Asianet Suvarna News Asianet Suvarna News

ಕೊರತೆಯಾಗುತ್ತಿದೆ ಮಳೆ: ಇನ್ನಷ್ಟು ಕಾಡಲಿದೆ ಬರದ ಬರೆ

ಜೂನ್‌ನಲ್ಲಿ ಉತ್ತಮ ಮಳೆಯಾಗಿದ್ದರೂ ಕೂಡ ಉತ್ತರ ಒಳನಾಡಿನ 10 ಜಿಲ್ಲೆ ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ ಕೊರತೆ ಕಾಡುತ್ತಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಮಾಣದಲ್ಲಿ ಮಳೆ ಕೊರತೆ ಕಾಡುವ ಸಾಧ್ಯತೆಯು ಹೆಚ್ಚಿದೆ.

Monsoon Reduces drought Situation in 13 districts
Author
Bengaluru, First Published Aug 8, 2018, 9:18 AM IST

ಬೆಂಗಳೂರು : ಜೂನ್‌ನಲ್ಲಿ ಮುಂಗಾರು ಮಾರುತಗಳು ಉತ್ತಮ ಮಳೆ ಸುರಿಸಿದ ಹೊರತಾಗಿಯೂ ಪ್ರಸ್ತುತ ಉತ್ತರ ಒಳನಾಡಿನ 10 ಜಿಲ್ಲೆ ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ ಕೊರತೆ ಕಾಡುತ್ತಿದೆ. ಆಗಸ್ಟ್ ಹಾಗೂ ಸೆಪ್ಟೆಂಬರ್ ವೇಳೆಗೆ ಮತ್ತಷ್ಟು ಕೊರತೆ ಉಂಟಾಗುವ ಮುನ್ಸೂಚನೆ ಇದೆ. ಈ ನಿಟ್ಟಿನಲ್ಲಿ ರೈತರಿಗೆ ಪರ್ಯಾಯ ಬೆಳೆಗಳನ್ನು ಬೆಳೆಯುವ ಬಗ್ಗೆ ಸಲಹೆ ನೀಡಲು, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಲು ಕ್ರಮ ಕೈಕೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟಾರೆ ಶೇ. 3 ರಷ್ಟು ಮಳೆ ಕೊರತೆ ಉಂಟಾಗದೆ. ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ರೈತರಿಗೆ ಕಡಿಮೆ ನೀರಿನಿಂದ ಬೆಳೆಯುವ ಪರ್ಯಾಯ ಬೆಳೆಗಳ ಬಗ್ಗೆ ಸಲಹೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಕೃಷಿ ಇಲಾಖೆಯು ಅಗತ್ಯ ಯೋಜನೆ ಸಿದ್ಧಪಡಿಸಿ ಜಾರಿ ಮಾಡಲಿದೆ. ಈ ಮೂಲಕ ಸಂಭವನೀಯ ಬೆಳೆ ನಷ್ಟವನ್ನು ಗಮನಾರ್ಹವಾಗಿ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಜತೆಗೆ 13 ಜಿಲ್ಲೆಗಳಲ್ಲಿ ಉಂಟಾಗಿರುವ ಮಳೆ ಕೊರತೆಯಿಂದ ಬೇಸಿಗೆ ಕಾಲದಲ್ಲಿ ಉಂಟಾಗಲಿರುವ ಬರ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಅಗತ್ಯ ಮೇವು ವ್ಯವಸ್ಥೆ ಮಾಡಲಾಗುತ್ತಿದೆ. ಮುಂಗಾರಿನ ಅಬ್ಬರದಿಂದಾಗಿ ವಾಡಿಕೆ ಯಂತೆ ಶೇ. 99 ರಷ್ಟು ಮಂದಿ ಬಿತ್ತನೆ ಮಾಡಿದ್ದರು. ಪ್ರಸ್ತುತ ಇಂತಹ 2 ಲಕ್ಷ ಹೆಕ್ಟೇರ್ ಬೆಳೆಗಳು ಒಣಗುತ್ತಿದ್ದು, ಇವು ಗಳಿಗೆ ಪರಿಹಾರ ನೀಡುವ ಬಗ್ಗೆಯೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. 

