ರಾಷ್ಟ್ರೀಯ ಹೆದ್ದಾರಿಗಿಂತ ಜಿಲ್ಲೆಯ ಗ್ರಾಮೀಣ ರಸ್ತೆಗಳಲ್ಲೇ ಹೆಚ್ಚಿನ ಸಂಖ್ಯೆಯ ಅಪಘಾತಗಳು ನಡೆಯುತ್ತಿದ್ದು, ಸಾವು ನೋವಿನ ಸಂಖ್ಯೆಯೂ ಅಧಿಕವಾಗಿದೆ. 2015ರ ಜನವರಿಯಿಂದ ಕಳೆದ ಜುಲೈ ತಿಂಗಳ ವರೆಗಿನ ಅಂಕಿ-ಸಂಖ್ಯೆಗಳನ್ನು ಪರಿಗಣಿಸಿದಾಗ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಗಳಲ್ಲಿ ಅಪಘಾತಗಳು ಹೆಚ್ಚಾಗಿ ನಡೆಯುತ್ತಿವೆ.

ಹಾವೇರಿ (ನ.26): ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿರುವುದರಿಂದ ಅಪಘಾತಗಳು ಮಾಮೂಲಿ. ಆದರೆ, ರಾಷ್ಟ್ರೀಯ ಹೆದ್ದಾರಿಗಿಂತ ಜಿಲ್ಲೆಯ ಗ್ರಾಮೀಣ ರಸ್ತೆಗಳಲ್ಲೇ ಹೆಚ್ಚಿನ ಸಂಖ್ಯೆಯ ಅಪಘಾತಗಳು ನಡೆಯುತ್ತಿದ್ದು, ಸಾವು ನೋವಿನ ಸಂಖ್ಯೆಯೂ ಅಧಿಕವಾಗಿದೆ. 2015ರ ಜನವರಿಯಿಂದ ಕಳೆದ ಜುಲೈ ತಿಂಗಳವರೆಗಿನ ಅಂಕಿ-ಸಂಖ್ಯೆಗಳನ್ನು ಪರಿಗಣಿಸಿದಾಗ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಗಳಲ್ಲಿ ಅಪಘಾತಗಳು ಹೆಚ್ಚಾಗಿ ನಡೆಯುತ್ತಿವೆ. ಎರಡೂವರೆ ವರ್ಷಗಳಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಅವಧಿಯಲ್ಲಿ 214 ಜನ ಮೃತಪಟ್ಟಿದ್ದರೆ, ರಾಜ್ಯ ಮತ್ತು ಗ್ರಾಮೀಣ ರಸ್ತೆಗಳಲ್ಲಿ ನಡೆದ ಅಪಘಾತಗಳಲ್ಲಿ ಬರೋಬ್ಬರಿ 440 ಪ್ರಾಣ ಕಳೆದುಕೊಂಡಿದ್ದಾರೆ.

638 ಜನ ಸಾವು: ಅವೈಜ್ಞಾನಿಕ ರಸ್ತೆ, ರಸ್ತೆ ಮಧ್ಯೆ ತಗ್ಗು ಗುಂಡಿ, ವಾಹನ ಸವಾರರ ನಿಷ್ಕಾಳಜಿ, ಅತಿವೇಗದ ಚಾಲನೆ ಹೀಗೆ ವಿವಿಧ ಕಾರಣಗಳಿಂದ ಜಿಲ್ಲೆಯಲ್ಲಿ ನಿತ್ಯವೂ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿವೆ. 2015 ರಿಂದ ಈಚೆಗೆ ರಸ್ತೆ ಅಪಘಾತದಲ್ಲಿ 638 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ 214 ಜನರು ಮೃತಪಟ್ಟಿದ್ದರೆ, ರಾಜ್ಯ ಹೆದ್ದಾರಿಯಲ್ಲಿ 171 ಜನರು ಸತ್ತಿದ್ದಾರೆ. ಇನ್ನು ಗ್ರಾಮೀಣ ರಸ್ತೆಗಳಲ್ಲಿ 259 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಗಾಯಗೊಂಡವರು 4 ಸಾವಿರಕ್ಕೂ ಅಧಿಕ: ಇನ್ನು ಜಿಲ್ಲೆಯ ರಸ್ತೆಯಲ್ಲಿ ನಡೆದ ಅಪಘಾತಗಳಲ್ಲಿ ಗಾಯಗೊಂಡವರ ಸಂಖ್ಯೆ 4 ಸಾವಿರಕ್ಕೂ ಅಧಿಕ. ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆ ಸೇರುತ್ತಿದ್ದಾರೆ.2015ರಲ್ಲಿ 1523 ಜನ ಗಾಯಗೊಂಡಿದ್ದರೆ, 2016ರಲ್ಲಿ 1647 ಜನ ಗಾಯಗೊಂಡಿದ್ದಾರೆ. ಇನ್ನು 2017ರ ಜುಲೈ ಅಂತ್ಯದವರೆಗೆ 769 ಜನರು ಗಾಯಗೊಂಡಿದ್ದಾರೆ. ಇದರಲ್ಲಿ ಗ್ರಾಮೀಣ ರಸ್ತೆಗಳಲ್ಲಿ ಬಿದ್ದು ಗಾಯಗೊಂಡವರೇ 1800ಕ್ಕೂ ಹೆಚ್ಚು ಜನರಿದ್ದಾರೆ.

