ಮುಂಬೈ(ಸೆ.22): ಮಹಾರಾಷ್ಟ್ರದ ರಾಯ್‌ಗಡ ಜಿಲ್ಲೆಯ ಉರಾನ್ ನಾಕಾ ನೆಲೆಯ ಸಮೀಪ ಕೆಲವರು ಸಂಶಯಾಸ್ಪದವಾಗಿ ಸುಳಿದಾಡುತ್ತಿದ್ದರೆನ್ನಲಾದ ಹಿನ್ನೆಲೆಯಲ್ಲಿ ಮುಂಬೈ ಕರಾವಳಿ ಹಾಗೂ ಪಕ್ಕದ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ. ಶಸ್ತ್ರಾಸ್ತ್ರಗಳು ಮತ್ತು ಬೆನ್ನಲ್ಲಿ ಬ್ಯಾಗ್‌ಗಳನ್ನು ಹೊಂದಿದ್ದರೆನ್ನಲಾದ ಐದರಿಂದ ಆರು ಮಂದಿ ಪಠಾಣ್ ಸೂಟ್ ಧರಿಸಿ ಸಂಶಯಾತ್ಮಕವಾಗಿ ಕಂಡು ಬಂದಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು ಎಂದು ನೌಕಾ ವಕ್ತಾರ ರಾಹುಲ್ ಸಿನ್ಹಾ ಹೇಳಿದ್ದಾರೆ. ಕೆಲವು ವರದಿಗಳ ಪ್ರಕಾರ, ಅವರು ಸೇನಾ ಸಮವಸ್ತ್ರ ಧರಿಸಿದ್ದರೆಂದೂ ಹೇಳಲಾಗಿದೆ.
ಉರಿ ಭಯೋತ್ಪಾದಕ ದಾಳಿ ಹಾಗೂ ಸಂಶಯಾತ್ಮಕ ವ್ಯಕ್ತಿಗಳು ಓಡಾಡಿದ್ದ ವದಂತಿಗಳು ಹಬ್ಬಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ), ರಾಜ್ಯ ಪೊಲೀಸರ ವಿಶೇಷ ಕಮಾಂಡೊ ದಳ ಮತ್ತು ಭಯೋತ್ಪಾದಕ ನಿಗ್ರಹ ದಳ (ಎಟಿಎಸ್)ಗಳು ತಕ್ಷಣವೇ ಎಚ್ಚೆತ್ತುಕೊಂಡು ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿವೆ. ಅಲ್ಲದೆ ಹುಡುಕಾಟ ಕಾರ್ಯವನ್ನೂ ನಡೆಸಿವೆ. ಉರಾನ್ ಮತ್ತು ಕಾರಂಜ ಪ್ರದೇಶದಲ್ಲಿ ನಾಲ್ವರು ಶಾಲಾ ವಿದ್ಯಾರ್ಥಿಗಳು ಈ ಸಂಶಯಾಸ್ಪದ ವ್ಯಕ್ತಿಗಳನ್ನು ಕಂಡಿದ್ದಾರೆ. ಮಹಾರಾಷ್ಟ್ರ ಪೊಲೀಸರು ಹಾಗೂ ಇತರ ಸಂಸ್ಥೆಗಳ ಸಹಯೋಗದೊಂದಿಗೆ ಶೋಧನಾ ಕಾರ್ಯಾಚರಣೆ ನಡೆಸಿದ್ದೇವೆ ಎಂದು ನೌಕಾ ಮುಖ್ಯಸ್ಥರ ಪಿಆರ್‌ಒ ಕ್ಯಾಪ್ಟನ್ ಡಿಕೆ ಶರ್ಮಾ ಹೇಳಿದ್ದಾರೆ. ಎಲ್ಲ ಪೊಲೀಸ್ ಠಾಣೆಗಳಿಗೆ ಈ ಸಂಬಂಧ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸ್ ಡಿಜಿ ಸತೀಶ್ ಮಾಥುರ್ ತಿಳಿಸಿದ್ದಾರೆ.
ನೌಕಾ ದಳ ತನ್ನ ಹೆಲಿಕಾಪ್ಟರ್‌ಗಳ ಮೂಲಕ ವೈಮಾನಿಕ ಕಣ್ಗಾವಲು ನಡೆಸಿದೆ. ಸಮುದ್ರದಲ್ಲಿ ತಮ್ಮ ಅತಿ ವೇಗದ ಬೋಟ್‌ಗಳ ಮೂಲಕವೂ ಹುಡುಕಾಟ ಕಾರ್ಯಾಚರಣೆ ನಡೆಸಿದೆ. ಮುಂಬೈ ಮತ್ತು ನವಿ ಮುಂಬೈ, ಠಾಣೆ, ರಾಯ್‌ಗಡ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪಶ್ಚಿಮ ನೌಕಾ ಕಮಾಂಡ್ (ಡಬ್ಲ್ಯೂಎನ್‌ಸಿ) ತೀವ್ರ ಕಟ್ಟೆಚ್ಚರ ಘೋಷಿಸಿದೆ. ಉರಾನ್ ಸಮೀಪ ಪಶ್ಚಿಮ ಭಾರತದ ಅತಿದೊಡ್ಡ ನೌಕಾ ನೆಲೆ, ಬಾಬಾ ಆಟೊಮಿಕ್ ಸಂಶೋಧನಾ ಕೇಂದ್ರ, ರಾಸಾಯನಿಕ ಸ್ಥಾವರ, ಸಂಸ್ಕರಣಾ ಘಟಕಗಳು, ವಿದ್ಯುತ್ ಸ್ಥಾವರಗಳು ಮ್ತಯ ದೇಶದ ಅತಿದೊಡ್ಡ ಕಂಟೈನರ್ ಬಂದರು, ಜೆಎನ್‌ಪಿಟಿ ಮುಂತಾದ ಸಂಸ್ಥೆಗಳಿವೆ.
