ನವದೆಹಲಿ(ಸೆ.17): ಇವರ ಹೆಸರು ಯಾಕೂಬ್ ಹಬೀಬುದ್ದೀನ್ ಟೂಸಿ ಅಂತಾ. ಇವರು ಮೊಘಲ್ ಸಾಮ್ರಾಜ್ಯದ ಕೊನೆಯ ದೊರೆ ಬಹದ್ದೂರ್ ಶಾ ಜಫರ್ ಅವರ ವಂಶಸ್ಥ. ಹಾಗಂತ ಇವರೇ ಘೋಷಿಸಿಕೊಂಡಿದ್ದಾರೆ.

ಇಷ್ಟು ದಿನ ತೆರೆಮರೆಯಲ್ಲೇ ಇದ್ದ ಯಾಕೂಬ್ ಹಬೀಬುದ್ದೀನ್ ಟೂಸಿ, ಇದೀಗ ಏಕಾಏಕಿ ದೇಶದ ಮನೆ ಮಾತಾಗಿದ್ದಾರೆ. ಕಾರಣ ಯಾಕೂಬ್ ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ಅವರಿಗೆ ಪತ್ರ ಬರೆದಿದ್ದು, 1528ರಲ್ಲಿ ತಮ್ಮ ವಂಶಸ್ಥರು ರಾಮ ಮಂದಿರ ಕೆಡವಿ ಬಾಬರಿ ಮಸೀದಿ ಕಟ್ಟಿದ್ದಕ್ಕೆ ದೇಶದ ಹಿಂದೂಗಳ ಕ್ಷಮೆ ಕೋರುವುದಾಗಿ ತಿಳಿಸಿದ್ದಾರೆ.

ಖುದ್ದು ಸ್ವಾಮಿ ಚಕ್ರಪಾಣಿ ಅವರನ್ನು ಭೇಟಿಯಾಗಿ ತಮ್ಮ ಕ್ಷಮಾಪಣಾ ಪತ್ರ ಕೊಟ್ಟಿರುವ ಯಾಕೂಬ್, ಬಾಬರ್ ಸೇನಾ ಕಮಾಂಡರ್ ಮಿರ್ ಬಾಖ್ಹಿ 16ನೇ ಶತಮಾನದಲ್ಲಿ ರಾಮ ಮಂದಿರ ಕೆಡವಿ ಬಾಬರಿ ಮಸೀದಿ ಕಟ್ಟಿಸಿದ್ದ ಎಂದು ತಿಳಿಸಿದ್ದಾರೆ.

ಮೊಘಲ್ ದೊರೆಗಳ ಈ ಕ್ರೂರ ದಾಳಿಗೆ ತಾವು ದೇಶದ ಜನತೆಯ ಕ್ಷಮಾಪಣೆ ಕೋರುತ್ತಿದ್ದು, ಅಯೋಧ್ಯೆಯಲ್ಲೇ ರಾಮ ಮಂದಿರ ನಿರ್ಮಾಣಕ್ಕೆ ತಮ್ಮ ಬೆಂಬಲ ಇದೆ ಎಂದು ಯಾಕೂಬ್ ತಿಳಿಸಿದ್ದಾರೆ.

ಇದೇ ವೇಳೆ ಬಾಬರೀ ಮಸೀದಿ ಧ್ವಂಸ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿರುವವರ ವಿರುದ್ದ ಕಿಡಿಕಾರಿರುವ ಯಾಕೂಬ್, ಬಾಬರಿ ಮಸೀದಿ ಹೆಸರಲ್ಲಿ ಇವರೆಲ್ಲಾ ಕೊಳಕು ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.