳಲ್ಲಿ ಎತ್ತಂಗಡಿಯಾಗಿದ್ದ ದಕ್ಷ ಐಎಎಸ್‌ ಅಧಿಕಾರಿ ಮನೀಷ್‌ ಮೌದ್ಗಿಲ್‌ ಅವರನ್ನು ಮತ್ತೆ ಮೊದಲಿದ್ದ ಹುದ್ದೆಗೆ ನೇಮಿಸಲಾಗಿದೆ.

ಭೂದಾಖಲೆ ಮತ್ತು ಸರ್ವೆ ಇಲಾಖೆ ಆಯುಕ್ತರಾಗಿದ್ದ ಮೌದ್ಗಿಲ್‌ ಅವರನ್ನು ಇದೇ ತಿಂಗಳ 12ರಂದು ಮೈಸೂರಿನ ಆಡಳಿತ ತರಬೇತಿ ಕೇಂದ್ರದ ಪ್ರಧಾನ ನಿರ್ದೇಶಕ ಹುದ್ದೆಗೆ ಸರ್ಕಾರ ವರ್ಗಾವಣೆ ಮಾಡಿತ್ತು. ಭೂಗಳ್ಳರ ಪಾಲಾಗುತ್ತಿದ್ದ ಸರ್ಕಾರಿ ಭೂಮಿ ಉಳಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ನೀಡಿದ ಬೆನ್ನಲ್ಲೇ ಈ ಅಧಿಕಾರಿಯನ್ನು ಸರ್ಕಾರ ವರ್ಗಾವಣೆ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಆಡಳಿತಾರೂಢ ಬಿಜೆಪಿ ವರಿಷ್ಠರಿಗೂ ಮಾಹಿತಿ ಹೋಗಿತ್ತು.

ವರಿಷ್ಠರ ಸೂಚನೆ ಮೇರೆಗೆ ಮನೀಷ್‌ ಮೌದ್ಗಿಲ್‌ ಅವರನ್ನು ಹಿಂದಿನ ಸ್ಥಾನಕ್ಕೆ ಮರು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ ಎನ್ನಲಾಗಿದೆ.

ಭೂಹಗರಣ ಬಯಲಿಗೆಳೆದ ಮನೀಷ್ ಮೌದ್ಗಿಲ್‌ ಎತ್ತಂಗಡಿ!

ಭೂ ಒತ್ತುವರಿ ಪ್ರಕರಣ:

ಬೆಂಗಳೂರು ನಗರ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಶಂಕರ್‌, ದಕ್ಷಿಣ ಉಪ ವಿಭಾಗದ ಉಪವಿಭಾಗಾಧಿಕಾರಿ ಹರೀಶ್‌ ನಾಯಕ್‌ ಹಾಗೂ ಆನೇಕಲ್‌ ತಾಲೂಕಿನ ತಹಸೀಲ್ದಾರ್‌ ಸಿ.ಮಹದೇವಯ್ಯ ಅವರಿಗೆ ಭೂ ಕಂಟಕ ಎದುರಾಗಿದ್ದು, ಆನೇಕಲ್‌ ತಾಲೂಕಿನ ಬುಕ್ಕ ಸಾಗರ ಗ್ರಾಮದ ಸರ್ಕಾರದ 19 ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಂಜೂರಾತಿ ಮಾಡಿದ್ದ ಆರೋಪ ಕೇಳಿ ಬಂದಿತ್ತು.

ಈ ಪ್ರಕರಣದ ಬಗ್ಗೆ ಬುಕ್ಕಸಾಗರ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಭೂ ಮಾಪನನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತ ಮನೀಷ್‌ ಮೌದ್ಗಿಲ್‌ ಅವರು, ಆ ವಿವಾದಾತ್ಮಕ ಭೂಮಿಗೆ ಸೇರಿದ ದಾಖಲೆಗಳನ್ನು ಪರಿಶೀಲಿಸಿದಾಗ ಅಕ್ರಮ ನಡೆದಿರುವುದು ಪತ್ತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಕಾನೂನು ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಚಂದ್ರಶೇಖರ್‌ ಅವರಿಗೆ ಪ್ರತ್ಯೇಕವಾಗಿ ಸೆ.7ರಂದು ವಿಸ್ತೃತವಾದ ವರದಿಯನ್ನು ಭೂ ಮಾಪನಾ ಇಲಾಖೆ ಆಯುಕ್ತರು ಸಲ್ಲಿಸಿದ್ದರು.

ವರದಿ ಸಲ್ಲಿಕೆಯಾದ ಮೂರು ದಿನಗಳ ಬಳಿಕ ಆಯುಕ್ತ ಹುದ್ದೆಯಿಂದ ಮನೀಷ್‌ ಮೌದ್ಗಿಲ್‌ ಅವರನ್ನು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ನಿರ್ದೇಶಕ ಹುದ್ದೆಗೆ ಸರ್ಕಾರ ವರ್ಗಾವಣೆಗೊಸಿತ್ತು. ಭೂ ಹಗರಣ ಬಯಲಿಗೆಳೆದ ಅಧಿಕಾರಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.