ಮಂಗಳೂರು[ಆ.05]: ಮಹಾಮಳೆಯಿಂದ ತತ್ತರಿಸಿರುವ ಮುಂಬೈ ವಿಭಾಗ ಸಂಪರ್ಕಿಸುವ ಎಲ್ಲ ರೈಲುಗಳನ್ನು ಮುಂದಿನ 24 ಗಂಟೆ ಅವಧಿ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ಮಂಗಳೂರಿನಿಂದ ಹೊರಟ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ಕುಂದಾಪುರದಿಂದ ವಾಪಾಸಾಗಿದೆ.

ಮಧ್ಯಾಹ್ನ 12.50 ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಡಬೇಕಾಗಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ (ನಂ.12620) ಒಂದು ಗಂಟೆ ವಿಳಂಬವಾಗಿ 1.50 ಕ್ಕೆ ಪ್ರಯಾಣ ಆರಂಭಿಸಿತ್ತು. ರೈಲು ಕುಂದಾಪುರ ನಿಲ್ದಾಣ ತಲುಪುವ ವೇಳೆಗೆ ಮುಂಬಯಿ ವಿಭಾಗ ಸಂಪರ್ಕಿಸುವ ಎಲ್ಲ ರೈಲುಗಳನ್ನು ರದ್ದುಪಡಿಸಿರುವ ಸಂದೇಶ ಇಲಾಖೆ ಅಧಿಕಾರಿಗಳಿಗೆ ದೊರೆತಿದೆ. ಕೂಡಲೇ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲಿನ ಕುಂದಾಪುರ ಮತ್ತು ಮುಂಬಯಿ ನಡುವಿನ ಪ್ರಯಾಣವನ್ನು ರದ್ದುಗೊಳಿಸಲಾಯಿತು.

ಇದೇ ಸಂದರ್ಭ ಮುಂಬಯಿಯಿಂದ ಮಂಗಳೂರು ಸೆಂಟ್ರಲ್‌ಗೆ ಹೊರಡಬೇಕಾಗಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ (ನಂ.12619) ಕೂಡಾ ರದ್ದುಗೊಳಿಸಲಾಗಿದೆ.

ತಿರುವನಂತಪುರದಿಂದ ಬೆಳಗ್ಗೆ ಪ್ರಯಾಣ ಆರಂಭಿಸಿದ ನೇತ್ರಾವತಿ ಎಕ್ಸ್‌ಪ್ರೆಸ್‌ (ನಂ.16346) ಕೇರಳದ ಶೋರ್ನೂರು ತನಕ ಸಂಚರಿಸಿದೆ, ಅಲ್ಲಿಂದ ಕುರ್ಲಾ ವರೆಗಿನ ಪ್ರಯಾಣ ರದ್ದುಪಡಿಸಲಾಯಿತು. ಕೊಚುವೆಲಿ- ಕುರ್ಲಾ ಗರೀಬ್‌ ರಥ್‌ ಎಕ್ಸ್‌ಪ್ರೆಸ್‌ (ನಂ. 12202) ಭಾನುವಾರ ಕಣ್ಣೂರು ತನಕ ಪ್ರಯಾಣಿಸಿದ್ದು, ಅಲ್ಲಿಂದ ಕುರ್ಲಾ ತನಕದ ಪ್ರಯಾಣವನ್ನು ರದ್ದುಪಡಿಸಲಾಯಿತು.

ಕುರ್ಲಾ- ತಿರುವನಂತಪುರ ನೇತ್ರಾವತಿ ಎಕ್ಸ್‌ಪ್ರೆಸ್‌ (ನಂ.16345), ಮಂಗಳೂರು ಜಂಕ್ಷನ್‌- ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಲ್‌ (ಸಿಎಸ್‌ಎಂಟಿ) ಎಕ್ಸ್‌ಪ್ರೆಸ್‌ (ನಂ.12134), ಸಿಎಸ್‌ಎಂಟಿ- ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ (ನಂ.12133), ಮಂಗಳೂರು ಸೆಂಟ್ರಲ್‌- ಸಿಎಸ್‌ಎಂಟಿ ಕೊಂಕಣ್‌ ಕನ್ಯಾ ಎಕ್ಸ್‌ಪ್ರೆಸ್‌ (ನಂ.10112), ಸಿಎಸ್‌ಎಂಟಿ- ಮಂಗಳೂರು ಸೆಂಟ್ರಲ್‌ ಕೊಂಕಣ್‌ ಕನ್ಯಾ ಎಕ್ಸ್‌ಪ್ರೆಸ್‌ (ನಂ.10111), ಸಿಎಸ್‌ಎಂಟಿ- ಮಂಗಳೂರು ಸೆಂಟ್ರಲ್‌ ಮಾಂಡೋವಿ ಎಕ್ಸ್‌ಪ್ರೆಸ್‌ (ನಂ.10103), ಎರ್ನಾಕುಳಂ- ಕುರ್ಲಾ ಎಸಿ ತುರಂತೊ ಎಕ್ಸ್‌ಪ್ರೆಸ್‌ (ನಂ.12224) ಭಾನುವಾರದ ಪ್ರಯಾಣ ರದ್ದುಗೊಳಿಸಲಾಗಿದೆ.

ಇಂದು ಇಂದು ಕೊಚುವೆಲಿ- ಕುರ್ಲಾ ಇಲ್ಲ: ಕೊಚುವೆಲಿ (ತಿರುವನಂತಪುರ)- ಕುರ್ಲಾ (ಮುಂಬಯಿ) ನಂ. 22114 ಎಕ್ಸ್‌ಪ್ರೆಸ್‌ ಆ.5 ರಂದು ಪ್ರಯಾಣಿಸುವುದಿಲ್ಲ ಎಂದು ಕೊಂಕಣ್‌ ರೈಲ್ವೇ ಪ್ರಕಟಣೆ ತಿಳಿಸಿದೆ.