ಬೆಂಗಳೂರು [ಸೆ.13] :  ಆನೇಕಲ್‌ ತಾಲೂಕಿನ ಸುಮಾರು 400 ಕೋಟಿ ಮೌಲ್ಯದ ಸರ್ಕಾರಿ ಭೂಮಿ ಕಬಳಿಕೆ ವಿವಾದ ಸಂಬಂಧ ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್‌ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರ ಮತ್ತು ಎಸಿಬಿಗೆ ಭೂಮಾಪನ ಇಲಾಖೆ ಆಯುಕ್ತರು ಶಿಫಾರಸು ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಆದರೆ ಈ ವರದಿ ಸಲ್ಲಿಸಿದ ಮೂರು ದಿನದಲ್ಲೇ ಆಯುಕ್ತ ಮನೀಷ್‌ ಮೌದ್ಗಿಲ್‌ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು ನಗರ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಶಂಕರ್‌, ದಕ್ಷಿಣ ಉಪ ವಿಭಾಗದ ಉಪವಿಭಾಗಾಧಿಕಾರಿ ಹರೀಶ್‌ ನಾಯಕ್‌ ಹಾಗೂ ಆನೇಕಲ್ ತಾಲೂಕಿನ ತಹಸೀಲ್ದಾರ್‌ ಸಿ.ಮಹದೇವಯ್ಯ ಅವರಿಗೆ ಭೂ ಕಂಟಕ ಎದುರಾಗಿದ್ದು, ಆನೇಕಲ್‌ ತಾಲೂಕಿನ ಬುಕ್ಕಸಾಗರ ಗ್ರಾಮದ ಸರ್ಕಾರದ 19 ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಂಜೂರಾತಿ ಮಾಡಿದ ಆರೋಪ ಕೇಳಿ ಬಂದಿದೆ.

ಈ ಪ್ರಕರಣದ ಬಗ್ಗೆ ಬುಕ್ಕಸಾಗರ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತ ಮನೀಷ್‌ ಮೌದ್ಗಿಲ್‌ ಅವರು, ಆ ವಿವಾದಾತ್ಮಕ ಭೂಮಿಗೆ ಸೇರಿದ ದಾಖಲೆಗಳನ್ನು ಪರಿಶೀಲಿಸಿದಾಗ ಅಕ್ರಮ ನಡೆದಿರುವುದು ಗೊತ್ತಾಗಿದೆ.

ಈ ಹಿನ್ನೆಲೆಯಲ್ಲಿ ಕಾನೂನು ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಚಂದ್ರಶೇಖರ್‌ ಅವರಿಗೆ ಪ್ರತ್ಯೇಕವಾಗಿ ಸೆ.7ರಂದು ವಿಸ್ತೃತವಾದ ವರದಿಯನ್ನು ಭೂ ಮಾಪನಾ ಇಲಾಖೆ ಆಯುಕ್ತರು ಸಲ್ಲಿಸಿದ್ದಾರೆ.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿಕ್ಲಿಕ್ಕಿಸಿ

ವರದಿ ಸಲ್ಲಿಕೆಯಾದ ಮೂರು ದಿನಗಳ ಬಳಿಕ ಆಯುಕ್ತ ಹುದ್ದೆಯಿಂದ ಮನೀಷ್‌ ಮೌದ್ಗಿಲ್‌ ಅವರನ್ನು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ನಿರ್ದೇಶಕ ಹುದ್ದೆಗೆ ಸರ್ಕಾರ ವರ್ಗಾವಣೆಗೊಳಿಸಿದೆ. ಭೂ ಹಗರಣ ಬಯಲಿಗೆಳೆದ ಅಧಿಕಾರಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳಿಂದ ಕಾನೂನು ಉಲ್ಲಂಘನೆ

