ಶ್ರೀನಗರ[ಆ.06]: ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರಗಳು ಹಾಗೂ ರಹಸ್ಯ ಕಾರ್ಯಾಚರಣೆ ಹಿಂದೆ ‘ಎಂಎಸ್‌ಡಿ’ ಪ್ರಮುಖ ಪಾತ್ರವಿದೆ.

‘ಎಂಎಸ್‌ಡಿ’ ಎಂದರೆ ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಅಲ್ಲ. ಬದಲಿಗೆ ಮೋದಿ- ಶಾ- ದೋವಲ್‌ (ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌).

ಬಿಜೆಪಿಯ ಪ್ರಣಾಳಿಕೆಯಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮಹತ್ವದ ಘೋಷಣೆ ಇತ್ತು. ಆ ನಿಟ್ಟಿನಲ್ಲಿ ಈ ಮೂವರನ್ನೂ ಒಳಗೊಂಡ ತಂಡ ರಹಸ್ಯವಾಗಿ ಭೂಮಿಕೆ ಸಿದ್ಧಪಡಿಸಿದ್ದು ಈಗ ಗುಟ್ಟಾಗಿ ಉಳಿದಿಲ್ಲ.

ಲೋಕಸಭೆ ಚುನಾವಣೆಯ ಜತೆಗೇ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ನಡೆಸುವ ಅವಕಾಶವಿತ್ತು. ಜುಲೈ ವೇಳೆಗಾದರೂ ಮತದಾನಕ್ಕೆ ಅವಕಾಶ ನೀಡಬಹುದಿತ್ತು. ಆದರೆ ಅಮರನಾಥ ಯಾತ್ರೆ ಮತ್ತಿತರ ಕಾರಣ ನೀಡಿ ಚುನಾವಣೆಯನ್ನು ಆರು ತಿಂಗಳ ಕಾಲ ಮುಂದೂಡಿದ್ದು ಏಕೆ ಎಂಬ ರಹಸ್ಯ ಈಗ ಗೋಚರವಾಗುತ್ತಿದೆ.

ಆಪರೇಷನ್ ಕಾಶ್ಮೀರ, ಆರ್ಟಿಕಲ್ 370 ರದ್ದು: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಸರ್ಜಿಕಲ್‌ ಸ್ಟೆ್ರೖಕ್‌, ಬಾಲಾಕೋಟ್‌ ಮೇಲಿನ ದಾಳಿ ಹಿಂದೆ ಮೋದಿ ಹಾಗೂ ಅಜಿತ್‌ ದೋವಲ್‌ ಅವರ ಪಾತ್ರ ದೊಡ್ಡದು. ಈಗ ಆ ತಂಡದಲ್ಲಿ ಗೃಹ ಸಚಿವರಾಗಿರುವ ಅಮಿತ್‌ ಶಾ ಅವರೂ ಗುರುತಿಸಿಕೊಂಡಿದ್ದಾರೆ. ಈ ತಂಡ ಏನೇ ಮಾಡುವುದಿದ್ದರೂ ರಹಸ್ಯವಾಗಿಯೇ ಮಾಡುತ್ತದೆ.

ಜಮ್ಮು-ಕಾಶ್ಮೀರಕ್ಕೆ ಏಕಾಏಕಿ 38 ಸಾವಿರ ಯೋಧರನ್ನು ನಿಯೋಜನೆ ಮಾಡಿದ್ದು ಬಿಟ್ಟರೆ, ಯಾವ ಉದ್ದೇಶ ಇಟ್ಟುಕೊಂಡು ಅದನ್ನು ಮಾಡಲಾಗುತ್ತಿದೆ ಎಂಬ ಸಣ್ಣ ಸುಳಿವನ್ನೂ ಬಿಟ್ಟುಕೊಡಲಿಲ್ಲ. ನಾನಾ ವದಂತಿಗಳು ಹಬ್ಬುತ್ತಿದ್ದರೂ ತಲೆಕೆಡಿಸಿಕೊಳ್ಳಲಿಲ್ಲ.

ಶಂಕಿತ ಉಗ್ರರನ್ನೂ ಉಗ್ರಗಾಮಿಗಳೆಂದು ಘೋಷಿಸುವ ಮಹತ್ವದ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ ಅಂಗೀಕಾರದ ಹಿಂದೆಯೂ ಇದೇ ತಂಡ ಕೆಲಸ ಮಾಡಿತ್ತು. ಸಂವಿಧಾನದ 370ನೇ ವಿಧಿಯನ್ನು ನಿಷ್ಕ್ರಿಯಗೊಳಿಸುವಲ್ಲಿ ಸಫಲವಾಗಿರುವ ಈ ತಂಡ ಪಾಕ್‌ ಆಕ್ರಮಿತ ಕಾಶ್ಮೀರವನ್ನೂ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಾ ಎಂಬುದನ್ನು ನೋಡಬೇಕಾಗಿದೆ.