ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆ ಒಂದೇ ಸಮಯದಲ್ಲಿ ನಡೆದರೆ ಅದರಿಂದ ತಮ್ಮ ಪಕ್ಷಕ್ಕೇ ಅನುಕೂಲವಾಗಬಹುದು ಎಂಬ ಕೂಡಿ ಕಳೆಯುವ ಲೆಕ್ಕಾಚಾರವನ್ನು ಜೆಡಿಎಸ್ ವರಿಷ್ಠರು ಹಾಕುತ್ತಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
ಮುಂಬರುವ ವಿಧಾನಸಭಾ ಚುನಾವಣೆಗೆ ತಮ್ಮ ಶಕ್ತಿ ಸಾಮರ್ಥ್ಯಗಳನ್ನೆಲ್ಲ ಧಾರೆ ಎರೆದು ರಣತಂತ್ರ ರೂಪಿಸುತ್ತಿರುವ ಜೆಡಿಎಸ್ ನ ವರಿಷ್ಠ ನಾಯಕರು ಹಳೆ ಮೈಸೂರು ಭಾಗ, ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿ ತಮ್ಮ ಪ್ರಾಬಲ್ಯ ಮುಂದುವರೆಸುವ ಪ್ರಯತ್ನದಲ್ಲಿದ್ದಾರೆ. ವರಿಷ್ಠರ ತಂತ್ರದ ಒಂದು ಭಾಗ ವಾಗಿ ಪಕ್ಷದ ಮಂಡ್ಯ ಲೋಕಸಭಾ ಕ್ಷೇತ್ರದ ಸದಸ್ಯ ಸಿ.ಎಸ್.ಪುಟ್ಟರಾಜು ಅವರು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹಿಂದಿನ ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಬಹುತೇಕ ತೀರ್ಮಾನಿಸಿದ್ದಾರೆ.
ಪುಟ್ಟರಾಜು ಅವರು ಈ ಹಿಂದೆ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಲೋಕಸಭಾ ಸದಸ್ಯರಾಗಿದ್ದು ಕೊಂಡು ವಿಧಾನಸಭೆಗೆ ಸ್ಪರ್ಧಿಸಿ ಗೆದ್ದರೆ ನಂತರ ಎರಡು ಸ್ಥಾನಗಳ ಪೈಕಿ ಒಂದನ್ನು ಉಳಿಸಿಕೊಂಡು ಮತ್ತೊಂದಕ್ಕೆ ರಾಜೀನಾಮೆ ನೀಡಬಹುದು. ಆದರೆ, ಈಗಲೇ ಕೆಲವು ದಿನಗಳ ನಂತರ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಮುಂಬರುವ ವಿಧಾನಸಭಾ ಚುನಾವಣೆಯ ಜತೆಗೇ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆ ಎದುರಾಗುವಂತೆ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆ ಒಂದೇ ಸಮಯದಲ್ಲಿ ನಡೆದರೆ ಅದರಿಂದ ತಮ್ಮ ಪಕ್ಷಕ್ಕೇ ಅನುಕೂಲವಾಗಬಹುದು ಎಂಬ ಕೂಡಿ ಕಳೆಯುವ ಲೆಕ್ಕಾಚಾರವನ್ನು ಜೆಡಿಎಸ್ ವರಿಷ್ಠರು ಹಾಕುತ್ತಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
ಒಂದು ವೇಳೆ ಪುಟ್ಟರಾಜು ಅವರು ಈಗ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡದೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಲಿ ಗೆದ್ದ ನಂತರ ರಾಜೀನಾಮೆ ನೀಡಿದಲ್ಲಿ ಲೋಕಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಉಪಚುನಾವಣೆ ನಡೆಯಬೇಕಾಗುತ್ತದೆ. ಅದನ್ನು ಎದುರಿಸುವುದು ರಾಜಕೀಯ ವಾಗಿ ಮತ್ತು ಆರ್ಥಿಕವಾಗಿ ಹೊರೆಯಾಗುತ್ತದೆ. ಮೇಲಾಗಿ ಸಾರ್ವಜನಿಕರಿಂದ ಟೀಕೆಯೂ ವ್ಯಕ್ತವಾಗಬಹುದು. ಹೀಗಾಗಿ ಎರಡೂ ಒಟ್ಟಿಗೆ ನಡೆದಲ್ಲಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಇರುವುದರಿಂದ ಅನುಕೂಲವಾಗಬಹುದು ಎಂಬ ಧಾಟಿಯಲ್ಲಿ ಮಾತುಕತೆ ನಡೆದಿದೆ ಎಂದು ಗೊತ್ತಾಗಿದೆ.
