ಹಿಂದೆ ಮುಂದೆ ಯೋಚಿಸದೆ, ಅಗತ್ಯವೇ ಇಲ್ಲದ ಸ್ಟೀಲ್ ಬ್ರಿಡ್ಜ್​ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದು ಮತ್ತು ಅದರ ವಿರುದ್ಧ ನಾಗರಿಕರೇ ತಿರುಗಿ ಬಿದ್ದಿರುವುದು ಹಳೇ ಕಥೆ. ಸರ್ಕಾರ ಹಠ ಬಿಟ್ಟಿಲ್ಲ. ಯಾರು ಏನೇ ಹೇಳಲಿ, ನಾವು ಸ್ಟೀಲ್ ಬ್ರಿಡ್ಜ್ ಮಾಡಿಯೇ ಮಾಡುತ್ತೇವೆ ಎಂದು ಹಠ ತೊಟ್ಟು ಹೊರಟಿದೆ. ಆದರೆ, ಈ ಬಾರಿ ಸರ್ಕಾರಕ್ಕೆ ಕೇವಲ ರಾಜಕೀಯ ಪಕ್ಷಗಳಿಂದಷ್ಟೇ ಅಲ್ಲ, ಸಾಮಾನ್ಯ ನಾಗರಿಕರಿಂದಲೂ ವಿರೋಧ ವ್ಯಕ್ತವಾಗಿದೆ. ಸ್ಟೀಲ್ ಬ್ರಿಡ್ಜ್ ಬೇಡ ಎಂಬ ಕೂಗು ಎಲ್ಲೆಡೆ ಮೊಳಗುತ್ತಿದೆ. ಹೀಗಾಗಿ ನಾಗರಿಕರ ಆಕ್ರೋಶ ತಣ್ಣಗಾಗಿಸಲು, ಸ್ಟೀಲ್ ಬ್ರಿಡ್ಜ್ ಬೇಕು ಎಂಬ ವಾದವನ್ನು ಬಲವಾಗಿಸಲು ಹೊಸ ತಂತ್ರವೇ ಸೃಷ್ಟಿಯಾಗಿದೆ.

ಬೆಂಗಳೂರು(ಅ.20): ಹಿಂದೆ ಮುಂದೆ ಯೋಚಿಸದೆ, ಅಗತ್ಯವೇ ಇಲ್ಲದ ಸ್ಟೀಲ್ ಬ್ರಿಡ್ಜ್​ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದು ಮತ್ತು ಅದರ ವಿರುದ್ಧ ನಾಗರಿಕರೇ ತಿರುಗಿ ಬಿದ್ದಿರುವುದು ಹಳೇ ಕಥೆ. ಸರ್ಕಾರ ಹಠ ಬಿಟ್ಟಿಲ್ಲ. ಯಾರು ಏನೇ ಹೇಳಲಿ, ನಾವು ಸ್ಟೀಲ್ ಬ್ರಿಡ್ಜ್ ಮಾಡಿಯೇ ಮಾಡುತ್ತೇವೆ ಎಂದು ಹಠ ತೊಟ್ಟು ಹೊರಟಿದೆ. ಆದರೆ, ಈ ಬಾರಿ ಸರ್ಕಾರಕ್ಕೆ ಕೇವಲ ರಾಜಕೀಯ ಪಕ್ಷಗಳಿಂದಷ್ಟೇ ಅಲ್ಲ, ಸಾಮಾನ್ಯ ನಾಗರಿಕರಿಂದಲೂ ವಿರೋಧ ವ್ಯಕ್ತವಾಗಿದೆ. ಸ್ಟೀಲ್ ಬ್ರಿಡ್ಜ್ ಬೇಡ ಎಂಬ ಕೂಗು ಎಲ್ಲೆಡೆ ಮೊಳಗುತ್ತಿದೆ. ಹೀಗಾಗಿ ನಾಗರಿಕರ ಆಕ್ರೋಶ ತಣ್ಣಗಾಗಿಸಲು, ಸ್ಟೀಲ್ ಬ್ರಿಡ್ಜ್ ಬೇಕು ಎಂಬ ವಾದವನ್ನು ಬಲವಾಗಿಸಲು ಹೊಸ ತಂತ್ರವೇ ಸೃಷ್ಟಿಯಾಗಿದೆ.

