ಚಾಮರಾಜನಗರ/ಬೆಂಗಳೂರು[ಜೂ. 02]  ಇಂಥ ಗ್ರಾಮಗಳು ನಮ್ಮ ರಾಜ್ಯದಲ್ಲಿ ಅವೆಷ್ಟು ಇವೆಯೋ ಬಲ್ಲವರು ಯಾರು? ಚಿಂತಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ತಂಡ ಚಾಮರಾಜನಗರ ಜಿಲ್ಲೆ ಹನೂರು ಸಮೀಪದ ದೊಡ್ಡಾಣೆ ಎಂಬ ಗ್ರಾಮದ ವಾಸ್ತವಿಕ ಸ್ಥಿತಿಯನ್ನು ಪೋಟೋಗಳ ಸಮೇತ ತೆರೆದಿಟ್ಟಿದೆ. ಜತೆಗೆ ಜನಪ್ರತಿನಿಧಿಗಳಿಗೆ ಒಂದು ಚಾಲೆಂಜ್ ಅನ್ನು ನೀಡಿದೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಫಿಟ್ನೆಸ್ ಚಾಲೆಂಜ್ ನೀಡಿದ್ದನ್ನು ಅನೇಕರು ಸ್ವೀಕಾರ ಮಾಡಿದ್ದರು. ಆದರೆ ಈ ಬಾರಿ ಚಕ್ರವರ್ತಿ ಸೂಲಿಬೆಲೆ ಗ್ರಾಮಾಭಿವೃದ್ಧಿಯ ಚಾಲೆಂಜ್ ನೀಡಿದ್ದಾರೆ. ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸವಾಲನ್ನು ಸ್ವೀಕರಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಗ್ರಾಮದ ವ್ಯಥೆ ಹಂಚಿಕೊಂಡಿರುವ ಸೂಲಿಬೆಲೆ ಒಂದೊಂದೆ ವಿಚಾರಗಳನ್ನು ನಮ್ಮ ಮುಂದೆ ಇರಿಸುತ್ತಾ ಸಾಗುತ್ತಾರೆ. ಚಾಮರಾಜನಗರ ಜಿಲ್ಲೆಯ ಈ ಗ್ರಾಮಕ್ಕೆ ತೆರಳಬೇಕು ಎಂದರೆ 7 ಕಿಮೀ ನಡೆಯಲೇಬೇಕು. ಪರ್ವತಗಳಿಂದ ಸುತ್ತುವರಿದ ಗ್ರಾಮಕ್ಕೆ ಕುಡಿಯಲು ಶುದ್ಧ ನೀರಿಲ್ಲ. ರಸ್ತೆ, ಗ್ಯಾಸ್ ಮತ್ತು ವೈದ್ಯ ಸೌಲಭ್ಯ ಕೇಳಲೇಬೇಡಿ. ಯುವ ಬ್ರಿಗೇಡ್ ಇಂಥ ಗ್ರಾಮವನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದೆ.

ಕುಮಾರಾಧಾರಾ ನದಿ ಸ್ವಚ್ಛ ಮಾಡಿದ ಯುವ ಬ್ರಿಗೇಡ್

ಗ್ರಾಮದಲ್ಲಿ 150 ಮನೆಗಳಿದ್ದು 800 ಜನರಿದ್ದಾರೆ.  ಮಲೆ ಮಹದೇವಶ್ವರ ಬೆಟ್ಟಗಳ ಸಾಲಿನ ಮೊದಲಿನ ಬೆಟ್ಟ ಎಂಬ ಖ್ಯಾತಿಯೂ ಈ ಗ್ರಾಮಕ್ಕಿದೆ.  ಒಂದು ಕೆಜಿ ಅಕ್ಕಿಕೆ 15ಕಿಮೀ ಓಡಾಟ ಅನಿವಾರ್ಯ. ಈ ಗ್ರಾಮ ವಿದ್ಯುತ್  ಬೆಳಕು ಕಂಡು ಬಹಳ ದಿನ ಆಗೇ ಇಲ್ಲ. ಗ್ರಾಮಕ್ಕೆ ಮೂರನೇ ಸಾರಿ ಭೇಟಿ ನೀಡಿ ಗ್ರಾಮವನ್ನು ಕಟ್ಟುವ ಬಗ್ಗೆ ಮಾತನಾಡಿ ಬಂದಿದ್ದೇನೆ  ಎಂದು ಚಕ್ರವರ್ತಿ ಸೋಶಿಯಲ್ ಮೀಡಿಯಾ ಮುಖೇನ ತಿಳಿಸಿದ್ದಾರೆ.

ಗ್ರಾಮ ಸ್ವರ್ಗ ಸವಾಲಿಗೆ ಸೂಲಿಬೆಲೆ ಅನೇಕ ಸಂಸದರನ್ನು ಟ್ಯಾಗ್ ಮಾಡಿದ್ದಾರೆ. ಕೆಲವರು ಈಗಾಗಲೇ ಸವಾಲು ಸ್ವೀಕರಿಸಿದ್ದು ಕುಗ್ರಾಮಗಳನ್ನು ಮುನ್ನೆಲೆಗೆ ತರುವ ಎಲ್ಲರ ಪ್ರಯತ್ನ ಯಶಸ್ವಿಯಾಗಲಿ.