ಮಲಪ್ಪುರಂ[ಆ.13]: ಕಳೆದ ವರ್ಷ ಕಂಡುಕೇಳರಿಯದ ಮಳೆ, ಪ್ರವಾಹಕ್ಕೆ ತುತ್ತಾಗಿದ್ದ ಕೇರಳದಲ್ಲಿ ಈ ವರ್ಷವೂ ಮತ್ತೆ ಮಳೆ ತನ್ನ ರುದ್ರಾವತಾರ ತೋರಿದೆ. ಕಳೆದೊಂದು ವಾರದಿಂದ ಸುರಿದ ಭಾರೀ ಮಳೆ ಜನಜೀವನವನ್ನು ಪೂರ್ಣ ಅಸ್ತವ್ಯಸ್ತಗೊಳಿಸಿದೆ. ಲಕ್ಷಾಂತರ ಜನರನ್ನು ನಿರ್ವಸಿತಗೊಳಿಸಿದ್ದರೆ, 70ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. 50ಕ್ಕೂ ಹೆಚ್ಚು ಜನ ಇನ್ನೂ ನಾಪತ್ತೆಯಾಗಿದ್ದಾರೆ. ನಿಧಾನವಾಗಿ ಮಳೆ ಕಡಿಮೆಯಾಗುತ್ತಿದ್ದಂತೆ ಒಂದೊಂದು ಕರುಣಾಜನಕ ಕತೆ ಹೊರಬರುತ್ತಿವೆ. ಅದರಲ್ಲೂ ಮಲಪ್ಪುರ ಜಿಲ್ಲೆಯೊಂದರಲ್ಲಿ ಕಂಡುಬಂದ ಸಾವನ್ನಪ್ಪಿದ ತಾಯಿ ಮತ್ತು ಆಕೆಯ ಕೇವಲ 6 ತಿಂಗಳ ಮಗು ಒಬ್ಬರ ಕೈಯನ್ನು ಒಬ್ಬರು ಬಲವಾಗಿ ಹಿಡಿದುಕೊಂಡ ದೃಶ್ಯ ಎಲ್ಲರನ್ನೂ ಕಣ್ಣೀರಿಡುವಂತೆ ಮಾಡಿದೆ.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಮಲಪ್ಪುರಂ ಜಿಲ್ಲೆಯ ಕೊಟ್ಟಕುನ್ನು ಎಂಬಲ್ಲಿ ದೊರೆತ ತಾಯಿ ಹಾಗೂ ಪುಟ್ಟಮಗುವಿನ ಮೃತದೇಹಗಳು ಅನಾಹುತದ ಭೀಕರತೆಯನ್ನು ಸಾರಿ ಹೇಳುತ್ತಿದೆ. ತನ್ನ ಒಂದೂವರೆ ವರ್ಷದ ಮಗುವಿನ ಕೈ ಹಿಡಿದುಕೊಂಡು ಮಲಗಿದ್ದ ತಾಯಿಯ್ಬೊಬ್ಬಳು ಅದೇ ಸ್ಥಿತಿಯಲ್ಲೇ ಸಾವಿಗೀಡಾಗಿದ್ದಳು. ಸಾವಿನ ಬಳಿಕವೂ ಆಕೆ ತನ್ನ ಪುಟ್ಟಮಗುವಿನ ಕೈ ಹಿಡಿಕೊಂಡಿರುವ ದೃಶ್ಯ ರಕ್ಷಣಾ ತಂಡದ ಕಣ್ಣಲ್ಲೂ ನೀರು ತರಿಸಿದೆ.

ಆಗಿದ್ದೇನು?

ಗೀತು (21) ಎಂಬಾಕೆ ತನ್ನ ಒಂದೂವರೆ ವರ್ಷದ ಮಗ ಧ್ರವ್‌ ಜೊತೆ ಹಾಸಿಗೆಯಲ್ಲಿ ಮಲಗಿದ್ದ ವೇಳೆ ಶುಕ್ರವಾರ ಅನಿರೀಕ್ಷಿತ ಪ್ರವಾಹ ಅಪ್ಪಳಿಸಿ ಭೂಕುಸಿತ ಸಂಭವಿಸಿತ್ತು. ನಿದ್ದೆಯಲ್ಲಿ ಇದ್ದ ಅವರಿಗೆ ಏನಾಗತ್ತಿದೆ ಎಂದು ಗೊತ್ತಾಗುವಷ್ಟರಲ್ಲೇ ಎಲ್ಲವೂ ಮುಗಿದು ಹೋಗಿತ್ತು. ತಾಯಿ ಮತ್ತು ಮಗು ಇದ್ದ ಸ್ಥಿತಿಯಲ್ಲೇ ಸಾವನ್ನಪ್ಪಿದ್ದರು. ಅದೃಷ್ಟವಶಾತ್‌ ಆಕೆಯ ಪತಿ ಶರತ್‌ ದುರ್ಗಟನೆಯಿಂದ ಪಾರಾಗಿದ್ದಾರೆ. ಆದರೆ, ಶರತ್‌ ತಾಯಿ ಸರೋಜಿನಿ ಕೂಡ ಈ ಘಟನೆಯಲ್ಲಿ ಅಸುನೀಗಿದ್ದು, ಆಕೆಯ ಮೃತ ದೇಹವನ್ನೂ ಹೊರತೆಗೆಯಲಾಗಿದೆ. ಸುದೀರ್ಘ ಶೋಧ ಕಾರ್ಯಾಚರಣೆಯ ವೇಳೆ ತಾಯಿ ಮತ್ತು ಮಗುವಿನ ಮೃತ ದೇಹ ಪತ್ತೆಯಾಗಿದೆ.