ಸ್ಟೀಲ್ ಬ್ರಿಡ್ಜ್ ಬೇಕು ನಕಲಿ ಖಾತೆಗಳು ಹೇಗೆ..?

-ಈ ಖಾತೆಗಳಲ್ಲಿ ಶೇ.60ಕ್ಕೂ ಹೆಚ್ಚು ಖಾತೆಗಳು ಹೆಣ್ಣು ಮಕ್ಕಳ ಹೆಸರಲ್ಲಿವೆ
-ಅಕೌಂಟ್​ಗೆ ಬಳಸಿರುವ ವ್ಯಕ್ತಿಗಳ ಬಗ್ಗೆ ಕಾಟಾಚಾರದ ಮಾಹಿತಿ ಇದೆ
-ಪ್ರೊಫೈಲ್ ಫೋಟೋಗಳು ಇಂಟರ್​ನೆಟ್​ನಿಂದ ಡೌನ್​ಲೋಡ್ ಮಾಡಿದ ಫೋಟೋಗಳು
-ಸ್ಟೀಲ್ ಬ್ರಿಡ್ಜ್ ಬೇಕು ಎಂಬ ಬಿಡಿಎ ಮತ್ತು ಕೆ.ಜೆ. ಜಾರ್ಜ್ ಟ್ವೀಟ್​ಗಳನ್ನಷ್ಟೇ ರೀ-ಟ್ವೀಟ್ ಮಾಡಲಾಗಿದೆ
-ಸ್ಟೀಲ್ ಬ್ರಿಡ್ಜ್ ಬೇಕು ಎಂಬ ಪೋಸ್ಟ್​ಗಳನ್ನು ಬಿಟ್ಟು, ಬೇರೆ ಪೋಸ್ಟ್​ಗಳು ಕಾಣಿಸುವುದಿಲ್ಲ
-ಹಲವು ಖಾತೆಗಳ ಹೆಸರು ಒಂದೇ ಮಾದರಿಯಲ್ಲಿವೆ
.

ಸ್ಟೀಲ್ ಬ್ರಿಡ್ಜ್ ಬೇಕು ನಕಲಿ ಖಾತೆಗಳು ಹೇಗೆ ಅನ್ನಿಸುತ್ತದೆ ಗೊತ್ತಾ..? ಈ ನಕಲಿ ಟ್ವಿಟರ್ ಖಾತೆಗಳಲ್ಲಿ ಶೇ.60ಕ್ಕೂ ಹೆಚ್ಚು ಖಾತೆಗಳು ಇರುವುದು ಹೆಣ್ಣು ಮಕ್ಕಳ ಹೆಸರಿನಲ್ಲಿ. ಆ ಖಾತೆದಾರರ ಮಾಹಿತಿಯೂ ಕೂಡಾ ಕಾಟಾಚಾರಕ್ಕೆ ಎನ್ನುವಂತಿದೆ. ಪ್ರೊಫೈಲ್ ಫೋಟೋಗಳು ಕೂಡಾ ವೊರಿಜಿನಲ್ ಅಲ್ಲ. ಇಂಟರ್​ನೆಟ್​ನಿಂದ ಡೌನ್​ಲೋಡ್ ಮಾಡಿದ ಫೋಟೋಗಳು. ಇನ್ನು ಈ ಖಾತೆಗಳಲ್ಲಿ ಸ್ಟೀಲ್ ಬ್ರಿಡ್ಜ್ ಬೇಕು ಎಂಬ ಬಿಡಿಎ ಮತ್ತು ಕೆ.ಜೆ. ಜಾರ್ಜ್ ಟ್ವೀಟ್​ಗಳನ್ನಷ್ಟೇ ರೀ-ಟ್ವೀಟ್ ಮಾಡಲಾಗಿದೆ. ಬಹುತೇಕ ಖಾತೆಗಳಲ್ಲಿ ಈ ಪೋಸ್ಟ್​ಗಳನ್ನು ಬಿಟ್ಟು ಬೇರೆ ಪೋಸ್ಟ್​ಗಳು ಕಾಣಿಸುವುದಿಲ್ಲ. ಈ ಅಕೌಂಟ್ಸ್​ ಹೋಲ್ಡರ್​ಗಳ ಹೆಸರುಗಳೂ ಅಷ್ಟೆ, ಒಂದೇ ಮಾದರಿಯಲ್ಲಿವೆ.

