ಭಾರತೀಯ ಚುಟುಕು ಕ್ರಿಕೆಟ್'ನಲ್ಲಿ ದಾಖಲಾದ ಮೊದಲ ದ್ವಿಶತಕ ಇದು. ಮುಂಬೈ'ನ ರಿಜ್ವಿ ಕಾಲೇಜಿನ ರುದ್ರ ದಾಂಢೆ ದ್ವಿಶತಕ ದಾಖಲಿಸಿದ ಧೀರ.

ಮುಂಬೈ(ಮೇ.13): ಟಿ20'ಯಲ್ಲಿ 67 ಚಂಡುಗಳಲ್ಲಿ 200 ರನ್' ದ್ವಿಶತಕ ಸಿಡಿಸಿದರೆ ಹೀಗಿರುತ್ತೆ ? ಈ ಮೊದಲು ಆರ್'ಸಿಬಿ ಪರ ಪುಣೆ ವಾರಿಯರ್ ವಿರುದ್ಧ ಕ್ರಿಸ್ ಗೇಲ್ 66 ಚಂಡುಗಳಲ್ಲಿ 175 ರನ್ ಬಾರಿಸಿದ್ದರು.

ಆದರೀಗ 19 ವರ್ಷದ ವಿದ್ಯಾರ್ಥಿಯೊಬ್ಬ ಗೇಲ್ ದಾಖಲೆಯನ್ನು ಮೀರಿಸಿದ್ದಾನೆ. ಅಂತರ ಕಾಲೇಜು ಟಿ20 ಕ್ರಿಕೆಟ್ ಪಂದ್ಯದಲ್ಲಿ ಕೇವಲ 67 ಬಾಲ್‌ಗಳಲ್ಲಿ 200 ರನ್ ಬಾರಿಸಿದ್ದಾನೆ. ಭಾರತೀಯ ಚುಟುಕು ಕ್ರಿಕೆಟ್'ನಲ್ಲಿ ದಾಖಲಾದ ಮೊದಲ ದ್ವಿಶತಕ ಇದು.

ಮುಂಬೈ'ನ ರಿಜ್ವಿ ಕಾಲೇಜಿನ ರುದ್ರ ದಾಂಢೆ ದ್ವಿಶತಕ ದಾಖಲಿಸಿದ ಧೀರ. ಮುಂಬೈ ಕ್ರಿಕೆಟ್ ಸಂಸ್ಥೆ ಆಶ್ರಯದಲ್ಲಿ ಇಲ್ಲಿನ ಮಾತುಂಗಾ ಜಿಮ್ಖಾನಾ ಮೈದಾನದಲ್ಲಿ ನಡೆದ ಅಬಿಸ್ ರಿಜ್ವಿ ಚಾಂಪಿಯನ್ಸ್ ಟ್ರೋಫಿ ಸೂಪರ್-8 ಕಾಲೇಜು ಪಂದ್ಯಾವಳಿಯಲ್ಲಿ ಪಿ ದಾಲ್ಮಿಯ ಕಾಲೇಜಿನ ವಿರುದ್ಧ ರುದ್ರ ದಾಂಢೆ ಈ ಸಾಧನೆ ಮಾಡಿದ್ದಾನೆ.

ಈತ ಶತಕ ಸಿಡಿಸಿದ್ದು ಕೇವಲ 39 ಚಂಡುಗಳಲ್ಲಿ. ನಂತರ 67 ಎಸೆತಗಳಲ್ಲಿ 21 ಬೌಂಡರಿ, 15 ಸಿಕ್ಸರ್ ಬಾರಿಸುವ ಮೂಲಕ 200 ರನ್‌ ಸಿಡಿಸಿದ್ದಾನೆ. ರುದ್ರನ ಸ್ಪೋಟಕ ಬ್ಯಾಟಿಂಗ್'ನಿಂದಾಗಿ ರಿಜ್ವಿ ಕಾಲೇಜು 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 322 ರನ್ ಪೇರಿಸಿತು. ಇಷ್ಟು ಬೃಹತ್ ಮೊತ್ತದ ರನ್ ಬೆನ್ನಟ್ಟಿದ ದಾಲ್ಮಿಯ ಕಾಲೇಜು ಕೇವಲ 10.2 ಓವರ್‌ಗಳಲ್ಲಿ 75 ರನ್‌ಗಳಿಗೆ ಆಲ್'ಔಟ್ ಆಯಿತು. ರುದ್ರನ ತಂಡ 247 ರನ್‌ಗಳ ಭಾರೀ ಅಂತರದಿಂದ ಜಯಗಳಿಸಿತು.