ಮೈಸೂರು ಮೂಲದ ಮಹಿಳಾ ಪೈಲಟ್ ಆಡ್ರೆ ದೀಪಿಕಾ ಮಬೆನ್ ಹಾಗೂ ಅವರ ಪುತ್ರಿ, ಫೋಟೋಗ್ರಫಿ ವಿದ್ಯಾರ್ಥಿನಿ ಆ್ಯಮಿ ಮೆಹ್ತಾ ಅವರು ಹಗುರ ವಿಮಾನದಲ್ಲಿ ಪ್ರಪಂಚ ಸುತ್ತಲು ನಿರ್ಧರಿಸಿದ್ದಾರೆ.

ಬೆಂಗಳೂರು(ನ.30) ಮಹಿಳಾ ಸಬಲೀಕರಣ ಹಾಗೂ ವಿಮಾನಯಾನ ವಲಯಕ್ಕೆ ಹೆಚ್ಚು ಮಹಿಳೆಯರನ್ನು ಆಕರ್ಷಿಸುವ ಸಲುವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಪ್ರಪಂಚ ಪರ್ಯಟನೆಗೆ ಮೈಸೂರಿನ ತಾಯಿ ಮತ್ತು ಮಗಳು ಮುಂದಾಗಿದ್ದಾರೆ. ಮೈಸೂರು ಮೂಲದ ಮಹಿಳಾ ಪೈಲಟ್ ಆಡ್ರೆ ದೀಪಿಕಾ ಮಬೆನ್ ಹಾಗೂ ಅವರ ಪುತ್ರಿ, ಫೋಟೋಗ್ರಫಿ ವಿದ್ಯಾರ್ಥಿನಿ ಆ್ಯಮಿ ಮೆಹ್ತಾ ಅವರು ಹಗುರ ವಿಮಾನದಲ್ಲಿ ಪ್ರಪಂಚ ಸುತ್ತಲು ನಿರ್ಧರಿಸಿದ್ದಾರೆ. ಬರುವ 2018ರ ಫೆಬ್ರವರಿ ಮೊದಲ ವಾರದಲ್ಲಿ ‘ಮಾಹಿ’ ಹೆಸರಿನ ಹಗುರ ವಿಮಾನದ ಮೂಲಕ 21 ದೇಶ ಸುತ್ತುವ ಗುರಿ ಹೊಂದಿದ್ದು, ಸುಮಾರು 80 ದಿನಗಳ ಪ್ರವಾಸದಲ್ಲಿ ಭಾರತ, ಜಪಾನ್, ರಷ್ಯಾ, ಅಮೆರಿಕ, ಯುರೋಪ್ ಸುತ್ತಿ ಪಾಕಿಸ್ತಾನದ ಮಾರ್ಗವಾಗಿ ಭಾರತಕ್ಕೆ ವಾಪಸ್ ಬರಲಿದ್ದಾರೆ.

ಜಕ್ಕೂರಿನ ಸರ್ಕಾರಿ ವೈಮಾನಿಕ ತರಬೇತಿ ಕೇಂದ್ರದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ವಿಶ್ವ ಪರ್ಯಟನೆಯ ಮಾಹಿತಿ ನೀಡಿದ ದೀಪಿಕಾ ಮಬೆನ್, ಪ್ರತಿಯೊಬ್ಬ ಮಹಿಳೆಯು ಆತ್ಮಸ್ಥೈರ್ಯದಿಂದ ಬದುಕು ನಡೆಸಬೇಕು ಮತ್ತು ಯಾವುದೇ ಸಮಸ್ಯೆ ಬಂದರೂ ಸಮರ್ಥವಾಗಿ ಎದುರಿಸುತ್ತೇನೆ ಎಂಬ ಛಲ ಹೊಂದಿರಬೇಕು. ಇದನ್ನು ಸಾಬೀತುಪಡಿಸಲು ಪ್ರಪಂಚ ಸುತ್ತಲು ಮುಂದಾಗಿದ್ದು, ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಹಲವು ಸಂಸ್ಥೆಗಳು ಸಹಕಾರ ನೀಡಿವೆ ಎಂದರು. ಕಳೆದ 25 ವರ್ಷದಿಂದ ಪೈಲಟ್ ಕೆಲಸಕ್ಕೆ ಸೇರಿ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಅನುಭವ ಇದೆ. ಹಾಗೆಯೇ ನೂರಕ್ಕೂ ಅಧಿಕ ಮಕ್ಕಳಿಗೆ ವಿಮಾನಯಾನದ ತರಬೇತಿ ನೀಡುತ್ತಿದ್ದೇನೆ. ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ಸದೃಢತೆಯೇ ಮಹತ್ತರ ಯೋಜನೆಗೆ ಪ್ರೇರಣೆಯಾಗಿದೆ.

ನಿತ್ಯವೂ ತಾಲೀಮು ನಡೆಸುತ್ತಿದ್ದೇವೆ. ವಿಮಾನಯಾನದ ತಾಲೀಮಿನ ಜತೆಗೆ ಧ್ಯಾನ, ಪ್ರಾಣಾಯಾಮ ಹಾಗೂ ಯೋಗಾಭ್ಯಾಸ ಮೈಗೂಡಿಸಿಕೊಂಡಿದ್ದೇವೆ ಎಂದು ವಿವರಿಸಿದರು. ಆಯಾ ದೇಶಗಳ ಹವಾಮಾನ ಗುಣಕ್ಕೆ ಅನುಗುಣವಾಗಿ 80 ದಿನದಲ್ಲಿ 21 ದೇಶ ಸುತ್ತುವ ಯೋಜನೆ ಇದಾಗಿದೆ. ಪ್ರವಾಸಕ್ಕೆ ಅಗತ್ಯವಾದ ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿದಿನ ಸೂರ್ಯೋದಯದಿಂದ ಸೂರ್ಯಾಸ್ತದೊಳಗೆ ಪ್ರಯಾಣ ಮುಗಿಸಲಿದ್ದು, ದಿನವೊಂದಕ್ಕೆ 600ರಿಂದ 1200 ಕಿ.ಮೀ. ಸಂಚಾರ ಮಾಡಲಿದ್ದೇವೆ ಎಂದರು