ಚೆನ್ನೈ[ಡಿ.19]: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರು ನಿಧನರಾಗುವ ಮುನ್ನ 75 ದಿನಗಳ ಚಿಕಿತ್ಸೆ ನೀಡಿದ್ದಕ್ಕೆ ಅಪೋಲೋ ಆಸ್ಪತ್ರೆ 6.85 ಕೋಟಿ ರು. ಬಿಲ್ ಮಾಡಿದೆ. ಎಂಬ ಅಂಶ ಇದೀಗ ಬಯಲಾಗಿದೆ. ಈ ಪೈಕಿ 44 ಲಕ್ಷ ರೂಪಾಯಿ ತಮಿಳುನಾಡು ಆಡಳಿತಾರೂಢ ಪಕ್ಷ ಎಐಎಡಿಎಂಕೆ ಇನ್ನೂ ಬಾಕಿ ಉಳಿಸಿಕೊಂಡಿದೆ ಎಂಬ ಅಂಶವೂ ಜಯಾ ಸಾವಿನ ತನಿಖೆ ಕೈಗೊಂಡ ಆಯೋಗಕ್ಕೆ ತಿಳಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ. 

ವಿಚಿತ್ರವೆಂದರೆ, ಜಯಾ ಏನೂ ಆಹಾರ ಸೇವನೆ ಮಾಡುತ್ತಿಲ್ಲ ಎಂಬ ಹೊರತಾಗಿಯೂ, ಆಹಾರಕ್ಕಾಗಿಯೇ 1 ರು. ಕೋಟಿ ಖರ್ಚಾಗಿದೆ. ಜಯಾ ಮತ್ತು ಇತರರು ನೆಲೆಸಿದ್ದ ಕೊಠಡಿಗಳ ಬಾಡಿಗೆಗೆ 24 ಲಕ್ಷ ರು., ಹಾಗೂ ಚಿಕಿತ್ಸೆಗಾಗಿ 1.9 ಕೋಟಿ ರು. ವೆಚ್ಚವಾಗಿದೆ ಎಂದು ಬಿಲ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದು ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಆಸ್ಪತ್ರೆ, ಈ ಆಹಾರ ಕೇವಲ ಜಯಾ ಅವರಿಗಷ್ಟೇ ಪೂರೈಕೆಯಾಗಿದ್ದಲ್ಲ. ಬದಲಿಗೆ ಜಯಾ ಅವರ ಸಂಬಂಧಿಕರು, ಭದ್ರತಾ ಸಿಬ್ಬಂದಿ, ಸಚಿವರು, ಮತ್ತು ಆಸ್ಪತ್ರೆಗೆ ಭೇಟಿ ನೀಡಿದವರಿಗೆ ನೀಡಿದ ಆಹಾರ ವೆಚ್ಚವಾಗಿದೆ ಎಂದು ಹೇಳಿದೆ.