ರಸ್ತೆ ದುಸ್ಥಿತಿಯೇ ಕಾರಣ: ರಾಷ್ಟ್ರೀಯ ಹೆದ್ದಾರಿ- 4 ಅಕ್ಷರಶಃ ಮರಣಕೂಪವಾಗಿ ಪರಿಣಮಿಸಿದೆ. ಜಿಲ್ಲೆ ವ್ಯಾಪ್ತಿಯ ಶಿಗ್ಗಾಂವಿ ತಾಲೂಕಿನ ತಡಸದಿಂದ ರಾಣಿಬೆನ್ನೂರು ತಾಲೂಕಿನ ಕುಮಾರಪಟ್ಟಣದ ವರೆಗೆ 103 ಕಿಲೋ ಮೀಟರ್ ವರೆಗೆ ಜಿಲ್ಲೆಯಲ್ಲಿ ಹಾದುಹೋಗಿರುವ ಎನ್‌'ಎಚ್ 4ರಲ್ಲಿ ಆಗಾಗ ಅಪಘಾತ ಸಂಭವಿಸುತ್ತಲೇ ಇರುತ್ತವೆ. ಅವೈಜ್ಞಾನಿಕ ಸರ್ವೀಸ್ ರಸ್ತೆ, ಹೆದ್ದಾರಿ ಮಧ್ಯೆ ಗುಂಡಿ ಬಿದ್ದಿರುವುದು, ಅತಿ ವೇಗದ ಚಾಲನೆ ಸೇರಿದಂತೆ ಹಲವು ಕಾರಣಗಳಿಂದ ಜಿಲ್ಲೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿ ನಿತ್ಯವೂ ಸಾವು-ನೋವು ಉಂಟಾಗುತ್ತಿದೆ. ಕಳೆದ ಒಂದು ವರ್ಷದಿಂದೀಚೆಗೆ ರಸ್ತೆ ಸಂಪೂರ್ಣ ಹಾಳಾಗಿದ್ದು, ಎಲ್ಲೆಡೆ ಗುಂಡಿ ಬಿದ್ದಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಬಂಕಾಪುರ ಹಾಗೂ ಚಳಗೇರಿ ಬಳಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸಂಚರಿಸುವ ವಾಹನಗಳಿಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ಮೂಲಸೌಲಭ್ಯ ಕಲ್ಪಿಸದ್ದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಹೆದ್ದಾರಿ ಮಧ್ಯೆ ಹಂಪ್ಸ್ ನಿರ್ಮಾಣ, ಅವೈಜ್ಞಾನಿಕ ಸರ್ವೀಸ್ ರಸ್ತೆಯಿಂದಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಸ್ತೆ ವಿಭಜಕದ ಮಧ್ಯೆ ಗಿಡ ಬೆಳೆಸದೇ ಇರುವುದರಿಂದ ಎದುರುಗಡೆಯಿಂದ ಬರುವ ವಾಹನಗಳ ಹೆಡ್‌'ಲೈಟ್‌ನ ಬೆಳಕು ಕಣ್ಣಿಗೆ ಕುಕ್ಕುತ್ತದೆ. ಸದ್ಯ ಚತುಷ್ಪಥ ಹೆದ್ದಾರಿಯಾಗಿರುವ ಇದನ್ನು ಶೀಘ್ರದಲ್ಲಿ ಷಟ್ಪಥ ಮಾಡುವ ಕಾರ್ಯ ಆಗಲಿದೆ.

ಈ ಕಾರ್ಯ ಜಿಲ್ಲೆಯಲ್ಲಿ ಇನ್ನೂ ಆರಂಭವಾಗಿಲ್ಲ. ಇದೇ ಕಾರಣ ಹೇಳುತ್ತ ಕಾಲಕಳೆಯಲಾಗುತ್ತಿದ್ದು, ಹೆದ್ದಾರಿ ತುಂಬ ಗುಂಡಿ, ಉಬ್ಬುತಗ್ಗು ಬಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಸರ್ವೀಸ್ ರಸ್ತೆ ಇದ್ದೂ ಇಲ್ಲದಂತಾಗಿದೆ. ಬಹುತೇಕ ಎಲ್ಲ ಸರ್ವೀಸ್ ರಸ್ತೆಗಳು ಹಾಳಾಗಿದ್ದರೂ ಒಮ್ಮೆಯೂ ದುರಸ್ತಿ ಮಾಡುವ ಕಾರ್ಯ ಆಗಿಲ್ಲ. ಇನ್ನೂ ಅನೇಕ ಕಡೆಗಳಲ್ಲಿ ಅಂಡರ್ ಪಾಸ್, ಫ್ಲೈ ಓವರ್‌'ಗಳ ಅಗತ್ಯವಿದ್ದು, ಸ್ಥಳೀಯರು ರಸ್ತೆ ದಾಟುವಾಗ ವೇಗವಾಗಿ ಬರುವ ವಾಹನಗಳಿಗೆ ಬಲಿಯಾಗುತ್ತಿದ್ದಾರೆ. ಗ್ರಾಮೀಣ ರಸ್ತೆಗಳಂತೂ ದುಸ್ಥಿತಿಗೆ ತಲುಪಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಸವಾರರೇ ಅಪಘಾತಕ್ಕೊಳಗಾಗುತ್ತಿದ್ದಾರೆ. ಬಹುತೇಕ ಎಲ್ಲ ಹಳ್ಳಿ ರಸ್ತೆಗಳು ಹೊಂಡದಿಂದ ಕೂಡಿದ್ದು, ಅಪಘಾತ ಸಾಮಾನ್ಯ ಎಂಬಂತಾಗಿದೆ. ಅಪಘಾತ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕಿದೆ.

ವರದಿ : ನಾರಾಯಣ ಹೆಗಡೆ- ಕನ್ನಡಪ್ರಭ