ಹೊಸನಗರ: ಶರಾವತಿ ನದಿ ನೀರು ಉಳಿಸಿ ಅಭಿಯಾನದ ಮೋಟಾರ್‌ ಬೈಕ್‌ ರ‍್ಯಾಲಿಯನ್ನು ಸಮೀಪದ ಶರಾವತಿ ನದಿ ಸೇತುವೆ ಸಮೀಪದಲ್ಲಿ ಮೂಲೆಗದ್ದೆ ಮಠದ ಚನ್ನಬಸವ ಸ್ವಾಮೀಜಿ, ನಾರಾಯಣಗುರು ಮಠದ ರೇಣುಕಾನಂದ ಸ್ವಾಮೀಜಿ ಉದ್ಘಾಟಿಸಿದರು. ಜಡಿ ಮಳೆಯಲ್ಲಿಯೂ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ತನಕ ನಡೆದ ಬೈಕ್‌ ರ‍್ಯಾಲಿಯಲಿಯಲ್ಲಿ ಇಬ್ಬರು ಶ್ರೀಗಳು ಸಹಪ್ರಯಾಣಿಕರಾಗಿ ಸುಮಾರು 70 ಕಿ.ಮೀ ಪ್ರಯಾಣಿಸಿದ್ದಾರೆ.

ತಾಲೂಕಿನ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಬರುವ ಗ್ರಾಮಸ್ಥರು, ಎಲ್ಲಾ ಶಾಲೆ, ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನಾ ರ‍್ಯಾಲಿಯನ್ನು ಸ್ವಾಗತಿಸಿದರು. ರ‍್ಯಾಲಿಯಲ್ಲಿ ಶರಾವತಿ ಉಳಿಸಿ ಅಭಿಯಾನದ ಸಂಘಟಕರು, ವಿವಿಧ ಸಂಘಟನೆಯ ಸದಸ್ಯರು, ಸ್ತ್ರೀಶಕ್ತಿ, ಸ್ವ ಸಹಾಯ ಸಂಘದ ಸದಸ್ಯರು, ಯುವಕರು, ಮಹಿಳೆಯರು, ಜನಪ್ರತಿನಿಧಿಗಳೂ ಭಾಗವಹಿಸಿದ್ದರು. ಮೂಲೆಗದ್ದೆ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, 'ಬಂದ್‌ ಕರೆಗೆ ಎಲ್ಲರೂ ಸಹಕರಿಸಬೇಕು' ಎಂದು ಮನವಿ ಮಾಡಿದರು. ನಿಟ್ಟೂರು ನಾರಾಯಣಗುರು ಮಠದ ರೇಣುಕಾನಂದ ಶ್ರೀ ಮಾತನಾಡಿ, 'ನಮ್ಮ ನದಿಯ ಉಳಿವಿಗಾಗಿ ಇದೊಂದು ಪಕ್ಷಾತೀತ ಹೋರಾಟ' ಎಂದರು.