ಕೊಡಗು (ಆ. 21): ಕಂಡು ಕೇಳರಿಯದ ಪ್ರಾಕೃತಿಕ ವಿಕೋಪ ‘ದಕ್ಷಿಣದ ಕಾಶ್ಮೀರ’ ಕೊಡಗು ಜಿಲ್ಲೆಯ ಭೌಗೋಳಿಕ, ಸಾಮಾಜಿಕ ಚಿತ್ರಣವನ್ನೇ ಬದಲಾಯಿಸಿದೆ. ಅರ್ಧಕ್ಕರ್ಧ ಕೊಡಗಿನ ಜನರನ್ನು ಸಂತ್ರಸ್ತರಾಗುವಂತೆ ಮಾಡಿದೆ.

ನಿನ್ನೆಯಿದ್ದ ಮನೆ, ರಸ್ತೆ ಇವತ್ತಿಲ್ಲ. ಅಳಿದುಳಿದದ್ದು ನಾಳೆಯೂ ಇರಲಿದೆ ಎನ್ನುವ ಭರವಸೆಯೂ ಇಲ್ಲ. ಭಾರೀ ಮಳೆ, ಗುಡ್ಡ ಕುಸಿತ ಅದರ ಹಿಂದಿಂದೆ ನುಗ್ಗಿದ ವಿನಾಶಕಾರಿ ಪ್ರವಾಹ ಈ ಪುಟ್ಟ ಜಿಲ್ಲೆಯ 10 ಕ್ಕೂ ಅಧಿಕ ಗ್ರಾಮಗಳನ್ನು ಭೂಪಟದಲ್ಲೇ ಅಳಿಸಿ ಹಾಕಿದೆ. ಬೆಟ್ಟಗುಡ್ಡಗಳ ಚಿತ್ರಣವೇ ಬದಲಾಗಿದೆ. ಒಟ್ಟಾರೆಯಾಗಿ ನೋಡಿದರೆ ಜಿಲ್ಲೆಯ ಪಶ್ಚಿಮ ಹಾಗೂ ನೈಋತ್ಯ ಭಾಗದ ಪ್ರದೇಶಗಳಿಗೆ ಈ ಪ್ರಾಕೃತಿಕ ವಿಕೋಪದಿಂದ ಹೆಚ್ಚು ಹಾನಿಯಾಗಿದೆ.

ಮಡಿಕೇರಿ ತಾಲೂಕು ಹಾಗೂ ಸುತ್ತಮುತ್ತಲ ಮುಕ್ಕೊಡ್ಲು, ಮಕ್ಕಂದೂರು, ದೇವಸ್ತೂರು, ಕಾಲೂರು, ಗಾಳಿಬೀಡು, ಮೊಣ್ಣಂಗೇರಿ, ಜೋಡುಪಾಲ, ಸಂಪಾಜೆ, ಮದೆನಾಡು, ಕಾಟಕೇರಿ ಸೇರಿ ಬೆಟ್ಟ ಶ್ರೇಣಿಗಳ 20 ಕ್ಕೂ ಅಧಿಕ ಗ್ರಾಮಗಳು ಸರಿಪಡಿಸಲಾಗದಷ್ಟು ಹಾನಿಗೊಳಗಾಗಿವೆ.

12 ಮಂದಿ ಸಾವು?:

ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಮನೆಗಳು ಸಂಪೂರ್ಣ ಹಾನಿಗೊಳಗಾಗಿದೆ. ಸಾವಿರಕ್ಕೂ ಅಧಿಕ ಮನೆಗಳು ಯಾವ ಕ್ಷಣದಲ್ಲಾದರೂ ಕುಸಿದು ಬೀಳುವ ಆತಂಕವಿದೆ. ಗುಡ್ಡ ಕುಸಿತ ಮತ್ತು ಪ್ರವಾಹ 150 ಕ್ಕೂ ಅಧಿಕ ಕಿ.ಮೀ ರಸ್ತೆಯನ್ನು ಆಹುತಿ ತೆಗೆದುಕೊಂಡಿದೆ. ಗ್ರಾಮ ಗ್ರಾಮಗಳ ನಡುವೆ ರಸ್ತೆ ಸಂಪರ್ಕವೇ ಕಡಿತಗೊಂಡಿದೆ. 60 ಕ್ಕೂ ಅಧಿಕ ಸೇತುವೆಗಳು, 278 ಸರ್ಕಾರಿ ಕಟ್ಟಡ, 4 ಸಾವಿರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಸಮವಾಗಿದೆ. ಜಿಲ್ಲೆಯಲ್ಲಿ ಮಹಾ ಮಳೆಗೆ ಅಂದಾಜು 12 ಮಂದಿ ಮೃತಪಟ್ಟಿರುವುದಾಗಿ ಸರ್ಕಾರವೇ ಹೇಳಿದೆ. 

