Published : Jun 12 2017, 11:28 AM IST| Updated : Apr 11 2018, 01:05 PM IST
Share this Article
FB
TW
Linkdin
Whatsapp
ಬೆಂಗಳೂರಿನ ಕೆರೆಗಳ ಸಂರಕ್ಷಣೆಗೆ ಅವಿರತವಾಗಿ ಶ್ರಮಿಸುತ್ತಿರುವ ಸಂಸದ ರಾಜೀವ್‌ ಚಂದ್ರಶೇಖರ್‌ ಅವರೊಂದಿಗೆ ತಾವೂ ಕೂಡ ಕೈಜೋಡಿಸುತ್ತಿರುವುದಾಗಿ ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ಪತ್ನಿ ಶಿಲ್ಪಾ ಗಣೇಶ್‌ ಹೇಳಿದ್ದಾರೆ.
ಬೆಂಗಳೂರು(ಜೂ.12): ಬೆಂಗಳೂರಿನ ಕೆರೆಗಳ ಸಂರಕ್ಷಣೆಗೆ ಅವಿರತವಾಗಿ ಶ್ರಮಿಸುತ್ತಿರುವ ಸಂಸದ ರಾಜೀವ್ ಚಂದ್ರಶೇಖರ್ ಅವರೊಂದಿಗೆ ತಾವೂ ಕೂಡ ಕೈಜೋಡಿಸುತ್ತಿರುವುದಾಗಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪತ್ನಿ ಶಿಲ್ಪಾ ಗಣೇಶ್ ಹೇಳಿದ್ದಾರೆ.
ನಗರದ ಕೆರೆಗಳ ಸಂರಕ್ಷಣೆ ವಿಚಾರದಲ್ಲಿ ರಾಜೀವ್ ಚಂದ್ರಶೇಖರ್ ಅವರನ್ನು ‘ಲೇಕ್ಮ್ಯಾನ್' ಎಂದು ಬಣ್ಣಿಸಬಹುದು ಎಂದೂ ಅವರು ಹೇಳಿದ್ದಾರೆ. ಆರ್ಆರ್ ನಗರ ಐ ಕೇರ್ ಸಂಸ್ಥೆಯು, ಯುನೈಟೆಡ್ ಬೆಂಗಳೂರು ಮತ್ತು ದಿ ಫಾರ್ವರ್ಡ್ ಫೌಂಡೇಷನ್ ಸಹಯೋಗದಲ್ಲಿ ಭಾನುವಾರ ರಾಜರಾಜೇಶ್ವರಿ ನಗರದ ಹಲಗೇವಡೇರಹಳ್ಳಿ ಕೆರೆಯಂಗಳದಲ್ಲಿ ಆಯೋಜಿಸಿದ್ದ ‘ಕೆರೆ ಹಬ್ಬ' ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರ ರೊಂದಿಗೆ ಮಾತನಾಡಿದರು.
ಬೆಳ್ಳಂದೂರು ಕೆರೆ ಸೇರಿದಂತೆ ನಗರದ ಹಲವು ಕೆರೆಗಳ ಒತ್ತುವರಿ ತೆರವು, ಪರಿಸರ ಸಂರಕ್ಷಣೆಗಾಗಿ ರಾಜೀವ್ ಅವರು ನಿರಂತರವಾಗಿ ಹೋರಾಡುತ್ತಿದ್ದಾರೆ. ಜತೆಗೆ ನಮ್ಮ ಬೆಂಗಳೂರು ಫೌಂಡೇಷನ್ ಮತ್ತು ಯುನೈಟೆಡ್ ಬೆಂಗಳೂರು ಸಂಸ್ಥೆಗಳೂ ಕೆರೆಗಳ ಸಂರಕ್ಷಣೆಯಲ್ಲಿ ತೊಡಗಿವೆ. ಇವರೊಂದಿಗೆ ನಾವೂ ಕೂಡ ಸೇರಿ ಅವರ ಕೈ ಬಲಪಡಿಸುತ್ತೇವೆ. ಈ ಸಂಬಂಧ ರಾಜೀವ್ ಚಂದ್ರಶೇಖರ್ ಅವರೊಂದಿಗೂ ಈಗಾಗಲೇ ಮಾತನಾಡಿದ್ದೇವೆ ಎಂದು ಹೇಳಿದರು.
ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಗಣೇಶ್, ಯುನೈಟೆಡ್ ಬೆಂಗಳೂರು ಸಂಸ್ಥೆ ಜತೆಗೂಡಿ ಜೆ.ಪಿ. ನಗರದ ಪಟ್ಟೇನಹಳ್ಳಿ ಕೆರೆಯ ಮೂಲಕ ಆರಂಭವಾದ ನಮ್ಮ ಕೆರೆ ಅಭಿವೃದ್ಧಿ ಅಭಿಯಾನ, ಈಗ ಹಲಗೇವಡೇರಹಳ್ಳಿ ಕೆರೆ ತಲುಪಿದೆ. ಕೆರೆ ಸಂರಕ್ಷಣೆ, ನಾನು ಅಭಿವೃದ್ಧಿ ಕಾರ್ಯದಲ್ಲಿ ತೊಡಗಲು ಪತ್ನಿ ಶಿಲ್ಪಾ ಕಾರಣ. ರಾಜರಾಜೇಶ್ವರಿ ನಗರದ ಸುತ್ತಮುತ್ತಲ ಕೆರೆಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸ ಬೇಕು ಎಂಬುದು ಅವರ ಆಶಯ. ಇದಕ್ಕಾಗಿ ನಾನು ಸರ್ಕಾರದೊಂದಿಗೆ ಗುದ್ದಾಡಲು ನಾನು ಸಿದ್ಧನಿದ್ದೇನೆ. ಸಾರ್ವಜನಿಕರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಯುನೈಟೆಡ್ ಬೆಂಗಳೂರು ಸಂಯೋಜಕ ಸುರೇಶ್, ಆರ್.ಆರ್. ನಗರ ಐಕೇರ್ ಸಂಸ್ಥೆಯ ಶ್ರೀವತ್ಸ, ಸ್ಥಳೀಯ ಪಾಲಿಕೆ ಸದಸ್ಯೆ ನಳಿನಿ ಮಂಜುನಾಥ್, ಮಾಜಿ ಪಾಲಿಕೆ ಸದಸ್ಯ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.
6.11 ಎಕರೆ ಕೆರೆ ಜಾಗ ಒತ್ತುವರಿ!
ಹಲಗೆವಡೇರಹಳ್ಳಿ ಕೆರೆಯ 6.11 ಎಕರೆಯಷ್ಟು(ಶೇ.36) ಜಾಗ ಒತ್ತುವರಿಯಾಗಿದ್ದು, ಒತ್ತುವರಿ ತೆರವು ಮಾಡಲು ಬಿಬಿಎಂಪಿ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಬೆಂಗಳೂರು ಫೌಂಡೇಷನ್ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(ಸಿಇಓ) ಶ್ರೀಧರ್ ಪಬ್ಬಿಸೆಟ್ಟಿಆಗ್ರಹಿಸಿದ್ದಾರೆ.
ಇರುವ ಕರೆ ಸಂರಕ್ಷಣೆ, ಅಭಿವೃದ್ಧಿ ಜತೆಗೆ ಒತ್ತುವರಿಯಾಗಿರುವ ಜಾಗ ತೆರವು ಮಾಡುವುದು ಅತ್ಯಂತ ಮುಖ್ಯ. ಇಲ್ಲದಿದ್ದರೆ ಮುಂದೊಂದು ದಿನ ಕೆರೆ ಪೂರ್ಣ ಒತ್ತುವರಿಯಾಗುತ್ತದೆ. ಅಲ್ಲದೆ, ಕರೆಗೆ ತ್ಯಾಜ್ಯ ನೀರು ಹರಿಯುತ್ತಿದೆ. ಇದನ್ನು ತಡೆಯಲು ಬಿಬಿಎಂಪಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಅಳವಡಿಸಬೇಕು ಎಂದು ಒತ್ತಾಯಿಸಿದರು. ಕೇವಲ ವಾಯುವಿಹಾರ, ವಾಕಿಂಗ್, ಜಾಗಿಂಗ್ಗಾಗಿ ಕರೆ ಉಳಿಸುವುದಲ್ಲ. ಕಳೆದ 500 ವರ್ಷಗಳಿಂದ ನಗರವನ್ನು ಕಟ್ಟಿಬೆಳೆಸಿದ ಮಹನೀಯರು ಕೆರೆಗಳನ್ನು ನಿರ್ಮಿಸಿ, ಸಸಿಗಳನ್ನು ನೆಟ್ಟು ಸುಂದರ ನಗರವನ್ನು ನೀಡಿದ್ದರು.
ಸಾವಿರ ಕೆರೆಗಳ ನಗರಿಯಾಗಿದ್ದ ಬೆಂಗಳೂರು ಇಂದು ಕೆಲವೇ ಕೆರೆಗಳ ನಗರವಾಗಿದೆ. ಕಳೆದ 30 ವರ್ಷಗಳಿಂದ ಕೆರೆಗಳ ನಾಶ ಹೆಚ್ಚಾಗಿದೆ. ಕೆರೆಗಳನ್ನು ಉಳಿಸಲು ಸಾರ್ವಜನಿಕರು ಮುಂದಾಗಬೇಕು ಎಂದು ಕರೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.