ಉದಾಃ ಪವಿತ್ರ-ಕೆ1, ಗಗನ-ಕೆ1, ಸಂಗೀತಾ-ಕೆ1, ಸಂಧ್ಯಾ-ಕೆ1, ಸುಚಿತ್ರ-ಕೆ1, ದೊಡ್ಡಮನೆ ಹುಡುಗ, ದೊಡ್ಡಮನೆ ಹುಡುಗಿ, ಚಿಕ್ಕಮನೆ ಹುಡುಗ ಇತ್ಯಾದಿ ಹೆಸರಿನ ಖಾತೆಗಳಿವೆ. ಕತ್ರೀನಾ, ರಾಗಿಣಿ ದ್ವಿವೇದಿ, ಶಕೀಲಾ ಹೆಸರಲ್ಲೂ ಸುಳ್ಳು ಅಕೌಂಟ್​ಗಳು ಆರಂಭವಾಗಿವೆ. ಬುಲ್​ಡಾಗ್, ಕೂಲ್ ಚಾಚಾ, ಕೂಲ್ ಗಡ್ಡಪ್ಪ ಹೆಸರಲ್ಲೂ ಟ್ವಿಟರ್​ ಖಾತೆಗಳಿವೆ. ಈ ಎಲ್ಲ ಖಾತೆಗಳಲ್ಲೂ ಇರುವುದು ಸ್ಟೀಲ್ ಬ್ರಿಡ್ಜ್ ಬೇಕು ಎಂಬ ಪೋಸ್ಟ್​ಗಳು ಮಾತ್ರ. ಬಹುತೇಕ ನಕಲಿ ಖಾತೆಗಳು ಓಪನ್ ಆಗಿರುವುದು ಆಗಸ್ಟ್ ಅಂತ್ಯದಲ್ಲಿ. 30ಕ್ಕೂ ಹೆಚ್ಚು ನಕಲಿ ಖಾತೆಗಳು ಅಕ್ಟೋಬರ್​ನಲ್ಲಿ ಓಪನ್ ಆಗಿವೆ.

ಹಾಗಾದರೆ, ಈ ನಕಲಿ ಖಾತೆಗಳನ್ನು ಮೈಂಟೇಯ್ನ್ ಮಾಡುತ್ತಿರುವುದು ಯಾರು..? ಇದ್ದಕ್ಕಿದ್ದಂತೆ ಈ ಖಾತೆಗಳು ಆರಂಭವಾಗಿದ್ದು ಏಕೆ..? ಹಠಕ್ಕೆ ಬಿದ್ದಿರುವ ಸರ್ಕಾರ, ಬಿಡಿಎ, ಜಾರ್ಜ್​ ಸಾಹೇಬರೇ ಈ ಖಾತೆಗಳ ಹಿಂದಿದ್ದಾರಾ..? ಇಂಥಹ ಅನುಮಾನಗಳು ಸೃಷ್ಟಿಯಾಗುತ್ತಿವೆ. ಆದರೆ, ನಾಗರಿಕರು ಮಾತ್ರ ಅಗತ್ಯವೇ ಇಲ್ಲದ ಸ್ಟೀಲ್ ಬ್ರಿಡ್ಜ್ ಬೇಡ ಎಂಬ ವಾದದಲ್ಲೇ ಇದ್ದಾರೆ.