ಮಲೇಷ್ಯಾ[ಮೇ.11]: ವ್ಯಕ್ತಿಯೊಬ್ಬರು ಮೃತಪಟ್ಟ ಬಳಿಕವೂ ಫೋಟೋಗಳಲ್ಲಿ ಕಾಣಿಸಿಕೊಂಡರೆ ನಂಬಲು ಸಾಧ್ಯವಿಲ್ಲ. ಆದರೆ ತಂತ್ರಜ್ಞಾನ ಅದೆಷ್ಟು ಮುಂದುವರೆದಿದೆ ಎಂದರೆ ನಾವು ಅಂದುಕೊಳ್ಳದನ್ನೂ ಸಾಧ್ಯವಾಗಿಸುತ್ತದೆ. ಈ ಮಾತನ್ನು ಮಲೇಷ್ಯಾದ ಫೋಟೋಗ್ರಾಫರ್ ಒಬ್ಬರು  ಸಾಬೀತುಪಡಿಸಿದ್ದಾರೆ. ಜಾರಾ ಹಲೀನಾ ಹೆಸರಿನ ಮಹಿಳಾ ಫೋಟೋಗ್ರಾಫರ್ ತನ್ನ ಕ್ಲೈಂಟ್ ಸತ್ತರೂ, ತಾನು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

ಮಲೇಷ್ಯಾದ ಆ್ಯಡ್ಲಿನಗ್ ನೆಲ್ಡಾ ಹೆಸರಿನ ಮಹಿಳೆಯೊಬ್ಬರು ಗರ್ಭಿಣಿಯಾಗಿದ್ದರು. ನಾಲ್ಕನೇ ಮಗುವಿಗೆ ತಾಯಿಯಾಗುವ ಸಂತಸದಲ್ಲಿದ್ದ ನೆಲ್ಡಾಗೆ ಮಗು ಜನಿಸಿದ ಬಳಿಕ ಫ್ಯಾಮಿಲಿ ಫೋಟೋ ಶೂಟ್ ಮಾಡಿಸಬೇಕೆಂಬ ಆಸೆ ಇತ್ತು. ಇದಕ್ಕಾಗಿ ಅವರು ಪೋಟೋಗ್ರಾಫರ್ ಜಾರಾ ಹಲೀನಾರನ್ನು ಸಂಪರ್ಕಿಸಿದರು ಹಾಗೂ ತಮ್ಮಿಚ್ಛೆಯಂತೆ ವೈದ್ಯರು ಸೂಚಿಸಿದ್ದ ಡೆಲಿವರಿ ಡೇಟ್ ಬಳಿಕ ಫೋಟೋಶೂಟ್ ಮಾಡಿಸಲು ದಿನಾಂಕ ಫಿಕ್ಸ್ ಮಾಡಿದರು.

ಛಾಯಾಗ್ರಾಹಕಿ ಜಾರಾ, ತಾಯಿಯಾಗಲಿದ್ದ ಆ್ಯಡ್ಲಿನಾ ಹಾಗೂ ಆಕೆಯ ಕುಟುಂಬ ಸದಸ್ಯರೆಲ್ಲರೂ ಈ ಫೋಟೋಶೂಟ್ ಗಾಗಿ ಬಹಳಷ್ಟು ಕಾತುರದಿಂದ ಕಾಯುತ್ತಿದ್ದರು. ದುರಾದೃಷ್ಟವಶಾತ್ ಹೆರಿಗೆ ವೇಳೆ ಆ್ಯಡ್ಲಿನಾ ಸಾವನ್ನಪ್ಪಿದ್ದರು, ಆದರೆ ಪುಟ್ಟ ಕಂದಮ್ಮ ಆರೋಗ್ಯವಂತವಾಗಿತ್ತು. ಆ್ಯಡ್ಲಿನಾ ಸಾವಿನಿಂದ ಆಕೆಯ ಕುಟುಂಬ ಸದಸ್ಯರು ಮಾತ್ರವಲ್ಲದೇ ಛಾಯಾಗ್ರಾಹಕಿ ಜಾರಾ ಕೂಡಾ ಬಹಳಷ್ಟು ದುಃಖಿತರಾಗಿದ್ದರು. ಅಲ್ಲದೇ ಆ್ಯಡ್ಲಿನಾ ಸಾವಿನಿಂದ ಆಕೆ ಕನಸಾಗಿದ್ದ ಫ್ಯಾಮಿಲಿ ಫೋಟೋಶೂಟ್ ಕೂಡಾ ಅಪೂರ್ಣಗೊಂಡಿತ್ತು.

ಆದರೆ ಜಾರಾ ಮಾತ್ರ ಕುಳಿತುಕೊಂಡು ಅಳದೆ, ಆ್ಯಡ್ಲಿನಾ ಕನಸು ನನಸಾಗಿಸುವುದು ಹೇಗೆ ಎಂದು ಯೋಚಿಸಲಾರಂಭಿಸಿದರು. ಆ್ಯಡ್ಲಿನಾ ಸಾವನ್ನಪ್ಪಿದ 5 ತಿಂಗಳಲ್ಲೇ ಫ್ಯಾಮಿಲಿ ಫೋಟೋಶೂಟ್ ಆಯೋಜಿಸಿದ ಜಾರಾ ತಂತ್ರಜ್ಞಾನವನ್ನು ಬಳಸಿ ಆ್ಯಡ್ಲಿನಾರನ್ನು ಕೂಡಾ ಈ ಫೋಟೋಗಳಲ್ಲಿ ಕಾಣುವಂತೆ ಮಾಡಿದ್ದಾರೆ.

ಸದ್ಯ ಈ ಫೋಟೋಶೂಟ್ ನಲ್ಲಿ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಘಾಉತ್ತಿವೆ. ಬಹುತೇಕ ಎಲ್ಲಾ ಛಾಯಾಗ್ರಾಹಕರು ಜಾರಾರ ಈ ಪ್ರಯತ್ನಕ್ಕೆ ಭೇಷ್ ಎಂದಿದ್ದಾರೆ.