ರಾಜ್ಯದಲ್ಲಿ ಪ್ರಾಂತ್ಯವಾರು ಮಳೆ ಹಂಚಿಕೆ ಗಮನಿಸಿದರೆ, 2018 ರ ಜುಲೈನಲ್ಲಿ ದಕ್ಷಿಣ ಒಳನಾಡಿನಲ್ಲಿ ಶೇ. 27 ಹಾಗೂ ಉತ್ತರ ಒಳನಾಡಿನಲ್ಲಿ ಶೇ.44ರಷ್ಟು ಮಳೆ ಕೊರತೆ ಉಂಟಾಗಿದೆ. 13 ಜಿಲ್ಲೆಗಳಲ್ಲಿ ಪರ್ಯಾಯ ಬೆಳೆ, ಬೀಜ ಸಂಗ್ರಹಣೆ, ಗೊಬ್ಬರ ಹಾಗೂ ಔಷಧಗಳ ಸಂಗ್ರಹಣೆ ಮಾಡಲಾಗಿದೆ. ಪ್ರತಿ ವಾರ ಕಂದಾಯ, ಕೃಷಿ, ಗ್ರಾಮೀಣ ಇಲಾಖೆಗಳೊಂದಿಗೆ ಜಿಲ್ಲಾಧಿಕಾರಿಗಳು ವಿಡಿಯೋ ಸಂವಾದ ನಡೆಸುತ್ತಾರೆ. ಜತೆಗೆ ತಾತ್ಕಾಲಿಕವಾಗಿ 13 ಜಿಲ್ಲೆಗಳ ೧೮೪ ಹಳ್ಳಿಗಳಿಗೆ 275 ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪೂರೈಕೆ ಮಾಡುತ್ತಿದ್ದೇವೆ. 221 ಕೋಟಿ ರು.ಗಳನ್ನು 30 ಜಿಲ್ಲೆಗಳ ಡಿಸಿ ನಿಧಿಯಲ್ಲಿ ಇಟ್ಟಿದ್ದೇವೆ ಎಂದರು. 

ವಾರಕ್ಕೊಮ್ಮೆ ಪರಿಶೀಲನಾ ಸಭೆ: ನೈಋತ್ಯ ಮುಂಗಾರು ಮಳೆ 2018 ರ ಜೂನ್ ೮ರ ಹೊತ್ತಿಗೆ ರಾಜ್ಯಾದ್ಯಂತ ವ್ಯಾಪಿಸಿತು. ಜೂನ್ 10ರ ಹೊತ್ತಿಗೆ ರಾಜ್ಯದ ಶೇ.93ರಷ್ಟು ಪ್ರದೇಶವನ್ನು ಆವರಿಸಿದ ಮುಂಗಾರು ಮಳೆಯು ತೀವ್ರವಾಗಿ ಸುರಿಯತೊಡಗಿತು. ನಂತರ ರಾಜ್ಯದ ಘಟ್ಟ ಪ್ರದೇಶ ಮತ್ತು ಕರಾವಳಿ ಭಾಗಗಳಲ್ಲಿ ಮುಂಗಾರು ಮಳೆ ಅಬ್ಬರದಿಂದ ಮುಂದುವರೆಯಿತು. ಇದರ ಫಲವಾಗಿ ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ಎಲ್ಲಾ ಪ್ರಮುಖ ಅಣೆಕಟ್ಟುಗಳು ಭರ್ತಿಯಾಗಿವೆ.

ಆದರೆ, ಉತ್ತರ ಒಳನಾಡಿನ 10 ಜಿಲ್ಲೆ ಸೇರಿದಂತೆ  13 ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಹೀಗಾಗಿ ರಾಜ್ಯದಲ್ಲಿ ಒಟ್ಟಾರೆ ಶೇ. 3ರಷ್ಟು ಮಳೆ ಕೊರತೆ ಉಂಟಾಗಿದೆ. ರಾಜ್ಯದ ಅಭಿವೃದ್ಧಿ ಆಯುಕ್ತರ ಅಧ್ಯ ಕ್ಷತೆ ಯಲ್ಲಿ ರಚಿಸಿರುವ ಹವಾಮಾನ ವೀಕ್ಷಣೆ ಸಮಿತಿಯು ರಾಜ್ಯದಲ್ಲಿ ಕಂಡು ಬರುತ್ತಿರುವ ಬರ ಪರಿ ಸ್ಥಿತಿ ಬಗ್ಗೆ ಸಂಬಂಧಿತ ಇಲಾಖೆಗಳೊಂದಿಗೆ ವಾರಕ್ಕೊಮ್ಮೆ ಪರಿಶೀಲನಾ ಸಭೆ ನಡೆಸುತ್ತಿದೆ ಎಂದರು.

Follow Us:
Download App:
  • android
  • ios