ರಾಜ್ಯ ಶಾಸ್ತ್ರದಿಂದ ಏನು ಕಲಿತಿದ್ದೀರಿ ಎಂಬ ಪ್ರಶ್ನೆಗೆ ಈಕೆ ತಾನು ಅಡುಗೆ ಮಾಡುವುದನ್ನು ಕಲಿತೆ ಎಂದು ಉತ್ತರಿಸಿದ್ದಳು.

ಪಾಟ್ನಾ(ಅ. 10): ಬಿಹಾರದ ಪರೀಕ್ಷಾ ಅವ್ಯವಹಾರಗಳ ಇನ್ನಷ್ಟು ಕರ್ಮಕಾಂಡಗಳು ಹೊರಬರುತ್ತಿವೆ. 12ನೇ ತರಗತಿ ಪರೀಕ್ಷೆಯಲ್ಲಿ ಬಿಹಾರದ ಟಾಪ್ಪರ್ ಆದ 17 ವರ್ಷದ ರೂಬಿ ರಾಯ್ ಬರೆದಿದ್ದ ಪರೀಕ್ಷೆಯಲ್ಲಿ ಒಂದು ಅಂಕ ಬರುವ ಸಾಧ್ಯತೆಯೂ ಇರಲಿಲ್ಲವಂತೆ. ಈಕೆ ಉತ್ತರ ಪತ್ರಿಕೆಯ ಮೊದಲ ಹಾಳೆಯಲ್ಲಿ ತುಂಬಿಸಿದ್ದು ಸಿನಿಮಾಗಳ ಹೆಸರುಗಳನ್ನ. ಮತ್ತೊಂದು ಹಾಳೆಯಲ್ಲಿ ಖ್ಯಾತ ಕವಿ ತುಳಸೀದಾಸರ ಹೆಸರನ್ನ ತುಂಬಿಸಿದ್ದಳು. ಇತರ ಹಾಳೆಗಳಲ್ಲಿ ತನಗೆ ತೋಚಿದ ಕವಿತೆಗಳನ್ನ ಗೀಚಿದ್ದಳಂತೆ. ಪೊಲೀಸರು ಹೇಳುವ ಪ್ರಕಾರ, ಪರೀಕ್ಷೆ ಮುಗಿದ ಬಳಿಕ ಈಕೆಯ ಉತ್ತರ ಪತ್ರಿಕೆಗಳನ್ನು ಬದಲಾಯಿಸಲಾಯಿತು. ಇದು ಫೋರೆನ್ಸಿಕ್ ಲ್ಯಾಬ್ ಪರೀಕ್ಷೆಯಿಂದ ಸಾಬೀತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಟಿವಿ ಇಂಟರ್ವ್ಯೂ ವೇಳೆ ಸಿಕ್ಕಿಬಿದ್ದಿದ್ದಳು:
ರೂಬಿ ರಾಯ್ ರಾಜ್ಯ ಶಾಸ್ತ್ರದಲ್ಲಿ ಟಾಪ್ಪರ್ ಆಗಿ ಹೊರಹೊಮ್ಮಿದ್ದಳು. ಆಗ ಟಿವಿ ಸಂದರ್ಶನವೊಂದರಲ್ಲಿ ಈಕೆ ಯಡವಟ್ಟು ಮಾತನಾಡಿ ಸಿಕ್ಕಿಬಿದ್ದಿದ್ದಳು. ರಾಜ್ಯ ಶಾಸ್ತ್ರದಿಂದ ಏನು ಕಲಿತಿದ್ದೀರಿ ಎಂಬ ಪ್ರಶ್ನೆಗೆ ಈಕೆ ತಾನು ಅಡುಗೆ ಮಾಡುವುದನ್ನು ಕಲಿತೆ ಎಂದು ಉತ್ತರಿಸಿದ್ದಳು. ಆಗ ಇಡೀ ಹಗರಣದ ರೂಪ ಬಹಿರಂಗವಾಗತೊಡಗಿತು. ರೂಬಿ ಸೇರಿದಂತೆ 40ಕ್ಕೂ ಹೆಚ್ಚು ಜನರನ್ನು ಈ ಹಗರಣದಲ್ಲಿ ಈವರೆಗೆ ಬಂಧಿಸಲಾಗಿದೆ. ರೂಬಿಗೆ ಉತ್ತರ ಬರೆದುಕೊಟ್ಟ 'ತಜ್ಞ'ರನ್ನು ಹಿಡಿಯಲು ಪೊಲೀಸರು ಸದ್ಯ ಬಲೆ ಬೀಸಿದ್ದಾರೆ.