ಸದ್ಯಕ್ಕೆ ರಾಜ್ಯದಲ್ಲಿ ಜೆಡಿಎಸ್ ಕೇವಲ ಇಬ್ಬರು ಲೋಕಸಭಾ ಸದಸ್ಯರನ್ನು ಹೊಂದಿದೆ. ಹಾಸನದಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ಮಂಡ್ಯದಿಂದ ಪುಟ್ಟರಾಜು. ಆದರೆ, ವಿಧಾನಸಭಾ ಚುನಾವಣೆಯತ್ತಲೇ ಹೆಚ್ಚು ಗಮನ ಕೇಂದ್ರೀಕರಿಸಿರುವ ಪಕ್ಷದ ವರಿಷ್ಠರು ಈಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ‘ರಿಸ್ಕ್’ ತೆಗೆದುಕೊಳ್ಳುವುದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಜೆಡಿಎಸ್ ಲೆಕ್ಕಾಚಾರ ಹೀಗಿದೆ: ಶತಾಯಗತಾಯ ತಮ್ಮ ವಿರುದ್ಧ ಬಂಡಾಯ ಸಾರಿ ಕಾಂಗ್ರೆಸ್‌ಗೆ ವಲಸೆ ಹೋಗಲು ಸಜ್ಜಾಗಿರುವ ನಾಗಮಂಗಲ ಕ್ಷೇತ್ರದ ಹಾಲಿ ಶಾಸಕ ಚಲುವರಾಯಸ್ವಾಮಿ ಅವರನ್ನು ಸದೆಬಡಿಯಲೇಬೇಕು ಎಂಬ ನಿರ್ಧಾರಕ್ಕೆ ಜೆಡಿಎಸ್ ವರಿಷ್ಠರು ಬಂದಿದ್ದಾರೆ.
ಇದಕ್ಕಾಗಿ ಮಾಜಿ ಶಾಸಕರಾದ ಸುರೇಶ್‌ಗೌಡ ಮತ್ತು ಎಲ್.ಆರ್.ಶಿವರಾಮೇಗೌಡ ಅವರನ್ನು ಪಕ್ಷಕ್ಕೆ ಕರೆತರಲಾಗಿದೆ. ಈ ಪೈಕಿ ಶಿವರಾಮೇಗೌಡ ಅವರಿಗೆ ಮುಂಬರುವ ಜೂನ್‌ನಲ್ಲಿ ನಡೆಯಲಿರುವ ವಿಧಾನಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ. ಅವರು ಸಿದ್ಧತೆಯಲ್ಲೂ ತೊಡಗಿದ್ದಾರೆ. ಇನ್ನು ಸುರೇಶ್‌ಗೌಡ ಅವರನ್ನು ನಾಗಮಂಗಲದಿಂದ ವಿಧಾನಸಭಾ ಚುನಾವಣೆಗೆ ಕಣಕ್ಕಿಳಿಸಬೇಕೋ ಅಥವಾ ಬೇಡವೋ ಎಂಬ ಗೊಂದಲದಲ್ಲಿ ಜೆಡಿಎಸ್ ನಾಯಕರಿದ್ದಾರೆ. ಆ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವ ವದಂತಿ ಇನ್ನೂ ಹಾಗೆಯೇ ಇದೆ. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಸುರೇಶ್‌ಗೌಡ ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸುವ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
-ವಿಜಯ್ ಮಲಿಗೆಹಾಳ, ಕನ್ನಡಪ್ರಭ