ಆದರೆ, ಗುಡ್ಡಗಾಡಿನ ಅನೇಕ ಜನವಸತಿ ಪ್ರದೇಶದಲ್ಲಿ ಇನ್ನೂ ರಕ್ಷಣಾ ಕಾರ್ಯಕರ್ತರು ತಲುಪಿಲ್ಲ. ಅಲ್ಲಿಯ ಜನರ ಸ್ಥಿತಿ ಏನಾಗಿದೆ, ಎಷ್ಟು ಹಾನಿಯಾಗಿದೆ ಎನ್ನುವ ಚಿತ್ರ ಜಿಲ್ಲಾಡಳಿತದ ಬಳಿಯೂ ಇಲ್ಲ. ರಾತ್ರೋರಾತ್ರಿ ಬೀದಿಪಾಲು: ಕೋಟಿ ಕೋಟಿ ಆಸ್ತಿ ಹೊಂದಿದ್ದ ಶ್ರೀಮಂತರು ಕೂಡ ರಾತ್ರಿ ಬೆಳಗಾಗುವುದರೊಳಗಾಗಿ ನಿರಾಶ್ರಿತ ಕೇಂದ್ರಗಳಲ್ಲಿ ಸಂತ್ರಸ್ತರಾಗಿ ದಿನ ಕಳೆಯುತ್ತಿದ್ದಾರೆ.

ಪ್ರೀತಿಯಿಂದ ಸಾಕಿದ ಸಾಕು ಪ್ರಾಣಿಗಳನ್ನು ಕೇಳುವವರೇ ಇಲ್ಲ ಎನ್ನುವ ಸ್ಥಿತಿ ಇದೆ. ಅನೇಕವು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಅಳಿದುಳಿದವು ಅಲ್ಲಲ್ಲಿ ಅನಾಥವಾಗಿ ಓಡಿಕೊಂಡಿವೆ.  5 ಸಾವಿರ ಮಂದಿಗೆ ಬೇಕು ಮನೆ: ಮನೆ, ಮಠ ಎಲ್ಲ
ವನ್ನೂ ಕಳೆದುಕೊಂಡು ಉಟ್ಟ ಬಟ್ಟೆಯಲ್ಲೇ ತಮ್ಮ  ಸ್ಥಳದಿಂದ ಬರಿಗೈನಲ್ಲಿ ಬಂದು ನಿರಾಶ್ರಿತರ ಕೇಂದ್ರದಲ್ಲಿ ತಂಗಿರುವ ಸಂತ್ರಸ್ತರ ಮುಂದಿನ ಬದುಕು ಸವಾಲಿನದ್ದಾಗಿರಲಿದೆ. ಸುಮಾರು 5 ಸಾವಿರ ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಡುವುದು ಸುಲಭವೇನಲ್ಲ. ಮಡಿಕೇರಿಯಲ್ಲಿ ಸರ್ಕಾರಿ ಜಾಗದ ಕೊರತೆಯೂ ಕಾಡುತ್ತಿದೆ. ಇದರಿಂದ ಮನೆ ನಿರ್ಮಾಣ ಹಾಗೂ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಡುವುದು ಸದ್ಯದ ಮಟ್ಟಿಗೆ ಸವಾಲೇ ಸರಿ.

ಸೇನಾ ತಂಡ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಈಗಾಗಲೇ ಸಾವಿರಾರು ಮಂದಿಯನ್ನು ರಕ್ಷಿಸಿ ನಿರಾಶ್ರಿತರ ಕೇಂದ್ರಕ್ಕೆ ತಲುಪಿಸಿದ್ದಾರೆ. ಜೀವಉಳಿಸಿಕೊಂಡವರು ಸದ್ಯ ಜಿಲ್ಲೆಯ 43 ನಿರಾಶ್ರಿತರ ಕೇಂದ್ರದಲ್ಲಿ ತಂಗಿ ಹೇಗೋ ಜೀವನ ಸಾಗಿಸುತ್ತಿದ್ದಾರೆ. ಮಳೆ ಕೂಡ ಬಿಡುವು ನೀಡದೆ ಸುರಿಯುತ್ತಿದೆ. ಆದರೆ, ನಾಳೆ ಏನು ಎನ್ನುವ ಚಿಂತೆ ಜನರನ್ನು ಕಾಡುತ್ತಿದೆ