ರಾಜ್ಯ ಸರ್ಕಾರ ಜನತೆಗೆ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆ ನೀಡುತ್ತಿದೆ ಎಂದು ವಿಕಾಸ ಸೌಧದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಆಹಾರ ಸಚಿವ ಯುಟಿ ಖಾದರ್ ಹೇಳಿದ್ದಾರೆ.
ಬೆಂಗಳೂರು (ಜೂ.16): ರಾಜ್ಯ ಸರ್ಕಾರ ಜನತೆಗೆ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆ ನೀಡುತ್ತಿದೆ ಎಂದು ವಿಕಾಸ ಸೌಧದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಆಹಾರ ಸಚಿವ ಯುಟಿ ಖಾದರ್ ಹೇಳಿದ್ದಾರೆ.
ಬಿಪಿಎಲ್ ಕುಟುಂಬಗಳಿಗೆ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಗೆ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಈ ಯೋಜನೆಯಡಿ ಉಚಿತ ಅನಿಲ ಸಂಪರ್ಕ, ಟ್ಯೂಬ್, ಕನೆಕ್ಟರ್, ಸ್ಟವ್ ಮತ್ತು ರೆಗ್ಯೂಲೇಟರ್ ನೀಡಲಾಗುವುದು. ಪ್ರತಿ ಅನಿಲ ಸಂಪರ್ಕಕ್ಕೆ 2,940 ರೂ. ಖರ್ಚಾಗಲಿದೆ. ಯೋಜನೆಯಿಂದ ಸರ್ಕಾರದ ಮೇಲೆ ಎಷ್ಟೇ ಹೊರೆ ಬಿದ್ದರೂ ಭರಿಸುತ್ತೇವೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.
ಉಚಿತ ಗ್ಯಾಸ್ ಸಂಪರ್ಕವನ್ನು ಗ್ರಾಮ ಪಂಚಾಯತ್‌ಗಳಲ್ಲಿ ಅರ್ಜಿ ಹಾಕಿ ಪಡೆಯಬೇಕು. ಈಗಾಗಲೇ ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ, 2.5 ಲಕ್ಷ ಜನರು ಫಲಾನುಭವಿಗಳಿದ್ದಾರೆ. ಆದರೆ ಉಜ್ವಲ ಯೋಜನೆಯಡಿ ಸ್ಟೋವ್ ನೀಡುತ್ತಿಲ್ಲ, ಅಲ್ಲದೇ 21 ಲಕ್ಷ ಕುಟುಂಬಗಳು ಇನ್ನೂ ಗ್ಯಾಸ್ ಸಂಪರ್ಕ ಪಡೆದಿಲ್ಲ ಎಂದು ಇದೇ ವೇಳೆ ಸಚಿವರು ಹೇಳಿದ್ದಾರೆ.
ಇನ್ನೂ ಸಬ್ಸಿಡಿ ದರದಲ್ಲಿ ಮೀನುಗಾರರಿಗೆ ಸೀಮೆ ಎಣ್ಣೆ ವಿತರಿಸಲು ಸರ್ಕಾರ ಚಿಂತಿಸಿದೆ. ಇದಕ್ಕೆ ವಾರ್ಷಿಕ 60 ಕೋಟಿ ವೆಚ್ಚ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಅಂತೆಯೆ ಪುನರ್ ಬೆಳಕು ಯೋಜನೆಯಡಿಯಲ್ಲಿ 2 ಬಲ್ಬ್’ಗಳನ್ನು ಕೊಡಲಾಗುವುದು. ಮಾತ್ರವಲ್ಲದೆ ಬಿಪಿಎಲ್ ಕಾರ್ಡ್‌ದಾರರು ಸೀಮೆ ಎಣ್ಣೆ ಬೇಡ ಅಂದವರಿಗೆ 2 ಎಲ್’ಇಡಿ ರಿಚಾರ್ಜೆಬಲ್ ಬಲ್ಬ್ ನೀಡಲಾಗುತ್ತದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.
