ಭೋಪಾಲ್‌[ಡಿ.22]: ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ 9 ತಿಂಗಳ ಗರ್ಭಿಣಿಗೆ ನೇತಾಡುವಾಗಲೇ ಹೆರಿಗೆಯಾಗಿರುವ ಮನಕಲಕುವ ಘಟನೆ ಮಧ್ಯಪ್ರದೇಶದ ಕಟನಿ ಪಟ್ಟಣದಲ್ಲಿ ನಡೆದಿದೆ. ಕೊನೆಯುಸಿರೆಳೆದ ತಾಯಿಯ ಹೊಕ್ಕಳುಬಳ್ಳಿಗೆ ಸಿಲುಕಿಕೊಂಡು ಸಂಕಷ್ಟಪಡುತ್ತಿದ್ದ ಹಸುಳೆಯನ್ನು ಪೊಲೀಸರು ಹಾಗೂ ವೈದ್ಯರು ರಕ್ಷಣೆ ಮಾಡಿದ್ದಾರೆ. ಮಗು ಬದುಕಿದೆ.

36 ವರ್ಷದ ಲಕ್ಷ್ಮೇ ಠಾಕೂರ್‌ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡವರು. ಲಕ್ಷ್ಮೇ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಸಂದೇಶ ಗುರುವಾರ ಬೆಳಗ್ಗೆ 7.13ಕ್ಕೆ ಪೊಲೀಸರಿಗೆ ರವಾನೆಯಾಯಿತು. ಆಕೆಯ ಮನೆಗೆ ದೌಡಾಯಿಸಿದ ಸಬ್‌ ಇನ್ಸ್‌ಪೆಕ್ಟರ್‌ ಕವಿತಾ ಸಾಹ್ನಿ ಅವರಿಗೆ ನೇತಾಡುತ್ತಿದ್ದ ಶವ ಕಂಡುಬಂತು. ಹತ್ತಿರಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಸಾವಿಗೆ ಶರಣಾದ ಮಹಿಳೆಯ ಸೀರೆಯೊಳಗೆ, ಆಕೆಯ ಎರಡು ಕಾಲುಗಳ ನಡುವೆ ಮಗುವೊಂದು ಪತ್ತೆಯಾಯಿತು. ಆ ಮಗು ತಾಯಿಯ ಹೊಕ್ಕಳುಬಳ್ಳಿಗೆ ಸಿಲುಕಿಕೊಂಡಿತ್ತು. ಉಸಿರಾಡುತ್ತಿತ್ತು. ಕೂಡಲೇ ವೈದ್ಯರನ್ನು ಕರೆಸಲಾಯಿತು. ಹೊಕ್ಕಳುಬಳ್ಳಿಯನ್ನು ವೈದ್ಯರು ಕತ್ತರಿಸಿದರು. ಕವಿತಾ ಅವರು ಮಗುವನ್ನು ಶುಚಿಗೊಳಿಸಿ, ಬೆಚ್ಚಗೆ ಇಟ್ಟರು. ಆಸ್ಪತ್ರೆಗೆ ದಾಖಲಿಸಿದರು. ನಂತರ ತಾಯಿಯ ಶವವನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

ಸದ್ಯ ಆ ಗಂಡು ಹಸುಗೂಸು ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದು, ಅದು ಬದುಕುತ್ತದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಎಸ್‌ಐ ಕವಿತಾ ತಿಳಿಸಿದ್ದಾರೆ. ಲಕ್ಷ್ಮೇ ಅವರಿಗೆ 16 ವರ್ಷದ ಮಗಳು ಸೇರಿ ನಾಲ್ಕು ಮಕ್ಕಳಿವೆ. ಆಕೆ ಆತ್ಮಹತ್ಯೆಗೆ ಶರಣಾಗಿದ್ದೇಕೆ ಎಂಬುದಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಬುಧವಾರ ರಾತ್ರಿ 9 ಗಂಟೆವರೆಗೆ ಟೀವಿ ನೋಡಿ, ಮಲಗಿದ್ದೆವು. ಬೆಳಗ್ಗೆ 6ಕ್ಕೆ ಎದ್ದಾಗ ಲಕ್ಷ್ಮೇ ಕಾಣಿಸಲಿಲ್ಲ. ಹುಡುಕಿದಾಗ ಆಕೆ ದನದ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡಿದ್ದಳು ಎಂದು ಪತಿ ಸಂತೋಷ್‌ ತಿಳಿಸಿದ್ದಾರೆ.