ಕನ್ನಡಿಗರು 'ಹರಾಮಿ'ಗಳೆಂದು ಕರೆದ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಂಕರ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಹರಿಹಾಯ್ದಿದ್ದು, ಸೂಕ್ತ ಪದ ಬಳಸಿ ಮಾತನಾಡದಿದ್ದಲ್ಲಿ, ಕರ್ನಾಟಕಕ್ಕೆ ಬರಲಿ, ನಾವು ಕಲಿಸುತ್ತೇವೆ, ಎಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಕನ್ನಡಿಗರು 'ಹರಾಮಿ'ಗಳೆಂದು ಕರೆದ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಂಕರ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಹರಿಹಾಯ್ದಿದ್ದು, ಸೂಕ್ತ ಪದ ಬಳಸಿ ಮಾತನಾಡದಿದ್ದಲ್ಲಿ, ಕರ್ನಾಟಕಕ್ಕೆ ಬರಲಿ, ನಾವು ಕಲಿಸುತ್ತೇವೆ, ಎಂದು ಟ್ವೀಟ್ ಮಾಡಿದ್ದಾರೆ.
ಉತ್ತರ ಕರ್ನಾಟಕದ ಕಂಕುಂಬಿ ಪ್ರದೇಶಲ್ಲಿ ಮಹದಾಯಿ ನೀರು ತಿರುಗಿಸುವ ಸ್ಥಳಕ್ಕೆ ಶನಿವಾರ ಪೊಲೀಸ್ ಭದ್ರತೆಯೊಂದಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಪಾಲೇಂಕರ್, 'ಇವರು ಹರಾಮಿಗಳು, ಏನು ಬೇಕಾದರೂ ಮಾಡಬಹುದು,' ಎಂದಿದ್ದರು.
ಗೋವಾ ಸಚಿವರ ಹೇಳಿಕೆಗೆ ರಾಜ್ಯದ ಎಲ್ಲೆಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಪ್ರತಾಪ್ ಸಿಂಹ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋವಾ ಸಿಎಂ ಮನೋಹರ್ ಪರಿಕರ್ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ, ಪ್ರತಾಪ್, 'ನಿಮ್ಮ ಸಚಿವರಿಗೆ ಸೂಕ್ತ ಪದಗಳನ್ನು ಬಳಸಿ ಮಾತನಾಡಲು ಸೂಚಿಸಿ,' ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ಸರಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಪ್ರತಾಪ್, 'ಮುಖ್ಯಮಂತ್ರಿಯವರೇ ಏಳಿ, ಎದ್ದೇಳಿ. ಮೇ.1ರವರೆಗೆ ನಿಮ್ಮ ಸ್ಥಾನವನ್ನು ತೊರೆಯುವ ತನಕವಾದರೂ, ನಮ್ಮ ರಾಜ್ಯದ ಮರ್ಯಾದೆ ಉಳಿಸಿ,' ಎಂದಿದ್ದಾರೆ.
'ಗೋವಾ ಜಲಸಂಪನ್ಮೂಲ ಸಚಿವ ತಮ್ಮ ರಾಜ್ಯದ ಎಂಜಿನಿಯರ್‌ಗಳೊಂದಿಗೆ ಕರ್ನಾಟಕಕ್ಕೆ ಭೇಟಿ ನೀಡಿ ಇಲ್ಲಿ ನಡೆಯುತ್ತಿರುವ ಕಾಮಗಾರಿ ಫೋಟೋ ತೆಗೆದುಕೊಳ್ಳುವ ಧೈರ್ಯ ತೋರುತ್ತಾರೆ. ಆದರೆ, ನಮ್ಮ ರಾಜ್ಯದ ಜಲಸಂಪನ್ಮೂಲ ಸಚಿವ ಅದೇ ಧೈರ್ಯದಿಂದ, ಗೋವಾದಲ್ಲಿ ನಡೆಯುತ್ತಿರುವ ಮೆಟ್ಟೂರ್ ಡ್ಯಾಂ ಕಾಮಗಾರಿಯನ್ನು ವೀಕ್ಷಿಸುತ್ತಾರೆಯೇ?' ಎಂದು ಪ್ರಶ್ನಿಸಿದ್ದಾರೆ.
