ಇಲ್ಲಿನ ಖ್ಯಾತ ಕಿಂಗ್ ಎಡ್ವರ್ಡ್ ಆಸ್ಪತ್ರೆಯ ವೈದ್ಯರ ಮೇಲೆ ಶಿವಸೇನೆಯ 5 ಸದಸ್ಯರು ಹಲ್ಲೆ ಮಾಡಿ ತಲೆಗೆ ಹೊಡೆದಿದ್ದಾರೆ.  ಇಬ್ಬರು ಹಲ್ಲೆಗಾರರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಮುಂಬೈ (ಸೆ.30): ಇಲ್ಲಿನ ಖ್ಯಾತ ಕಿಂಗ್ ಎಡ್ವರ್ಡ್ ಆಸ್ಪತ್ರೆಯ ವೈದ್ಯರ ಮೇಲೆ ಶಿವಸೇನೆಯ 5 ಸದಸ್ಯರು ಹಲ್ಲೆ ಮಾಡಿ ತಲೆಗೆ ಹೊಡೆದಿದ್ದಾರೆ. ಇಬ್ಬರು ಹಲ್ಲೆಗಾರರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ನಿನ್ನೆ ನಡೆದ ರೈಲು ದುರಂತದಲ್ಲಿ ಮೃತಪಟ್ಟವರನ್ನು ಗುರುತಿಸಲು ಅವರ ಹಣೆ ಮೇಲೆ ಮಾರ್ಕ್ ಮಾಡಲಾಗಿತ್ತು. ಇದರಿಂದ ಆಕ್ರೋಶಗೊಂಡ ಶಿವಸೇನೆ ಸದಸ್ಯರು ಆಸ್ಪತ್ರೆಯ ವೈದ್ಯ ಡಾ. ಹರೀಶ್ ಪಾಥಕ್ ಮೇಲೆ ಹಲ್ಲೆ ನಡೆಸಿದ್ದಾರೆ. ಮೃತದೇಹದ ಮೇಲೆ ಹೀಗೆಲ್ಲಾ ಬರೆಯುವುದು ಅವರಿಗೆ ಅಗೌರವ ತೋರಿದಂತಾಗುತ್ತದೆ ಎಂದು ಶಿವಸೇನೆ ಸದಸ್ಯರು ಹೇಳಿದ್ದಾರೆ.

ಮೃತರ ಸಂಬಂಧಿಕರಿಗೆ ಗುರುತಿಸಲು ಅನುಕೂಲವಾಗಲಿ ಎಂದು ಅವರ ಹಣೆ ಮೇಲೆ ನಂಬರ್ ಹಾಕಿದ್ದೇವೆ. ತಮ್ಮ ತಮ್ಮ ಸಂಬಂಧಿಕರು, ಸ್ನೇಹಿತರನ್ನು ನೋಡಲು ನೂರಾರು ಜನರು ಬರುವುದರಿಂದ ಅನುಕೂಲದ ದೃಷ್ಟಿಯಿಂದ ಅವರ ಹಣೆ ಮೇಲೆ ಬರೆದಿದ್ದೇವೆ. ಮೃತದೇಹವನ್ನು ಗುರುತಿಸಿದ ನಂತರ ಹಣೆ ಮೇಲಿರುವ ಮಾರ್ಕನ್ನು ತೆಗೆದು ಅವರಿಗೆ ಹಸ್ತಾಂತರಿಸಿದ್ದೇವೆ. ಜನರ ಭಾವನೆಗೆ ನೋವುಂಟು ಮಾಡುವ ಉದ್ದೇಶ ನಮಗಿರಲಿಲ್ಲ ಎಂದು ಡಾ. ಹರೀಶ್ ಸ್ಪಷ್ಟನೆ ನೀಡಿದ್ದಾರೆ.

ದಾಳಿಯ ನಂತರ ಕೆಲವು ಆಸ್ಪತ್ರೆ ಸಿಬ್ಬಂದಿಗಳು ಭಯದಿಂದ ಕರ್ತವ್ಯಕ್ಕೆ ಹಾಜರಾಗಲು ನಿರಾಕರಿಸಿದ್ದಾರೆ.