ರಾಹುಲ್ ಗಾಂಧಿ ಚುನಾವಣಾ ಪ್ರಚಾರಕ್ಕೆ ಲಕ್ಷಾಂತರ ಜನ | ‘ಇಂದಿರಾ ದಾಖಲೆಯನ್ನು ಮೊಮ್ಮಗ ರಾಹುಲ್‌ ಗಾಂಧಿ ಮುರಿದಿದ್ದಾರೆ ಎನ್ನಲಾಗಿದೆ |  ನಿಜಕ್ಕೂ ರಾಹುಲ್‌ ಗಾಂಧಿ ಪಾಲ್ಗೊಂಡ ರಾರ‍ಯಲಿಯಲ್ಲಿ ಇಷ್ಟೊಂದು ಜನರು ಭಾಗವಹಿಸಿದ್ದರೇ? 

ಬೆಂಗಳೂರು (ಅ. 12): ರಾಹುಲ್‌ ಗಾಂಧಿ ಪಾಲ್ಗೊಂಡಿದ್ದ ಚುನಾವಣಾ ಪ್ರಚಾರಕ್ಕೆ ಲಕ್ಷಾಂತರ ಜನ ಸೇರಿದ್ದರು ಎಂಬ ಸಂದೇಶದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅದರೊಂದಿಗೆ ‘ಇಂದಿರಾ ಮೊಮ್ಮಗ ರಾಹುಲ್‌ ಗಾಂಧಿ ತಮ್ಮ ಅಜ್ಜಿಯ ದಾಖಲೆಯನ್ನೇ ಮುರಿದಿದ್ದಾರೆ’ ಎಂಬ ಒಕ್ಕಣೆಯನ್ನು ಬರೆಯಲಾಗಿದೆ. ಜೊತೆಗೆ ರಾಜಸ್ಥಾನದ ಬಿಕನೇರ್‌ನಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಚುನಾವಣಾ ಪ್ರಚಾರ ರಾರ‍ಯಲಿ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ರಾಹುಲ್‌ ಗಾಂದಿ ಅವರನ್ನು ಕಾಣಲು 25 ಲಕ್ಷ ಜನರು ಸೇರಿದ್ದರು ಎನ್ನಲಾಗಿದೆ.

‘ರಾಹುಲ್‌ ಗಾಂಧಿ ಫಾರ್‌ ಪಿಎಂ’ ಎಂಬ ಹೆಸರಿನ ಫೇಸ್‌ಬುಕ್‌ ಪೇಜ್‌ ಮೊದಲಿಗೆ ಇದನ್ನು ಪೋಸ್ಟ್‌ ಮಾಡಿದ್ದು ಅದು 14,000 ಬಾರಿ ಶೇರ್‌ ಆಗಿದೆ. ಬಳಿಕ ಕಾಂಗ್ರೆಸ್‌ ಬೆಂಬಲಿತ ಹಲವು ಫೇಸ್‌ಬುಕ್‌ ಪೇಜ್‌ಗಳು ಇದನ್ನು ಶೇರ್‌ ಮಾಡಿದ್ದು, ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಆದರೆ ನಿಜಕ್ಕೂ ರಾಹುಲ್‌ ಗಾಂಧಿ ಪಾಲ್ಗೊಂಡ ರಾರ‍ಯಲಿಯಲ್ಲಿ ಇಷ್ಟೊಂದು ಜನರು ಭಾಗವಹಿಸಿದ್ದರೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಈ ಫೋಟೋ 10 ನವೆಂಬರ್‌ 2013ರಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್‌ ಹೂಡಾ ಅವರು ಸೋನೆಪಾಟ್‌ನಲ್ಲಿ ಪಾಲ್ಗೊಂಡ ರಾರ‍ಯಲಿಯದ್ದು ಎಂಬುದು ಪತ್ತೆಯಾಗಿದೆ.

ಅದೇ ಫೋಟೋವನ್ನು ಬಳಸಿಕೊಂಡು ಸದ್ಯ ಇದೇ ಡಿಸೆಂಬರ್‌ 7ರಂದು ನಿಗದಿಯಾಗಿರುವ ರಾಜಸ್ಥಾನ ಚುನಾವಣೆ ಸಂಬಂಧ ರಾಹುಲ್‌ ಗಾಂಧಿ ರಾರ‍ಯಲಿ ಕೈಗೊಂಡ ಸಂದರ್ಭದಲ್ಲಿ ಲಕ್ಷಾಂತರ ಜನ ಸೇರಿದ್ದರು ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಇದೇನು ಹೊಸತಲ್ಲ, ಇತ್ತೀಚೆಗೆ ರಾಹುಲ್‌ ಗಾಂಧಿ ಅವರು ಲೋಕಸಭೆಯಲ್ಲಿ ಮಾತನಾಡಿದ್ದನ್ನು 48 ಲಕ್ಷ ಜನರು ವೀಕ್ಷಿಸಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು.

-ವೈರಲ್ ಚೆಕ್