ಆನೇಕಲ್‌ ತಾಲೂಕು ಜಿಗಣಿ ಹೋಬಳಿಯ ಬುಕ್ಕ ಸಾಗರ ಗ್ರಾಮದ ಸರ್ವೆ ನಂ.183ರಲ್ಲಿ ಸರ್ಕಾರಕ್ಕೆ ಸೇರಿದ ಖರಾಬು ಜಮೀನನ್ನು ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಹೆಸರಿಗೆ ದಾಖಲೆಗಳನ್ನು ತಯಾರು ಮಾಡಿದ್ದಾರೆ. ಈ ಸರ್ಕಾರಿ ಆಸ್ತಿಯನ್ನು ಉಳಿಸುವಂತೆ ಬುಕ್ಕ ಸಾಗರದ ಗ್ರಾಮಸ್ಥರು, 2018ರ ಜೂ.15 ರಂದು ಭೂ ಮಾಪನಾ ಇಲಾಖೆ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಅದರಂತೆ ತನಿಖೆ ಕೈಗೆತ್ತಿಕೊಂಡ ಆಯುಕ್ತರು, ಆ ಭೂಮಿಗೆ ಸೇರಿದ ದಾಖಲೆಗಳನ್ನು ಪರೀಕ್ಷಿಸಿದಾಗ ಹಿಂದಿನ ಜಿಲ್ಲಾಧಿಕಾರಿ ಶಂಕರ್‌, ದಕ್ಷಿಣ ಉಪ ವಿಭಾಗಾಧಿಕಾರಿ ಹರೀಶ್‌ ನಾಯಕ್‌ ಹಾಗೂ ತಹಸೀಲ್ದಾರ್‌ ಮಹದೇವಯ್ಯ ಅಕ್ರಮ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.

ವಿಶ್ವಾಸ ದ್ರೋಹ!

ಬುಕ್ಕ ಸಾಗರ ಗ್ರಾಮದ ಸರ್ವೆ ನಂಬರ್‌ 183/2 ನ ಬಿ ಖರಾಬು ಎಂದು ಪರಿಗಣಿಸಿರುವ ಸರ್ಕಾರಿ ಜಮೀನು ವಿಸ್ತೀರ್ಣ 19 ಎಕರೆ 10 ಗುಂಟೆಯನ್ನು ಖಾಸಗಿ ಎಂದು ಪರಿಗಣಿಸಿರುವುದು ಸರ್ಕಾರಿ ಆದೇಶ ಸಂಖ್ಯೆ ಆರ್‌ಡಿ 05 ಎಲ್‌ಜಿಪಿ ಹಾಗೂ ಸರ್ವೆ ನಿಯಮಾವಳಿ ಪ್ರಕಾರದ ವಿರುದ್ಧವಾಗಿದೆ. ಖರಾಬ್‌ ಬಿ ವರ್ಗೀಕರಿಸಲು ತಾಂತ್ರಿಕ ಅಧಿಕಾರಿಗಳಾದ ಭೂ ದಾಖಲೆಗಳ ಉಪ ನಿರ್ದೇಶಕರು ಅಧಿಕಾರವನ್ನು ಹೊಂದಿದ್ದಾರೆ. ಆದರೆ ಆ ಅಧಿಕಾರಿ ಆದೇಶವನ್ನು ಸಹ ಈ ಪ್ರಕರಣದಲ್ಲಿ ಉಲ್ಲಂಘನೆ ಮಾಡಿರುವುದಾಗಿ ವರದಿಯಲ್ಲಿ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಸರ್ಕಾರಿ ಜಮೀನನ್ನು ಖಾಸಗಿ ಎಂದು ಘೋಷಿಸುವುದೇ ಅಪರಾಧ ಸಂಹಿತೆ ಪ್ರಕಾರ ವಿಶ್ವಾಸ ದ್ರೋಹ ಆಗಿರುತ್ತದೆ. ಅತ್ಯಲ್ಪ ಕಂದಾಯ ನಿರ್ಧರಣೆ ಅಂದರೆ, 4000 ರು. ವಿಧಿಸಲಾಗಿದ್ದು, ಇದರ ಪ್ರಸುತ್ತ ಮಾರುಕಟ್ಟೆಮೌಲ್ಯ ಹಲವು ನೂರು ಕೋಟಿ ರು.ಗಳಿಗೂ ಮೀರಿದ್ದಾಗಿರುತ್ತದೆ. ಇದರಿಂದ ಸರ್ಕಾರಕ್ಕಾಗಿರುವ ನಷ್ಟಈ ಪ್ರಕರಣದಲ್ಲಿ ಸ್ಪಷ್ಟವಾಗಿರುತ್ತದೆ ಎಂದು ಮನೀಷ್‌ ಮೌದ್ಗಿಲ್‌ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಆನೇಕಲ್‌ ತಾಲೂಕಿನ ಬುಕ್ಕ ಸಾಗರದ ಭೂ ಹಗರಣ ಸಂಬಂಧ ಭೂ ಮಾಪನಾ ಇಲಾಖೆ ಆಯುಕ್ತರ ವರದಿ ಬಂದಿದೆ. ಅದರನ್ವಯ ತನಿಖೆ ನಡೆಸಲು ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

-ಎಂ.ಚಂದ್ರಶೇಖರ್‌, ಎಸಿಬಿ ಐಜಿಪಿ.